ಬರೆದವರು:
ಅನುಷ್ ಶೆಟ್ಟಿ
'ಕಳ್ಬೆಟ್ಟದ ದರೋಡೆಕೋರರು' ಕಾದಂಬರಿ ಚಲನಚಿತ್ರವಾಗಿ ಮೂಡಿಬಂದಿದೆ .
ನಾಗರಹೊಳೆ ಅರಣ್ಯದ ಸಮೀಪವಿರುವ ಹನಗೋಡಿನ ಹಾಗೂ ಹುಣಸೂರಿನ ಸುತ್ತ ಮುತ್ತ ನಡೆಯುವ/ಹೆಣದಿರುವ ಅದ್ಬುತ ಕಾದಂಬರಿ .
ಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ನಿಗೂಢವಾದ ಭಯಾನಕ ಸ್ಥಳಪುರಾಣವನ್ನು ಹೊಂದಿರುವ, ಸಾಮಾನ್ಯರ ಪ್ರವೇಶಕ್ಕೆ ನಿಷೇಧ ಹೊಂದಿರುವ ಪ್ರದೇಶವೊಂದು ಇದ್ದೇ ಇರುತ್ತದೆ. ಊರ ಹಿರಿಯರೋ ಅಥವಾ ಅಗೋಚರ ಶಕ್ತಿಗಳ ಬಗ್ಗೆ ಅಲಂಕಾರಿಕವಾಗಿ ಮಾತನಾಡಬಲ್ಲ ವಾಕ್ಚಾತುರ್ಯ ಹೊಂದಿದವರೋ ಅಲ್ಲಿಯ ಐತಿಹ್ಯದ ಬಗ್ಗೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಸುತ್ತ ಅದರ ನಿಗೂಢತೆಯನ್ನು ಕಾಪಿಡುತ್ತಾರೆ. ಅಂಥದೊಂದು ಬೆಟ್ಟವೇ ಈ ಕಾದಂಬರಿಯಲ್ಲಿ ಬರುವ ಕಳ್ಬೆಟ್ಟ. ಅಲ್ಲಿ ಇರುವರೆಂಬ ದರೋಡೆಕೋರರ ಸುತ್ತಲೂ ಕಾದಂಬರಿ ಹೆಣೆಯಲ್ಪಟ್ಟಿದೆ.
ಆನೆಸಾಲುಬೀದಿ ಮತ್ತು ಕೋಟೆಬೀದಿ ಹುಡುಗರ ಕಿತ್ತಾಟಗಳು, ಗಣೇಶನ ಹಬ್ಬದಲ್ಲಿ ನಡೆಯುವ ಎರಡೂ ಬೀದಿಯವರ ನಡುವಿನ ಸ್ಪರ್ಧೆ ಊರಿನವರಿಗೆ ತಂದಿಡುವಪೇಚಾಟಗಳು, ಪ್ರತಿ ಅಧ್ಯಾಯದ ಕೊನೆಯಲ್ಲಿಯೂ ದರೋಡೆಕೋರರ ದುಷ್ಕೃತ್ಯಕ್ಕೆ ಸಾಕ್ಷಿಗಳು ಸೃಷ್ಟಿಯಾಗುತ್ತ ಸಾಗುವುದು, ಇವೆಲ್ಲ ಕತೆಯ ಪೀಠಿಕೆಯ ಭಾಗವನ್ನು ಕುತೂಹಲದಿಂದ ಅಭಿನಯಿಸಿದರೆ, ಹಳ್ಳಿಗೆ ಪೋಲೀಸರ ಆಗಮನವಾಗುವುದರೊಂದಿಗೆ ಕಥೆ ಬೇರೆಯೇ ಮಗ್ಗುಲಿಗೆ ಹೊರಳುತ್ತದೆ. ರಾತ್ರಿಯಿಡೀ ಹಳ್ಳಿಯಲ್ಲಿಯೇ ಗಸ್ತು ತಿರುಗಬೇಕಾದ ಪೋಲೀಸರ ಮೂಲಕ ಕಥನಕ್ಕೆ ಇನ್ನೊಂದು ಜಾಡನ್ನು ನೀಡುತ್ತ ಕುತೂಹಲ, ರಮ್ಯತೆಯ ಹಾದಿಯಿಂದ ನಿಗೂಢತೆಯ, ವಿಷಾದದ ಹಾದಿಯಲ್ಲಿ ಅದನ್ನು ಮುನ್ನಡೆಸುವ ಪ್ರಯತ್ನವನ್ನು ಅನುಷ್ ಮಾಡುತ್ತಾರೆ.
ಹಳ್ಳಿಯ ವಿವೇಕವನ್ನು ದೊಡ್ಡಜ್ಜನ ಪಾತ್ರ ಸೃಷ್ಟಿಯ ಮೂಲಕ ಇಲ್ಲಿ ಸಂಕೇತಿಸಲಾಗಿದೆ. ಆತ ಇಡಿಯ ಹಳ್ಳಿಯ ಸಾಕ್ಷಿಪ್ರಜ್ಞೆಯಂತಿದ್ದು, ಅವನ ಅಂತ್ಯದೊಂದಿಗೆ ಕಳ್ಬೆಟ್ಟದ ರಹಸ್ಯವೂ ಬಯಲಾಗುತ್ತದೆ. ಪೋಲೀಸರಿಗೆ ಊರಿನಲ್ಲಿರುವ ತೆಂಗಿನ ಮರಗಳಿಗೆಲ್ಲ ಬೆಂಕಿಬೀಳುವ ರಹಸ್ಯವನ್ನು ಹೇಳುವಾಗ ದೊಡ್ಡಜ್ಜ ಹೇಳುತ್ತಾನೆ, “ದುರಾಸೆ ಮನ್ಸನ್ ಗುಣ. ಆದ್ರೆ ಮನ್ಸಲ್ಲೆ ಅನ್ಕಂಡ್ ಸುಮ್ನಾಗಿ ಅಷ್ಟೆ. ನೀವೂ ಗರ್ಗಸ, ಆರೆ, ಗುದ್ಲಿ ಹಿಡ್ಕಂಡ್ ನಿಧಿ ಹುಡ್ಕಕ್ಕೋಗ್ಬುಟ್ಟೀರ..!” ಇದು ಅಗೋಚರ ನಿಧಿಯ ಹಿಂದೆ ಹೊರಟಿರುವ ನಮಗೆಲ್ಲರಿಗೂ ಅನ್ವಯವಾಗುವ ಮಾತು.
ಹೀಗೆ ಈ ಕಾದಂಬರಿಯಲ್ಲಿ ಕಾದಂಬರಿ ಆಗುವ ಹಲವು ಸರಕುಗಳಿವೆ. ನೀಳ್ಗತೆಯಾಗಿ ನಿಲ್ಲುವಂತೆ ಕಾಣುವ ಈ ಬರಹ ಇನ್ನೊಂದಿಷ್ಟು ಮೊಳೆಯಬಲ್ಲ ಬೀಜಗಳನ್ನು ಒಡಲಲ್ಲಿರಿಸಿಕೊಂಡಿದೆ. ಇಲ್ಲಿಯ ಭಾಷೆಗೆ ಗ್ರಾಮೀಣ ಸೊಗಸಿದೆ. ಇಲ್ಲಿಯ ಚೆಂದದ ಚಿತ್ರಗಳೂ ಕತೆ ಹೇಳುತ್ತವೆ. ತುಂಟತನದಿಂದ ಆರಂಭವಾಗುವ ರೇಖೆಗಳು ಕೊನೆಯಲ್ಲಿ ದಟ್ಟ ಬಣ್ಣ ಹೊಂದುತ್ತ ಕಾದಂಬರಿಯ ಮೂಡನ್ನು ಪೋಷಿಸುತ್ತದೆ.
ಪುಟಗಳು: 105
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !