ಮುನ್ನೂರು ಚಿಲ್ರೆ ಕಿಲೋ ಮೀಟರ್ ದೂರದ ಊರನ್ನು ತಲುಪುವುದಕ್ಕೆ ಆಗದೇ ದಾರಿಮಧ್ಯೆಯೇ ಪ್ರಾಣಬಿಟ್ಟ ಗಂಗಮ್ಮ, ಆಹಾರ ಸಿಗದೇ ನರಳಿದ ಅಸಂಖ್ಯಾತ ಜನರ ಹೊಟ್ಟೆ ಸಂಕಟ, ಕೊರೋನಾ ವಾರಿಯರ್ಸ್ ಎಂದು ಕರೆಯಿಸಿಕೊಂಡ ವೈದ್ಯರೊಬ್ಬರ ಪಾರ್ಥಿವಶರೀರಕ್ಕೂ ಕಲ್ಲು ಹೊಡೆದ ನೀಚತನ, ಕೋಮು ಗುದ್ದಾಟ ಹೀಗೆ ಹಲವು ಸಂಗತಿಗಳು ಈ ಸಂದರ್ಭದಲ್ಲಿ ನನ್ನನ್ನು ಬಾಧಿಸಿವೆ. ಅವೇ ಪುಸ್ತಕ ಬರೆಯುವಂತೆ ಬಡಿದೆಬ್ಬಿಸಿವೆ.
ಈ ಪುಸ್ತಕದಲ್ಲಿರುವ ಬಹುತೇಕ ಘಟನೆಗಳು ಕೊರೋನಾ ವೇಳೆಯಲ್ಲೇ ನಡೆದಂಥವು. ಮಾಧ್ಯಮಗಳಲ್ಲಿ ತಿರುವುಮುರುವು ಪಡೆದಂಥವು. ವ್ಯಕ್ತಿ ಆರಾಧನೆಯ ಗುಂಗಿನಲ್ಲಿ ಬೇರೆ ಬೇರೆ ಸ್ವರೂಪ ಪಡೆದಂಥವು. ಇವುಗಳ ನೈಜ ಸಂಗತಿಗಳನ್ನು ಪುಸ್ತಕ ತೆರೆದಿಟ್ಟಿದೆ ಅಥವಾ ತೆರೆದಿಡುವ ಪ್ರಯತ್ನ ಮಾಡಿದೆ.
- ಲೇಖಕರು ಡಾ. ಶರಣು ಹುಲ್ಲೂರು
ಸದಾ ಸಮಾಜಕ್ಕಾಗಿ ತುಡಿಯವ ಶರಣು ಹುಲ್ಲೂರು ಅವರು 'ಕೊರೋನಾ' ಕುರಿತಾಗಿ ಪುಸ್ತಕ ಬರೆದಿದ್ದಾರೆ ಅಂದಾಕ್ಷಣ ಕುತೂಹಲ ಮತ್ತು ಅಚ್ಚರಿಯಿಂದ ಕೈಗೆತ್ತಿಕೊಂಡೆ. ಜಗತ್ತಿನಾದ್ಯಂತ ಈ ಕೊರೋನಾ ವೈರಾಣು ಸೃಷ್ಟಿಸಿದ ತಲ್ಲಣ ಮತ್ತು ಭಾರತದಲ್ಲಿ ಅದು ಪಡೆದುಕೊಂಡ ಸ್ವರೂಪಗಳು ಇಲ್ಲಿ ಕಥೆಗಳಾಗಿ ಮಾರ್ಪಟ್ಟಿವೆ. ಇವೆಲ್ಲವೂ ನೈಜ ಘಟನೆಗಳೆೇ. ಜಾತಿ, ಮತ, ಪಂಥವನ್ನೂ ಮೀರಿದ್ದು ಹಸಿವು. ಈ ಹಸಿವು ಕೊರೋನಾ ವೈರಸ್‌ನಿಂದಾಗಿ ಏನೆಲ್ಲ ಆವಾಂತರವನ್ನು ಸೃಷ್ಠಿಸಿದೆ ಎಂಬುದನ್ನು ಶರಣು ನೇರ, ನಿಷ್ಟುರತೆಯಿಂದ ತೆರೆದಿಟ್ಟಿದ್ದಾರೆ. ಇಲ್ಲಿ ರಾಜಕೀಯ ಮೆಲಾಟಗಳನ್ನು ಹುಡುಕಾಡದೇ ಮನುಷ್ಯತ್ವವನ್ನು ಶೋಧಿಸಿದ್ದಾರೆ ಎನ್ನುವುದು ಅದು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಇವು ಅತ್ಯಂತ ಸಾಂದರ್ಭಿಕವಾದ ಬರಹಗಳೆನಿಸುತ್ತವೆ. ಓದುತ್ತಾ ಹೋದಂತೆ ನಾನು ತುಂಬಾ ಭಾವುಕನಾದೆ. ಓದಿ ಮುಗಿಸಿದ ನಂತರ ಹೃದಯ ಭಾರವಾಯಿತು. ನನ್ನನ್ನೂ ಅತ್ಮವಿಮರ್ಶೆಗೆ ಒಳಪಡಿಸಿತು.
ಒಂದೆೊಂದು ಪುಟ ತಿರುವಿದಾಗಲೂ, ನಮಗೇ ಗೊತ್ತಿಲ್ಲದಂತೆ ನಾನಾ ಸನ್ನಿವೇಶಗಳು ಎದುರುಗೊಳ್ಳುತ್ತಿದ್ದವು. ನಾವೆಷ್ಟು ಅಸಹಾಯಕರು ಅನಿಸುತಿತ್ತು. ಕೊರೋನಾ ವೈರಸ್‌ಗಿಂತ, ನಮ್ಮನ್ನು ಬಾಧಿಸುತ್ತಿರುವ ನಿಜವಾದ ವೈರಸ್ ಯಾವುದು ಎಂಬ ಚರ್ಚೆ ಶುರುವಾಗುತ್ತಿತ್ತು. ಈ ಎಲ್ಲ ಅನುಮಾನ, ಪ್ರಶ್ನೆಗೂ ಕಥೆಯ ಮೂಲಕ ಉತ್ತರ ನೀಡಿದ್ದಾರೆ ಶರಣು. ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕವಿದು. ಜಗತ್ತಿನಾದ್ಯಂತ ಸಂಚಾರ ಮಾಡಿರುವಂತಹ ಕೊರೋನಾದಿಂದ ಇಂದಲ್ಲ, ನಾಳೆ ನಾವು ಮುಕ್ತರಾಗಬಹುದು. ಅದರೆ, ಇದರಿಂದ ಹಿಡಿದ ಮತ್ತೊಂದು ಜಾಡ್ಯದಿಂದ ಬಿಡುಗಡೆ ಯಾವಾಗ? ಈ ಪುಸ್ತಕ ಅದಕ್ಕೊಂದು ಬಿಡುಗಡೆಯ ಹಾದಿ ತೋರಿಸಬಹುದು. ನಿಮ್ಮ ಓದಿನಿಂದ ಅದು ಸಾಧ್ಯ ಆಗಬಹುದು.
-ನೀನಾಸಂ ಸತೀಶ್ ನಾಯಕ ನಟ
ಪುಟಗಳು: 96
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !