ಆಹುತಿ

ಆಹುತಿ

Regular price
$4.99
Sale price
$4.99
Regular price
Sold out
Unit price
per 
Shipping does not apply

ಲೇಖಕರು: ಅನುಷ್ ಎ ಶೆಟ್ಟಿ

 

ಪ್ರಕಾಶಕರು: ಅನುಗ್ರಹ ಪ್ರಕಾಶನ

Publisher: Anugraha Prakashana

ಕಾಡಿನ ಕೌತುಕವೇ ಒಂದು ಸೋಜಿಗ. ಆ ಸೋಜಿಗವ ಓದುಗರ ಕಣ್ಣ ಮುಂದಿಡುತ್ತಿದ್ದ ತೇಜಸ್ವಿಯವರು ಮತ್ತೊಂದು ಸೋಜಿಗ. ಅವರೊಂದಿಗಿನ ಒಡನಾಟದಲ್ಲಿ ನಾವು ಯಾವುದೋ ದೂರ ದೇಶದ ಹಕ್ಕಿ ಮೇ ತಿಂಗಳಾದರೂ ಮೂಡಿಗೆರೆಗೆ ಬರದೆ ಕಾದು ಕೂರುತ್ತಿದ್ದದ್ದು ನೆನಪಾಗುತ್ತಿದೆ. ಅನುಷ್‌ಗಿರುವ ಇಂತಹದೇ ಕಾಡಿನ ಕೌತುಕ ಮತ್ತು ಪರಿಸರದ ಪ್ರೀತಿ ಅವನನ್ನು ಈ ಕಾದಂಬರಿ ಬರೆಯುವಂತೆ ಮಾಡಿದೆ. ಕಾದಂಬರಿಯ ಪ್ರತಿ ಸಾಲಿನಲ್ಲೂ ನಾವದನ್ನು ಕಾಣಬಹುದು. ಈ ಪ್ರೀತಿಯನ್ನು ಅವನು ಸದಾ ಕಾಪಿಟ್ಟುಕೊಳ್ಳಲಿ ಮತ್ತು
ಬರೆಯುತ್ತಲೇ ಇರಲಿ ಎಂದು ಆಶಿಸುತ್ತೇವೆ.


ಕೃಪಾಕರ್-ಸೇನಾನಿ
ಗ್ರೀನ್ ಆಸ್ಕರ್ ಪುರಸ್ಕೃತರು 

ಮನುಷ್ಯನೂ ಪ್ರಕೃತಿಯ ಒಂದು ಭಾಗ. ನಾವು ಪ್ರಕೃತಿಯನ್ನು ಹಾಳುಮಾಡಲು ಹೋದಷ್ಟೂ ನಾವೇ ಹಾಳಾಗುತ್ತೇವೆ. ಇತ್ತೀಚೆಗೆ ಕಾಡು ಪ್ರಾಣಿಗಳು ಪದೇ ಪದೇ ನಗರಗಳಿಗೆ ಬರುವುದೇಕೆ? ಅವೇನು ಮನುಷ್ಯರನ್ನು ಗುರಿಯಾಗಿಟ್ಟುಕೊಂಡು ನಗರಗಳಿಗೆ ಬರುತ್ತವೆಯೇ? ಹುಲಿ, ಚಿರತೆಗಳಿಗೆ ಕಾಡಿನಲ್ಲಿ ಜಿಂಕೆ ಸಿಕ್ಕರೆ, ಆನೆಗಳಿಗೆ ಅವುಗಳ ಕಾಡುಗಳಲ್ಲಿ ಅವುಗಳಿಗೆ ಆಹಾರ ದೊರೆತರೆ ಅವು ಯಾಕೆ ನಗರಗಳಿಗೆ ಬರುತ್ತವೆ? ಮನುಷ್ಯರು ಹೀಗೆ ನಿರಂತರವಾಗಿ ಕಾಡಿಗೆ ಹೋಗಿ, ಕಾಡನ್ನು, ಕಾಡುಪ್ರಾಣಿಗಳನ್ನು ನಾಶ ಮಾಡಿದರೆ ಅವುಗಳಾದರೂ ಬೇರೇನು ಮಾಡಿಯಾವು. ಅಲ್ಲವೇ? ಮೇಲಿನ ಅಷ್ಟೂ ಪ್ರಶ್ನೆಗಳಿಗೆ ಉತ್ತರವಾಗಿ ಈ ಪುಸ್ತಕ ನಿಲ್ಲುತ್ತದೆ.

ಹನಗೋಡು ನಟರಾಜ್ ಪರಿಸರದ ಬಗ್ಗೆ ಕಾಳಜಿಯುಳ್ಳ ಒಬ್ಬ ಪತ್ರಿಕಾ ವರದಿಗಾರ. ಒಮ್ಮೆ ನಾಗರಹೊಳೆಗೆ ಗವರ್ನರ್ ಭೇಟಿ ನೀಡುತ್ತಾರೆ. ಆ ಕುರಿತಾದ ವರದಿ ಮಾಡಲು ನಟರಾಜ್ ನಾಗರಹೊಳೆಗೆ ತೆರಳುತ್ತಾರೆ. ಕಾಡಿನ ದಾರಿಯ ಮಧ್ಯೆ ಇದ್ದಕ್ಕಿದ್ದಂತೆ ಒಂದು ಮರ ನೆಲಕ್ಕುರುಳುತ್ತದೆ. ಇದು ಕಾಡ್ಗಳ್ಳರ ಕೆಲಸವೆಂದು ತಿಳಿದು ಹತ್ತಿರ ಹೋಗಿ ನೋಡಿದಾಗ ಅಲ್ಲಿ ಹತ್ತಾರು ತೇಗ ಮತ್ತು ಶ್ರೀಗಂಧದ ಮರಗಳ ಮಾರಣಹೋಮ ಆಗಿರುತ್ತದೆ. ಅವುಗಳ ಫೋಟೋ ತೆಗೆದುಕೊಂಡು ಬಂದು ರೇಂಜರ್ ಅಪ್ಪಯ್ಯನನ್ನು ಭೇಟಿಯಾದರೆ, ನೀರಸವಾಗಿ ಪ್ರತಿಕ್ರಿಯಿಸುತ್ತಾನೆ. ಇದನ್ನು ಅಲ್ಲಿಗೇ ಬಿಡದ ನಟರಾಜ್ ದೊಡ್ಡ ಸುದ್ದಿ ಮಾಡಿ, ಫೋಟೋ ಸಮೇತ ಪ್ರಕಟಿಸುತ್ತಾರೆ. ಮಾರನೆಯ ದಿನ ಡಿ. ಸಿ. ಎಫ್. ವೇದಾಂತ್ ಮತ್ತು ಅಧಿಕಾರಿಗಳ ತಂಡದೊಡನೆ ಮರ ಕಡಿಯಲಾದ ಜಾಗಕ್ಕೆ ಹೋಗಿ ನೋಡಿದರೆ, ಕಡಿದ ಮರಗಳಾಗಲಿ, ಮರದ ಬೊಡ್ಡೆಗಳಾಗಲಿ ಸಿಗುವುದಿಲ್ಲ. ಬ್ರಮನಿರಸನರಾದ ನಟರಾಜ್ ತಕ್ಷಣ ಸಂಪರ್ಕಿಸುವುದು ಕಾಡನ್ನು ಇಂಚುಇಂಚಾಗಿ ಬಲ್ಲ ಗಿರಿಜನರನ್ನು. ಗಿರಿಜನರ ಸಹಾಯದಿಂದ ಕಾಡುಗಳ್ಳರನ್ನು ಪತ್ತೆ ಹಚ್ಚುತ್ತಾರಾ? ಕೊನೆಗಾದರೂ ರೇಂಜರ್ ಅಪ್ಪಯ್ಯನನ್ನು ಹಿಡಿಯುತ್ತಾರಾ? ಓದಿ ತಿಳಿಯಬೇಕು ನೀವು. ಒಬ್ಬ ರೇಂಜರ್ ಬ್ರಷ್ಟನಾಗಿ, ಕಳ್ಳರ ಜೊತೆಗೆ ಕೈಸೇರಿಸಿದರೆ, ಸರ್ಕಾರಕ್ಕಾಗುವ ನಷ್ಟ ಎಂಬುದನ್ನು ಪುಸ್ತಕದ ಕೊನೆಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ ಲೇಖಕರು.

ಈ ಮಧ್ಯೆ ಹುಣಸೂರಿನಲ್ಲಿ ಹರಿಯುವ ಲಕ್ಷ್ಮಣತೀರ್ಥ ಹೊಳೆಯ ನೀರಿನ ಪ್ರಮಾಣ ಒಮ್ಮೆ ಕಡಿಮೆಯಾದಾಗ, ಅಲ್ಲಿನ ಪುರಸಭೆ ಒಂದು ಟ್ರ್ಯಾಕ್ಟರ್ ನಲ್ಲಿ ಬೀದಿಗಳಿಗೆ ಹೋಗಿ ನೀರು ಪೂರೈಸಲು ಪ್ರಾರಂಭಿಸಿತು. ಊರ ಹೊರಗೆ ಶುದ್ಧೀಕರಿಸಿದ ನೀರನ್ನು ಒಂದು ದೊಡ್ಡ ಸಂಪಿಗೆ ರಾತ್ರಿ ತುಂಬಿಸಿ, ಬೆಳಿಗ್ಗೆ ನೀರನ್ನು ಟ್ರ್ಯಾಕ್ಟರಿಗೆ ತುಂಬಿಕೊಂಡು ಹೋಗುವುದು ವಾಡಿಕೆ. ಆದರೆ ರಾತ್ರಿ ತುಂಬಿಸಿಟ್ಟ ನೀರು ಬೆಳಗಾಗುವುದರಲ್ಲಿ ಖಾಲಿಯಾಗುತ್ತಿರುತ್ತದೆ. ಆ ನೀರಿನ ಕಳ್ಳರು ಯಾರು ಎನ್ನುವುದು ಮಾತ್ರ ಅದ್ಭುತವಾಗಿದೆ.

ಇವುಗಳ ಹೊರತಾಗಿಯೂ ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗುತ್ತದೆಂದು ರೇಂಜರ್ ಅಪ್ಪಯ್ಯನ ಪಾತ್ರದ ಮೂಲಕ ವಿವರವಾಗಿ ತಿಳಿಸಿದ್ದಾರೆ ಲೇಖಕರು. ಇಡೀ ಕಾದಂಬರಿ ಕಾಲ್ಪನಿಕವಾದರೂ ಬಿಡಿ ಬಿಡಿಯಾಗಿ ನೋಡಿದಾಗ ಎಲ್ಲವೂ ಬೇರೆ ಬೇರೆ ಕಾಲಮಾನದಲ್ಲಿ ನಡೆದಿರುವ ಸತ್ಯಘಟನೆಗಳೇ. ಪುಸ್ತಕ ಓದುತ್ತಿದ್ದರೆ ಖುದ್ದು ನಾವೇ ಕಾಡಿನಲ್ಲಿ ಓಡಾಡುತ್ತಿದ್ದೀವೇನೋ ಎಂಬಂತಹ ಭಾವ ಆವರಿಸುತ್ತದೆ. ಓದಿದ ನಂತರ ಕಾಡನ್ನು, ಕಾಡುಪ್ರಾಣಿಗಳನ್ನು ನೋಡುವ ರೀತಿ ಕೂಡ ಬದಲಾಗಬಹುದು. 

–ರಾಮಪುರ ರಘೋತ್ತಮ, ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

ಪುಟಗಳು: 100