‘ಅಗರ್ತ’ದಲ್ಲಿರುವ ಮೂರು ನೀಳ್ಗತೆಗಳು ನಿಸರ್ಗದ ಸಮತೋಲನವನ್ನು ಕಾಪಾಡಬೇಕೆನ್ನುವ ಸಿದ್ಧಾಂತಕ್ಕೆ ಬದ್ಧವಾಗಿವೆ. ಶೀರ್ಷಿಕೆ ಕಥೆಯು ಕೇವ್ ಎಕ್ಸ್ ಪೆಡಿಷನ್ ಮಾಡುವ ಸಾಹಸಿ ಫೆನ್ನರ್, ಚಿತ್ರದುರ್ಗ ಬಳಿಯ ಗುಹೆಯ ರಹಸ್ಯವನ್ನು ಅನಾವರಣ ಮಾಡಲು ಹೋಗಿ ನೆಲದಾಳದ ಒಂದು ಹೊಸದಾದ ಪ್ರಪಂಚವನ್ನೇ ಕಂಡುಹಿಡಿದ ಕಥೆ ಮೈನವಿರೇಳಿಸುತ್ತದೆ. ಹಿಮಾಲಯದ ತಪ್ಪಲಲ್ಲಿ ಭೂಮಿಯ ಆಳದಲ್ಲಿ ನಿರ್ಮಿತವಾಗಿದೆ ಎನ್ನಲಾಗಿರುವ ಅಗರ್ತದ ರಾಜಧಾನಿ ಶಾಂಬಲಾ ಅಥವಾ ಶಾಂಗ್ರಿಲಾ - ಪುರಾಣಗಳಲ್ಲಿ ಉಲ್ಲೇಖವಾಗಿರುವ ಪಾತಾಳ ಲೋಕ - ಇದೇ ಏನೋ ಎಂಬ ಅನುಮಾನ ಹುಟ್ಟಿಸುತ್ತದೆ. ಬೇರೆ ಗ್ರಹಗಳಿಂದ ಬಂದ ಅತಿ ಬುದ್ಧಿಜೀವಿಗಳ ಸಂಕರಣದಿಂದಾಗಿ ನೇರ ಜೀನ್‍ಗಳನ್ನು ಪಡೆದು ಮಾನವನ ಉಗಮವಾಗಿದ್ದು, ಚಿಂಪಾಂಜಿಗಳದೇ ಬೇರೆ, ಮಾನವನದೇ ಬೇರೆ ವಂಶವಾಹಿಗಳು ಬೇರೆಬೇರೆಯಾಗಿಯೇ ಬೆಳೆದುದರಿಂದ ಡಾರ್ವಿನ್ ಸಿದ್ಧಾಂತದ ಮಿಸ್ಸಿಂಗ್ ಲಿಂಕ್ ಉಳಿದುಬಿಟ್ಟಿತು; ಅಂತಹ ವಿಶಿಷ್ಟ ಜೀವಿಗಳ ಗುಂಪು ಶತಮಾನಗಳ ಮೊದಲೇ ಅಂತರ್ಗತ ಲೋಕಕ್ಕೆ ವಲಸೆ ಹೋಗಿಬಿಟ್ಟವು; ಅಲ್ಲಿಯ ಸ್ವಚ್ಛಂದ ಗಾಳಿ, ನಿಷ್ಕಲ್ಮಶ ವಾತಾವರಣದಿಂದಾಗಿ ‘ಅಗರ್ತ’ದ ಯಾರಿಗೂ ವಯಸ್ಸಾಗುವುದೇ ಇಲ್ಲ, ಆ ವಾತಾವರಣವನ್ನು ಭೂಮಿ ಮೇಲೆ ಸೃಷ್ಟಿಸಿದರೆ ನಾವೂ ಐನೂರು ವರ್ಷಕ್ಕೂ ಮೀರಿ ಬದುಕಬಹುದು ಎಂಬ ವಿಶಿಷ್ಟ ಸಿದ್ಧಾಂತವನ್ನು ಮಂಡಿಸುವ ಮೂಲಕ ಈ ಕಥೆ ನಮ್ಮನ್ನು ನವಿರಾದ ಹೊಸ ಲೋಕವೊಂದರತ್ತ ಸೆಳೆದೊಯ್ಯುತ್ತದೆ.