‍‍ಹಕ್ಕಿಪುಕ್ಕ (ಇಬುಕ್)

‍‍ಹಕ್ಕಿಪುಕ್ಕ (ಇಬುಕ್)

Regular price
$14.99
Sale price
$14.99
Regular price
Sold out
Unit price
per 
Shipping does not apply

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಈ ಪುಸ್ತಕವನ್ನು ಸಿದ್ಧಪಡಿಸಿ ಹಲವಾರು ವರ್ಷಗಳಾದುವು. ಬಣ್ಣದ ಮುದ್ರಣಕ್ಕೆ ಬೀಳುವ ಅಪಾರ ಖರ್ಚಿನ ದೆಸೆಯಿಂದ ಇದನ್ನು ಹೊರತರಲು ಇಷ್ಟು ದಿನಗಳು ಬೇಕಾದವು. ಸರ್ಕಾರ, ವಿಶ್ವವಿದ್ಯಾಲಯಗಳು, ಖಾಸಗಿಯವರು ಯಾರಿಂದಲಾದರೂ ಕೊಂಚ ಪ್ರೋತ್ಸಾಹ ದೊರೆತಿದ್ದರೂ ಈ ವೇಳೆಗೆ ಈ ಪುಸ್ತಕ ಹೊರತಂದು ವರ್ಷಗಳೇ ಕಳೆದಿರುತ್ತಿದ್ದುವು. ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾದರೂ ಹಕ್ಕಿಗಳ ಬಗ್ಗೆ ಕನ್ನಡದ ಮಕ್ಕಳಿಗೆ ಬಣ್ಣದ ಚಿತ್ರಗಳ ಒಂದು ಕೈಪಿಡಿ ಇಲ್ಲವೆನ್ನುವುದು ನಮ್ಮ ಮನಸ್ಸಿನ ದಾರಿದ್ರ್ಯಕ್ಕೆ ಉದಾಹರಣೆಯಷ್ಟೆ. ಇಂಥದೊಂದು ಪುಸ್ತಕ ತರಬೇಕೇನ್ನುವುದು ನನ್ನ ಕನಸಾಗಿತ್ತು. ಮಕ್ಕಳು ಇಲ್ಲಿರುವ ಹಕ್ಕಿಗಳ ಬಹುಪಾಲನ್ನು ನೋಡಿರುತ್ತಾರೆ. ಆದರೆ ಅದು ಯಾವ ಹಕ್ಕಿ ಎಂದು ಅವರು ಮನೆಗೆ ಬಂದು ಪುಸ್ತಕ ತೆರೆದು ಗುರುತಿಸಿದರೆ ಮಾತ್ರ ಅವರ ನೆನಪಿನಲ್ಲಿ ಉಳಿಯುವುದು. ಇಲ್ಲದಿದ್ದರೆ ಪ್ರತಿಸಾರಿಯೂ ಅವರು ಅಪರಿಚಿತ ಹಕ್ಕಿಯನ್ನೇ ನೋಡುತ್ತಾರೆ. ಕನ್ನಡದಲ್ಲಿ ಖಾಸಗಿಯಾಗಿ ಹಲವು ಹಕ್ಕಿಗಳನ್ನು ಕುರಿತು ಪುಸ್ತಕಗಳು ಬಂದಿವೆಯಾದರೂ ಅದರ ಮುಖ್ಯ ಕೊರತೆಯೆಂದರೆ ಕಪ್ಪು ಬಿಳುಪಿನ ಚಿತ್ರಗಳು. ಕಪ್ಪು ಬಿಳುಪಿನಲ್ಲಿ ಕಾಗೆ, ಗುಬ್ಬಿ, ಗೂಬೆಗಳಿಗೂ ಏನು ವ್ಯತ್ಯಾಸ ತಿಳಿಯುವುದು ಕಷ್ಟ. ಏಕೆಂದರೆ ಹಕ್ಕಿಗಳೆಲ್ಲಾ ಹೆಚ್ಚು ಕಡಿಮೆ ಆಕಾರ ಸಾದೃಶ್ಯ ಉಳ್ಳವು. ಅವುಗಳ ಪ್ರಭೇದಗಳನ್ನು ಗುರುತಿಸಲು ಅವುಗಳ ವರ್ಣವಿನ್ಯಾಸ ತಿಳಿಯುವುದು ಬಹು ಮುಖ್ಯ. ಆದ್ದರಿಂದಲೇ ಪ್ರತಿಯೊಂದು ಹಕ್ಕಿಯನ್ನೂ ಬಣ್ಣದಲ್ಲೇ ಮುದ್ರಿಸುವ ಅಪಾರ ವೆಚ್ಚದ ಸಾಹಸ ಮಾಡಿದ್ದೇವೆ.

ಹಕ್ಕಿಗಳ ಜನಬಳಕೆಯ ಕನ್ನಡದ ಹೆಸರುಗಳನ್ನೇ ಕೊಟ್ಟಿದ್ದೇನೆ. ಅದರಲ್ಲಿ ಶೇಕಡಾ ಅರುವತ್ತರಷ್ಟು ನಮ್ಮ ತಂದೆಯವರಿಂದಲೇ ತಿಳಿದು ಬರೆದವು. ಮಿಕ್ಕವು ಇಪ್ಪತ್ತು ವರ್ಷದ ಹಿಂದೆ ನಾನು ಹಕ್ಕಿ ಫೋಟೋಗ್ರಫಿ ಮಾಡುತ್ತಿದ್ದಾಗ ಅಲ್ಲಿಯವರನ್ನು ಕೇಳಿ ಗುರುತು ಹಾಕಿಕೊಂಡವು. ದುರದೃಷ್ಟವಶಾತ್‌ ನಾವು ಹಕ್ಕಿಗಳ ಕನ್ನಡದ ಹೆಸರುಗಳನ್ನು ಸಾಹಿತ್ಯದಲ್ಲಿ ಬಳಸದ ಕಾರಣ ಅವು ಇನ್ನೂ ನಿರ್ದಿಷ್ಟವಾಗಿಲ್ಲ. ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತವೆ. ಒಂದೇ ಹಕ್ಕಿಗೆ ಹಲವು ಹೆಸರುಗಳಿರುವೆಡೆಗಳಲ್ಲಿ ಹಕ್ಕಿಯ ಗುಣಲಕ್ಷಣಗಳಿಗೆ ಹೊಂದುವಂಥವನ್ನು ಅರಿಸಿದ್ದೇನೆ. ಹೆಸರುಗಳಲ್ಲಿ ಗೊಂದಲ ನಿವಾರಿಸಲು ಕೆಳಗೆ ಅವುಗಳ ಇಂಗ್ಲಿಷ್‌ ಹೆಸರನ್ನೂ ಕೊಟ್ಟಿದ್ದೇನೆ.

ಹಕ್ಕಿಗಳ ವಿವರಣೆಗೆ ನಾನು ‘ಸಲೀಂ ಆಲಿ’ಯವರ ವಿವರಣೆಯನ್ನೇ ಮಾರ್ಗಸೂಚಿಯನ್ನಾಗಿ ಇರಿಸಿಕೊಂಡಿದ್ದೇನೆ. ಅವರ ವಿವರಣೆಯಲ್ಲಿ ಒಂದೇ ಒಂದು ಪದವನ್ನೂ ವ್ಯತ್ಯಾಸ ಮಾಡಲು ಸಾಧ್ಯವಿಲ್ಲದಷ್ಟು ಕರಾರುವಾಕ್ಕಾಗಿ ಬರೆದಿದ್ದಾರೆ. ಬದಲಾಗುವ ವಾತಾವರಣದೊಂದಿಗೆ ಹಕ್ಕಿಗಳೇ ತಮ್ಮ ನಡವಳಿಕೆ ಬದಲಾಯಿಸಿದ ಹೊರತೂ, ಅವುಗಳನ್ನು ಕುರಿತ ಸಲೀಂ ಆಲಿಯವರ ವಿವರಣೆ ಶತಮಾನಗಳವರೆಗೆ ಬದಲಾಯಿಸಲು ಪ್ರಯತ್ನಿಸುವುದು ವ್ಯರ್ಥ ಪ್ರಯತ್ನ. ಈ ಮಾತನ್ನು ನಾನೇ ಪ್ರಯತ್ನಿಸಿ ಅರಿತು ಹೇಳುತ್ತಿದ್ದೇನೆ. ಅಂಕಗಣಿತದಷ್ಟು ಕರಾರುವಕ್ಕಾಗಿರುವ ಅವರ ವಿವರಣೆ ಈ ಶತಮಾನದ ಮಟ್ಟಿಗಂತೂ ಕೊನೆಯ ಮಾತು.

ಹಕ್ಕಿಗಳನ್ನು ಸಜೀವವಾಗಿ ನೋಡಿದ್ದಕ್ಕೂ ಚಿತ್ರಕ್ಕೂ ಕೊಂಚ ವರ್ಣವ್ಯತ್ಯಾಸ ಕಾಣಬಹುದು. ಇದಕ್ಕೆ ಕಾರಣ ಹಕ್ಕಿಗಳಲ್ಲೇ ಋತುಮಾನಕ್ಕೆ ತಕ್ಕಂತೆ ಬಣ್ಣ ವ್ಯತ್ಯಾಸವಾಗುತ್ತದೆ, ಅಲ್ಲದೆ ನಾವು ಚಿತ್ರ ಬಿಡಿಸುವಾಗ, ಅವನ್ನು ಪಾಸಿಟಿವ್‌ ಮಾಡಿಸುವಾಗ, ಮತ್ತು ಅದನ್ನು ಮುದ್ರಿಸುವಾಗ ಬಣ್ಣಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಾಗುತ್ತವೆ. ಇವನ್ನೆಲ್ಲಾ ಪರಿಗಣಿಸಿ ಅವುಗಳ ವರ್ಣವಿನ್ಯಾಸವನ್ನು ಓದುಗರೂ ಸಹ ಪರಿಗಣಿಸಿ ಉದಾರ ಮನಸ್ಸಿನಿಂದ ಕುಂದು ಕೊರತೆಗಳನ್ನು ನಮ್ಮ ಗಮನಕ್ಕೆ ತಂದರೆ ಮುಂಬರುವ ಆವೃತ್ತಿಗಳಲ್ಲಿ ಅವನ್ನು ಸರಿಪಡಿಸಲು ಯತ್ನಿಸುತ್ತೇವೆ.

ಹಕ್ಕಿ ಪುಕ್ಕ ಪುಸ್ತಕ ಎರಡನೆ ಮುದ್ರಣ ಕಂಡಿರುವುದು ನಮ್ಮ ಪ್ರಕಾಶನದ ಅಸಾಧಾರಣ ಸಾಧನೆ ಎಂದನಿಸುತ್ತದೆ. ದುಬಾರಿ ಬೆಲೆಯಾದರೂ ಹಕ್ಕಿಗಳ ಮೇಲಣ ಕುತೂಹಲ ಶ್ರದ್ಧೆಗಳಿಂದ ಕನ್ನಡಿಗರು ಕೊಂಡು ಪ್ರೋತ್ಸಾಹಿಸಿದ್ದಕ್ಕೆ ನಾನು ಎಷ್ಟು ಕೃತಜ್ಞನಾಗಿದ್ದರೂ ಸಾಲದು.

- ಕೆ.ಪಿ. ಪೂರ್ಣಚಂದ್ರ ತೇಜಸ್ವಿ

 

ಪುಟಗಳು: 491

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !