ಹೊಚ್ಚ ಹೊಸ ನಿರೂಪಣಾ ಶೈಲಿಯೊಂದಿಗೆ ಕನ್ನಡ ಕಥಾಲೋಕ ಪ್ರವೇಶಿಸಿದ ನಾಗರಾಜ ವಸ್ತಾರೆಯವರ ಮೊದಲ ಕಥಾಸಂಕಲನವಿದು. ಡಾ. ಯು. ಆರ್. ಅನಂತರಮೂರ್ತಿ ಪ್ರಶಸ್ತಿಯನ್ನು ಪಡೆದ ಈ ಕೃತಿ, ವಸ್ತಾರೆಯವರ ಖಾಸಾ ಓದುಗ ಬಳಗವನ್ನೇ ಹುಟ್ಟಿ ಹಾಕಿತು.
ಕಳೆದೆರಡು-ಮೂರು ದಶಕಗಳಲ್ಲಿ ನಮ್ಮ ಸಾಮಾಜಿಕ ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ಪಲ್ಲಟಗಳು ನಾಗರಾಜ ವಸ್ತಾರೆಯವರ ಕತೆಗಳಿಗೆ ಹಿನ್ನೆಲೆಯಾಗಿದೆ. ಜಾಗತೀಕರಣ, ಉದಾರೀಕರಣ, ಹಣದ ಪ್ರಭಾವ, ಸರಕು ಸಂಸ್ಕೃತಿ ನಮ್ಮೆಲ್ಲರ ಒಳಬದುಕನ್ನು ಪ್ರವೇಶಿಸಿದೆ, ಪ್ರಭಾವಿಸಿದೆ. ಇದೆಲ್ಲದರ ಬಗ್ಗೆ ನಮ್ಮ ಪ್ರಾಮಾಣಿಕ ನಿಲುವೇನು ಎಂಬುದು ನಮಗೇ ಗೊತ್ತಿಲ್ಲ. ಹಾಗೆ ಗೊತ್ತು ಮಾಡಿಕೊಳ್ಳುವಂತಹ ಹುಡುಕಾಟಕ್ಕೆ ನಾವೆಲ್ಲರು ನಮ್ಮ ನಮ್ಮ ಬರಹಗಳಲ್ಲಿ, ವೃತ್ತಿಗಳಲ್ಲಿ ಕೌಟುಂಬಿಕ ಜೀವನದಲ್ಲಿ ತೊಡಗಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ನಮ್ಮ ಕಾಲದ ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕ ದೈವಕ್ಕೆ ಬಿಟ್ಟದ್ದು. ನಾಗರಾಜರು ನಮ್ಮ ಕಾಲದ ಎಲ್ಲ ಸೂಕ್ಷ್ಮ ಬೆಳವಣಿಗೆಗಳನ್ನು ತಮ್ಮ ಮೈಮೇಲೆ ಎಳೆದುಕೊಂಡು ಹುಡುಕಾಟಕ್ಕೆ ತೊಡಗಿದ್ದಾರೆ ಎಂಬುದೇ ಮುಖ್ಯವಾದದ್ದು.
ಕಳೆದೆರಡು ದಶಕಗಳ ಬೆಳವಣಿಗೆ ನಮ್ಮ ಸ್ವಾತಂತ್ರ್ಯ, ಸಾಧ್ಯತೆ, ಸುಖಗಳನ್ನು ಇನ್ನಿಲ್ಲದಂತೆ ಹೆಚ್ಚಿಸಿ ನಮ್ಮೆಲ್ಲರನ್ನು ಇನ್ನೂ ಹೆಚ್ಚಿನ ಪ್ರೀತಿಯ, ಜವಾಬ್ದಾರಿಯ ಮನುಷ್ಯರನ್ನಾಗಿ ಮಾಡಿಬಿಟ್ಟಿದೆ ಎಂಬುದೊಂದು ಗ್ರಹೀತ ಚಾಲ್ತಿಯಲ್ಲಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ನಾವು ಮಕ್ಕಳಿಗೆ ನೀಡುವ ಹಿಂಸೆ, ಅವರಿಂದ ಮಿತಿಮೀರಿ ನಿರೀಕ್ಷಿಸುವುದು, ಅವರ ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸುವುದು -ಇವೆಲ್ಲವೂ ಹಿಂದಿನ ದಿನಗಳಿಗಿಂತಲೂ ಹೆಚ್ಚು ಸೂಕ್ಷ್ಮವಾಗಿ, ಕ್ರೂರವಾಗಿ, ನಾಜೂಕಾಗಿ ಮುಂದುವರಿಯುತ್ತಿದೆ. ಬೋರಲು ಕತೆ ಓದುವಾಗ ನನಗೆ ನಾವು ಇನ್ನೂ ಎಲ್ಲೂ ಬದಲಾಗೇ ಇಲ್ಲವೇನೋ ಅಥವಾ ನಮ್ಮ ಮಕ್ಕಳ ಬಗ್ಗೆ ನಮಗಿರುವ ದುರಾಸೆ, ಕ್ರೌರ್ಯ ಇನ್ನೂ ಸೂಕ್ಷ್ಮವಾಯಿತೇನೋ ಈಚಿನ ದಿನಗಳಲ್ಲಿ ಅನಿಸಿತು.
-ಕೆ. ಸತ್ಯನಾರಾಯಣ