ಒಂಟಿದನಿ

ಒಂಟಿದನಿ

Regular price
$5.49
Sale price
$5.49
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

ಒಂಟಿ ದನಿ ಎಂಬ ಕಾದಂಬರಿಯನ್ನು ಬರೆದು ಮುಗಿಸುವುದಕ್ಕೂ, ಅದನ್ನು ಅಚ್ಚುಗಾಣಿಸುವುದಕ್ಕೂ ನಡುವೆ ಎರಡು ವರ್ಷಗಳೇ ಸಂದಿವೆ. ವರ್ಷಕ್ಕೊಂದು ಕಾದಂಬರಿಯನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದರೂ ಕಳೆದ ವರ್ಷ ಬೇರೆ ಬರವಣಿಗೆಗಳಿಗೆ ಸಮಯ ಮೀಸಲಾಯಿತು. ಕಾದಂಬರಿ ಬರೆಯಲೇಬೇಕೆಂಬ ವಿಧಿಯಿಲ್ಲವಷ್ಟೆ. ಮನಸ್ಸು ಅದಕ್ಕೆ ಬರಬೇಕು; ಅದಕ್ಕಿಂತ ಹೆಚ್ಚಾಗಿ ಬರೆಯುವ ವಿಷಯ ಹೊಳೆಯಬೇಕು; ಅದು ಬಲಿತು ಬಲವಂತವಾಗಬೇಕು; ಅನಂತರವೇ ಲೇಖನಿಯನ್ನು ಹಿಡಿಯಬೇಕು.

ಸದ್ಯದ ಕಾದಂಬರಿಯ ರಂಗಸ್ಥಳ ಮುಂಬಯಿ. ಅದಕ್ಕೊಂದು ರಂಗಸ್ಥಳ ಅನಿವಾರ್ಯವಾಗಿತ್ತು. ಪರಿಚಿತವಾದ ಈ ನಗರಕ್ಕೆ ಒಪ್ಪಿಸಿದೆ ಆ ಕೆಲಸವನ್ನು. ಮನಸ್ಸಿನ ವಿಚಾರಗಳನ್ನು, ಭಾವನೆಗಳನ್ನು ತೋಡಿಕೊಳ್ಳುವ ಜನವರ್ಗಕ್ಕೆ, ಅವರು ಕೇವಲ ಮಿತ ಸಂಖ್ಯೆಯವರು, ಸಂಬಂಧಿಸಿದ ಈ ಬರಹ ಸದ್ಯಕ್ಕೆ ಮಾತು, ಲೇಖನ, ಗೀತ, ನೃತ್ಯಗಳನ್ನು ಆಶ್ರಯಿಸಿದ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಅಂಥವರು, ಸಾಕಷ್ಟು ಶ್ರೋತಾರರು ಮತ್ತು ಪ್ರೇಕ್ಷಕರಿಲ್ಲದಲ್ಲಿ ಬದುಕಲಾರರು ಎಂಬುದರಿಂದ ಅವರನ್ನು ಮುಂಬಯಿಗೆ ಒಯ್ದು ನಿಲ್ಲಿಸಿದೆನಷ್ಟೆ.

ಇಲ್ಲಿನ ಸಮಸ್ಯೆ ಸಾಹಿತ್ಯ, ಕಲಾ ಮಾಧ್ಯಮಗಳ ಹಿಂದಿರುವ ಮನಸ್ಸಿನದು. ಆ ಮನಸ್ಸುಗಳು ಎಂಥವಿದ್ದರೆ ಚೆನ್ನ, ಅದರಲ್ಲಿ ಪ್ರಾಮಾಣಿಕತೆಯ ಸ್ಥಾನವೇನು, ಮೋಹಕತೆಯ ಸ್ಥಾನವೇನು, ಸತ್ಯದ ಸ್ಥಾನವೇನು--ಎಂದು ಜನರ ದೃಷ್ಟಿಯನ್ನು ಇಲ್ಲಿನ ವಿವಿಧ ಪಾತ್ರಗಳ ಮೂಲಕ ಹರಿಯಿಸಲು ಪ್ರಯತ್ನಿಸಿದ್ದೇನೆ. ಅಂತಹವರು ತಂತಮ್ಮ ಕೆಲಸಗಳನ್ನು ಮಾಡುತ್ತಾರೆ. ಅವರ ಪ್ರಭಾವ ಸಮಾಜದ ಮೇಲೆ ಆಗಿಯೇ ಆಗುತ್ತದೆ. ಎಷ್ಟು ಆಗುತ್ತದೆ--ಎಂಬುದು ಈ ಬಗೆಯ ಕಲಾವಿದ, ಲೇಖಕ, ವಾಗ್ಮಿಗಳಿಗೆ ಇದಿರಾಗುವ ಸಮಸ್ಯೆ. ಲೋಕ ತಮ್ಮನ್ನು ಕಾಣಬೇಕು; ಕೇಳಬೇಕು--ಎಂಬುದು ಅವರೆಲ್ಲರ ಮನಸ್ಸು. ಅದಕ್ಕಾಗಿ ಶ್ರಮಿಸುತ್ತಾರೆ ಅವರು. ಆದರೆ ಆ ಶ್ರಮ ಸಾರ್ಥಕವೇ?

ಅದನ್ನೆಣಿಸುವಾಗ ಕಲಾವಿದನ, ಲೇಖಕನ, ಸಾಹಿತಿಯ ದನಿ ಒಂಟಿ ದನಿ. ಅದು ಎಷ್ಟು ಜನರನ್ನು ಸೇರುತ್ತದೆ, ಎಷ್ಟು ಜನರ ಸ್ಮರಣೆಯಲ್ಲಿ ಎಷ್ಟು ಕಾಲ ಉಳಿಯುತ್ತದೆ? ಇಷ್ಟೆಲ್ಲ ಶ್ರಮವನ್ನು ಕೇಳಿಸಲು, ತೋರಿಸಲು ಪಡಬೇಕೆ--ಎಂಬ ಮತ್ತೊಂದು ಸಮಸ್ಯೆ ಉದ್ಭೂತವಾಗುತ್ತದೆ. ಕೇಳಿಸಲಿ ಕೇಳಿಸದಿರಲಿ, ಊದುವ ಶಂಖ ಊದುತ್ತೇವೆ--ಎನ್ನುವ ಧೈರ್ಯ ಇರಬೇಕು. ಕೇಳಿಸಿದ್ದು, ಕಾಣಿಸಿದ್ದು, ಒಟ್ಟಿನಲ್ಲಿ ಸಮಾಜಹಿತವನ್ನು ಸಾಧಿಸಬೇಕಾದರೆ ಅನುಕೂಲ ಪರಿಸ್ಥಿತಿ ಇರಬೇಕು; ವಿವೇಕಿಯಾದ ಜನವರ್ಗವು ಇರಬೇಕು.

ಜಗತ್ತಿನ ಬಹು ತೆರನ ಗದ್ದಲದಲ್ಲಿ 'ಒಂಟಿ ದನಿ' ಮೆಲುದನಿಯಾಗಿದ್ದರೂ, ಅದನ್ನು ತಾವು ಕೇಳಬೇಕು ಎಂಬ ಹಂಬಲ ಜನತೆಯ ಮನಸ್ಸಿಗೆ ಬರಬೇಕು. ಕೇಳಿದ ಬಳಿಕ, ತಾವು ಕೇಳಿದುದರ ಅರ್ಥ ಹೊಳೆಯಬೇಕು. ಅರ್ಥವಾದ ಬಳಿಕ, ಹಾಗೆ ಕೇಳಿದ್ದು ಸರಿಯೇ; ಅದಕ್ಕಿಂತ ಹೊರಗೆ ಇನ್ನೇನಿಲ್ಲವೇ--ಎಂದು ಕೇಳಿದವರು ವಿಚಾರ ಮಾಡಬೇಕು.

ನಾಲಿಗೆ ಮತ್ತು ಕಿವಿಗೆ ನಡುವೆ, ಕಣ್ಣು, ಕಿವಿ ಮತ್ತು ಮನಸ್ಸುಗಳ ನಡುವೆ, ವಿಚಾರ, ವಿವೇಕ, ಸಹಾನುಭೂತಿಗಳ ಸೇತುವೆಯೊಂದು ರಚನೆಗೊಳ್ಳಬೇಕು.

 

- ಶಿವರಾಮ ಕಾರಂತ

 

ಪುಟಗಳು: 287

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !