ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಕಥಾ ಸಂಕಲನ
ಈ ನಗರದ ಜೀವನವೇ ಒಂದು ಅರ್ಥದಲ್ಲಿ ಬ್ಲೂವೇಲ್ ಆಟದಂತೆ ರೂಪಿತವಾದಂತಿದೆ. ಇಲ್ಲಿ ಯಾರೋ ಟಾಸ್ಕ್ ಕೊಡುತ್ತಾರೆ. ಅವರು ಕೊಡುವ ಟಾಸ್ಕುಗಳನ್ನು ಪೂರ್ತಿಮಾಡಲು ನಾವು ಹೆಣಗಾಡುತ್ತೇವೆ. ಇಪ್ಪತ್ತು ನಿಮಿಷದಲ್ಲಿ ಎಂಟು ಕಿಲೋಮೀಟರ್ ದೂರದಲ್ಲಿರುವ ಮನೆಗೆ ಪಿಜ್ಜಾ ಕೊಟ್ಟು ಬರುವ ಟಾಸ್ಕು, ಎರಡೇ ವಾರದಲ್ಲಿ ಚಾನಲ್ಲಿನ ಟಿಆರ್‌ಪಿಯನ್ನು ಎರಡರಷ್ಟು ಮಾಡುವ ಟಾಸ್ಕು, ರಾತ್ರಿ ಸಂದಿಗೊಂದಿಗಳಲ್ಲಿ ಅಡಗಿ ನಿಂತು ಕುಡುಕರನ್ನು ಹಿಡಿದು ಸರ್ಕಾರದ ಆದಾಯ ಹೆಚ್ಚಿಸುವ ಟಾಸ್ಕು, ಮಕ್ಕಳನ್ನು ನಂಬರ್ ವನ್ ಮಾಡುವ ಟಾಸ್ಕು, ಹಗಲೀಡೀ ದುಡಿದು, ರಾತ್ರಿ ಕುಡಿದು, ಮನೆಗೆ ಬಂದು ಆಮೇಲೊಂದು ಸಿನಿಮಾ ನೋಡಿ, ನಿದ್ದೆಗಣ್ಣಲ್ಲಿ ಪ್ರವಾಸ ಮಾಡಿ- ತುಂಬು ಜೀವನ ಜೀವಿಸುತ್ತಿದ್ದೇನೆ ಎಂದು ಸಾಬೀತು ಮಾಡುವ ಟಾಸ್ಕು, ಕೊನೆಗೆ ನಮ್ಮನ್ನು ನಾವೇ ನಮಗೇ ಗೊತ್ತಿಲ್ಲದ ಹಾಗೆ ಕೊಂದುಕೊಳ್ಳುವ ಕೊನೆಯ ಟಾಸ್ಕು.ಇಂಥದ್ದರ ನಡುವೆಯೇ ಒಂದು ಪವಾಡದಂತೆ ಇನ್ನೊಂದೇನೋ ನಡೆಯುತ್ತದೆ. ಯಾರೋ ಬರೆದ ಕತೆಯನ್ನು ಮತ್ಯಾರೋ ಓದಿ ಕಣ್ಣೊದ್ದೆ ಮಾಡಿಕೊಳ್ಳುತ್ತಾರೆ. ಈ ಧಾವಂತದಲ್ಲಿ ನಾನಿಲ್ಲ ಅಂತ ಒಂದಷ್ಟು ಮಂದಿ ತಮ್ಮ ಪಾಡಿಗೆ ಸುಖವಾಗಿದ್ದಾರೆ. ದೇವಸ್ಥಾನದ ಕಟ್ಟೆಗಳು, ಜಯನಗರದ ಪಾರ್ಕುಗಳು, ಟೀ ಅಂಗಡಿಯ ಜಗಲಿಗಳು, ಸೋಮಾರಿತನದ ಅಡ್ಡೆಗಳು ಜೀವಂತವಾಗಿವೆ. ಯಾರೋ ಎಲ್ಲೋ ಕೂತುಕೊಂಡು ಈ ದಾಂಗುಡಿಯಿಡುವ ಜಗತ್ತಿನ ಹುಚ್ಚು ಹಂಬಲದಿಂದ ದೂರವಿದ್ದುಕೊಂಡು ಕುಮಾರವ್ಯಾಸನನ್ನು ಓದಿ ಸುಖವಾಗಿರುತ್ತಾರೆ.
ಬೆಂಗಳೂರಿನ ಕುರಿತ ಜೋಗಿಯವರ ಕಥಾ ಸರಣಿಯ ಮೂರನೆಯ ಕೃತಿ ಈ ಕಥಾ ಸಂಕಲನ.