ಚೋಮನ ದುಡಿ

ಚೋಮನ ದುಡಿ

Regular price
$2.99
Sale price
$2.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರಣವಿರುವ ಈ ಪುಟ್ಟ ಪುಸ್ತಕ 1930-40 ರ ದಶಕದ ಸಾಮಾಜಿಕ ವ್ಯವಸ್ಥೆಯನ್ನು ಹೊರಚೆಲ್ಲುತ್ತದೆ. ಹೊಲೆಯರಲ್ಲಿ ತೀರ ಕೆಳಗಿನವರಾದ ಮಾರಿ ಹೊಲೆಯರಿಗೆ ಕನಿಷ್ಟ ಕೂಲಿ ಕೆಲಸಕ್ಕೂ ಸಹ ಕರೆಯುತ್ತಿರಲಿಲ್ಲ… ಇದು ಅಂದಿನ ಪರಿಸ್ಥಿತಿಯಾದರೂ ಕೆಲವಾರು ಕಡೆ ಇಂದಿಗೂ ಇದಕ್ಕಿಂತ ಭಿನ್ನ ಪರಿಸ್ಥಿತಿಯೇನಿಲ್ಲ. ಇದು ಸಮಾಜದ ಕಣ್ಣಿಗೆ ಕಾಣುವಂತೆಯೂ… ಕಾಣದಂತೆಯೂ ಇರಬಹುದು…!! ಇದು ಸಮಾಜದ ವಿಭಿನ್ನ ಸ್ತರಗಳ ತಾರತಮ್ಯದ ಆಯಾಮವೂ ಹೌದು. ಇಂತಹ ಚಿತ್ರಣದ ಒಂದು ಭಾಗವಾದ ಚೋಮ ಕೂಡ ಈ ಜನಾಂಗದವನೇ. ಅವನಿಗೆ ಅವನ ದುಡಿಯೇ ಆಸ್ತಿ… ಬಂಡವಾಳ…! ಈ ಕಥಾವಸ್ತು ಮುಖ್ಯವಾಗಿ ಸಮಾಜದ ರೀತಿನೀತಿಗಳ… ಜಾತಿವ್ಯವಸ್ಥೆಯ ಪರಿಚಯ.

ಜಾತಿ… ಜೀತ… ಭೂಮಿಯ ಹಂಚಿಕೆಯಲ್ಲಿ ಅಸಮಾನತೆ… ತಾರತಮ್ಯ… ಇವೆಲ್ಲವುಗಳ ಸಮಾಜದರ್ಶನದ ಚಿತ್ರವಿದೆ. ಚೋಮನ ಆಸೆ ಕನಸು ತಾನು ಸ್ವಂತವಾಗಿ ಬೇಸಾಯ ಮಾಡಬೇಕೆಂದ ಆಸ್ಥೆಯನ್ನು ಉಳ್ಳವರ ಹಠದಿಂದ… ಬೇಧಭಾವದಿಂದ ಹೊಸಕಿ ಹಾಕುವ ಪ್ರಯತ್ನ… ಸಮಾಜದ ಶೋಷಿತವರ್ಗದವನ ಒಳದನಿಯಾಗಿದೆ…

ಕಾರಂತರ ಈ ಪುಸ್ತಕ ಇಂದಿಗೆ ಹೋಲಿಸಿದಾಗ ಪುಟ್ಟಪುಸ್ತಕವೆಂದು ತೋರಿದರೂ ಅದರಲ್ಲಿ ಅಡಕವಾಗಿರುವ ವಸ್ತುವಿಷಯ ನಿಮ್ನವರ್ಗದವರ ಆಂತರ್ಯದ ದನಿ… ಆಳುಮಗನೊಬ್ಬನ ಆಸೆ… ಅದು ನೇರವೇರದ ಕೊರಗು… ಇಂತಹ ಜಾತೀಯತೆಯನ್ನಾಧರಿಸಿದ ವಿಷಯಗಳನ್ನು ತುಲನಾತ್ಮಕವಾಗಿ ಅಂದಿನ ಕಾಲಕ್ಕೆ ತಾಳೆ ಹಾಕಿದರೆ ಇದೊಂದು ಕ್ರಾಂತಿಕಾರಕ ಕೃತಿಯೇ…! ಅಂದಿಗೆ ಇದು ಅಷ್ಟು ಸುಲಭವಾದ ಕೆಲಸವಾಗಿರಲಿಲ್ಲ… ಇಂತಹ ಚಿಂತನೆಗಳೇ ಸಾಹಿತ್ಯ ಲೋಕದಲ್ಲಿ ಕಾರಂತಜ್ಜನನ್ನು ಇಂದಿಗೂ ಕೊಂಚ ಭಿನ್ನವಾದ ಸಾಲಿನಲ್ಲಿ ನಿಲ್ಲುವಂತೆ ಮಾಡುವುದು. ಅವರ ವಿಚಾರದೃಷ್ಟಿಯೇ ಯೋಚನಾಪರತೆಯಲ್ಲಿ ತೊಡಗಿಸಿ ಅವರ ಆದರ್ಶಗಳನ್ನು ನಮಗೆ ಪರಿಚಯಿಸುವುದು.

ಕಾದಂಬರಿಯು, ಚೋಮ ತನ್ನ ದುಡಿಯಿಂದ ಹೊರದಬ್ಬಿದ ಶಬ್ದದ ದನಿಯನ್ನು ಪರಿಚಯಿಸುತ್ತಲೇ ಪ್ರಾರಂಭವಾಗಿ ಕಾದಂಬರಿಯ ಅಂತ್ಯವೂ ಅವನ ದುಡಿಯಲ್ಲೇ ಮುಕ್ತಾಯಗೊಳ್ಳುತ್ತದೆ. ಅವನು ಬೇರೆಯಲ್ಲ… ದುಡಿ ಬೇರೆಯಲ್ಲ… ಅವನ ದೇಹದ ಅಂಗವೇ ಅದು… ಜೀವನದ ಭಾಗವೇ ಅದೆನ್ನುವಷ್ಟು… ಅದೆಂದರೆ ಅಷ್ಟು ಇಷ್ಟ… ದುಡಿಯಷ್ಟೇ ಇಷ್ಟಪಡುವ ಮತ್ತೊಂದು ವಸ್ತು ಹೆಂಡ… ಇನ್ನೊಂದು ಅವನೊಟ್ಟಿಗೆ ಎಷ್ಟೋ ವರ್ಷಗಳಿಂದ ಸಾಗಿ ಬಂದ ಕನಸು ಬೇಸಾಯ… ಒಂದು ಹಂತದಲ್ಲಿ ತನ್ನ ಕುಟುಂಬವನ್ನು ಒಂದು ಹೂವಿನ ಪಕಳೆಗಳಿಗೆ ಹೋಲಿಸಿದ್ದರೂ ಬೇಸಾಯದ ಕನಸಿನಲ್ಲಿ ತನ್ನ ಕುಟುಂಬದ ಬಗ್ಗೆ ನಿರ್ಲಿಪ್ತನಾಗಿ ಉಳಿಯುವ ಚೋಮ… ನಾನು ನನಗಾಗಿ ನೇಗಿಲನ್ನು ಹಿಡಿಯಬಾರದಾದರೆ, ಇನ್ನೊಬ್ಬರಿಗಾಗಿ ಏತಕ್ಕೆ ಹಿಡಿಯಬೇಕು ಎಂದು ಯೋಚಿಸುವ ಚೋಮನ ವಿಚಾರಶಕ್ತಿಯನ್ನು ನಿರುಮ್ಮಳವಾಗಿ ಅಳೆಯುವಂತಾಗುತ್ತದೆ. 

ಪರಂಪರೆಯಿಂದ ಬಂದದ್ದನ್ನು ಬದಲಾಯಿಸಲು ಒಪ್ಪದಿರುವ ಧಣಿಗಳು ಮತ್ತು ಅವರ ಅಮ್ಮ… ಅದೇ ರೀತಿಯಲ್ಲಿ ತನ್ನ ಜಾತಿ ಕುಲವನ್ನು ಮೀರಿ ತನ್ನ ಕೈಗೆಟುಕ ಬಹುದಾದ ಸೌಲಭ್ಯಗಳನ್ನು ಧಿಕ್ಕರಿಸಿದ ಚೋಮ…. ನೀಲ ನೀರಿನಲ್ಲಿ ಬಿದ್ದಾಗ ಕಾಪಾಡಲು ಮುಂದಾದ ಬ್ರಾಹ್ಮಣ ಯುವಕನನ್ನು ತಡೆದು, ಕೊಟ್ಟ ಕಾರಣ ಅವನು ಹೊಲೆಯನೆಂದು… ಯಾರು ಸರಿ ಯಾರು ತಪ್ಪೆಂದು ನೋಡಿದರೆ ಕಾಲಕ್ಕನುಗುಣವಾಗಿ ನಡೆಯುತ್ತಿದ್ದ ವ್ಯವಸ್ಥೆಯದ್ದು ಎಂದು ಹೇಳಬಹುದೇನೋ…! ಆದರೂ ಅವನು ಕೆಳಜಾತಿಯವನಾದರೂ… ಅವನಲ್ಲಿನ ಬದ್ಧತೆ ಅವನ ನೈತಿಕತೆಯನ್ನು ಮೀರಿ ಹೆಜ್ಜೆ ಹಾಕದ ಚೋಮ ಅಷ್ಟೆತ್ತರದಲ್ಲಿ ಮೆರೆದು ಬಿಡುತ್ತಾನೆ… ಕಡೆಗೆ ಮಗಳು ಬೆಳ್ಳಿ ವಿಚಾರದಲ್ಲೂ…! ಆದರೂ ಚೋಮನ ಎದೆಯಾಳದಲ್ಲಿ ಕುದ್ದು ಬೆಂದ ಆಸೆ ನೆರವೇರಲೇ ಇಲ್ಲ. ಅವನ ಒಳದನಿ ದುಡಿಯಿಂದ ಆಚೆ ಬಂದುದಷ್ಟೇ…! ಸಮಾಜದ ಕಿವಿಗೆ ಬೀಳದೇ ಇದ್ದುದು ವಿಷಾಧವೇ…!!

 

- ಸಪ್ನಾ ವಂಶಿ

  

ಕೃಪೆ

https://pustakapremi.wordpress.com/

 

ಪುಟಗಳು: 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !