ಮುಸಾಫಿರ್‍ - 1 (ಇಬುಕ್)

ಮುಸಾಫಿರ್‍ - 1 (ಇಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

’ಮುಸಾಫಿರ್ ೧’ ಮತ್ತು ’ಮುಸಾಪಿರ್ ೨’. ಈ ಪೈಕಿ ಮೊದಲನೇ ಕೃತಿ ಪ್ರಕಟಗೊಂಡಿದೆ. ಎರಡನೇ ಕೃತಿ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಮಾತ್ರ ಲಭ್ಯವಿದೆ. ಲೇಖಕ ಮತ್ತು ಮೊದಲು ’ಪ್ರಜಾವಾಣಿ’ ಮತ್ತು ಆನಂತರ ’ಆಂದೋಲನ’ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ’ಮುಸಾಫಿರ್’ ಅಂಕಣ ಈಗಾಗಲೇ ಕನ್ನಡಿಗರಲ್ಲಿ ಮನೆಮಾತಾದದ್ದು. ಇಲ್ಲಿ ಲೇಖಕ ಒಬ್ಬ ಅಲೆಮಾರಿಯಾಗಿ ತನ್ನ ಸಂಪರ್ಕಕ್ಕೆ ಬಂದ ಅಸಮಾನ್ಯರು ಮತ್ತು ಸಾಮಾನ್ಯರ ಬಗ್ಗೆ ನೀಡಿದ ಚಿತ್ರಣ ಅಭೂತಪೂರ್ವವಾದದ್ದು. ಇವು ವ್ಯಕ್ತಿ ಚಿತ್ರಗಳಾದರೂ, ಬದುಕಿನ ಪಾಠಗಳನ್ನು ಹೇಳುವ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವ ಬರಹಗಳಾಗಿವೆ. ಈ ಪೈಕಿ ’ಮುಸಾಫಿರ್-1’ ಎರಡು ಮುದ್ರಣ ಕಂಡಿದೆ. ’ಮುಸಾಫಿರ್ ೨’ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಪ್ರಕಟವಾಗುತ್ತಿದೆ.

-ಸತೀಶ್ ಚಪ್ಪರಿಕೆ

 

ಸುಮಾರು ೧೪ ತಿಂಗಳ ಹಿಂದೆ. ಎಷ್ಟೋ ವರ್ಷಗಳಿಂದ ಮನದಾಳದಲ್ಲಿ ಚಿಮ್ಮಿದ್ದ ’ಮುಸಾಫಿರ್‍’ ಅಂಕಣದ ಹೂರಣವನ್ನು ’ಪ್ರಜಾವಾಣಿ’ ಸಂಪಾದಕರಾಗಿದ್ದ ಕೆ.ಎನ್. ಶಾಂತ ಕುಮಾರ್‍ ಅವರ ಬಳಿ ಹಂಚಿಕೊಂಡಿದ್ದೆ. ಅದೂ ವಾಟ್ಸ್ ಆಪ್ ಸಂದೇಶದ ಮೂಲಕ. “ಒಂದು ಸ್ಯಾಂಪಲ್ ಅಂಕಣ ಬರೆದು ಕಳುಹಿಸಿ, ನೋಡೋಣ” ಎಂಬ ಉತ್ತರ ಅವರಿಂದ ಬಂದಿತ್ತು. ಒಂದೆರಡು ಕಲ್ಲು ಕುಟಿಗರ ಸೀತು ಕುರಿತ ಮೊದಲ ಅಂಕಣ ಬರೆದು ಅವರಿಗೆ ಕಳುಹಿಸಿದೆ. ಕೆಲವೇ ದಿನಗಳಲ್ಲಿ “ನೀವು ಪ್ರಸ್ತಾಪ ಮಾಡಿದ ಕಾಲಂ ಕುರಿತು ಮಾತನಾಡಬೇಕು. ಸಂಪಾದಕೀಯ ಸಭೆಗೆ ಬನ್ನಿ” ಎಂಬ ಆಹ್ವಾನ ಬಂತು. ಬೆಂಗಳೂರಿನ ಎಂ.ಜಿ.ರಸ್ತೆಯ ನನಗೆ ಅನ್ನ ನೀಡಿದ- ನನ್ನ ಬದುಕು ರೂಪಿಸಿದ ’ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ಸಭೆಗೆ ಹೋದಾಗ ಸ್ವತಃ ಶಾಂತ ಕುಮಾರ್‍ ಅವರೇ ಅದರ ನೇತೃತ್ವ ವಹಿಸಿದ್ದರು. ’ಮುಸಾಫಿರ್‍’ ಅಂಕಣದ ರೂಪುರೇಷೆಗಳ ಬಗ್ಗೆ ದೀರ್ಘ ಚರ್ಚೆಯಾಯಿತು. ಮಾತ್ರವಲ್ಲ ತಕ್ಷಣ ಅಂಕಣ ಪ್ರಕಟ ಮಾಡುವ ನಿರ್ಧಾರ ಕೂಡ ಒಡಮೂಡಿತು.

ಮೊದಲ ಅಂಕಣ ಪ್ರಕಟವಾದ ಕ್ಷಣದಿಂದ, ೨೬ನೇ ಕೊನೆಯ ಅಂಕಣ ಪ್ರಕಟವಾಗುವವರೆಗೆ ’ಪ್ರಜಾವಾಣಿ’ಯ ಗೆಳೆಯರು ನೀಡಿದ ಬೆಂಬಲಕ್ಕೆ ನಾನು ಚಿರಋಣಿ. ಅದೇ ರೀತಿ ಸುಮಾರು ಒಂದು ವರ್ಷ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹುರಿದುಂಬಿಸಿದ ಓದುಗರ ಪ್ರೀತಿ-ವಿಶ್ವಾಸಕ್ಕೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಬೇಕು ಎಂದು ಅರಿವಾಗುತ್ತಿಲ್ಲ. ಅಂಕಣ ಪ್ರಕಟವಾದ ಆ ೨೬ ಭಾನುವಾರಗಳೂ ನನ್ನ ಜೀವನದ ವಿಶೇಷ ದಿನಗಳಾಗಿದ್ದವು.

ದೂರದ ಅಮೆರಿಕ, ಇಂಗ್ಲೆಂಡ್, ಕುವೈತ್, ದೆಹಲಿ, ಹೈದರಾಬಾದ್, ಚೆನ್ನೈನಿಂದ ಬರುತ್ತಿದ್ದ ಇ-ಮೇಲ್ ಗಳು. ಜೊತೆಗೆ ಕರ್ನಾಟಕದ ಉದ್ದಗಲದಿಂದ ಬರುತ್ತಿದ್ದ ಇ-ಮೇಲ್, ಮೆಸೇಜ್, ವಾಟ್ಸ್ ಆಪ್ ಮೆಸೇಜ್, ದೂರವಾಣಿ ಕರೆಗಳು ಈ ಪಯಣದುದ್ದಕ್ಕೂ ನನ್ನ ಜವಾಬ್ದಾರಿ ಹೆಚ್ಚಿಸುತ್ತಾ ಸಾಗಿದವು. ಆ ಪೈಕಿ ಕೆಲವು ಹಿರಿಯರು “ಒಮ್ಮೆ ನೀವು ಮನೆಗೆ ಬಂದು ಹೋಗಿ” ಎಂದು ಮನವಿ ಮಾಡಿಕೊಂಡರು. ನೂರಾರು ಮಂದಿ ನಮ್ಮೂರಿಗೆ ಬಂದು ಹೋಗಿ ಎಂದು ಒತ್ತಾಯಿಸಿದರು. ಕೆಲವು ಸಭೆ-ಸಮಾರಂಭಗಳಿಗೂ ಆಹ್ವಾನ ಬಂತು. ಆದರೆ, ಲೇಖಕನ ಕೆಲಸ ಕೇವಲ ಬರೆಯುವುದು, ಮಾತನಾಡುವುದಲ್ಲಾ ಅಥವಾ ವೇದಿಕೆಗಳನ್ನು ಏರಿ ಮಿತಿ ಮೀರಿ ಮೆರೆಯುವುದಲ್ಲ ಎಂದು ಬಲವಾಗಿ ನಂಬಿರುವ ನಾನು ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸಲು ಒಪ್ಪಿಕೊಳ್ಳಲಿಲ್ಲ.

ಈ ನಡುವೆ ಹಲವು ಓದುಗರು ನನ್ನ ಮೊಬೈಲ್ ನಂಬರ್‍ ಪಡೆದು, ಕರೆ ಮಾಡಿ ದೀರ್ಘ ಕಾಲ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಹಂಚಿಕೊಂಡರು. ಹೊಸನಗರದ ಪೊಲೀಸ್ ಠಾಣೆಯಲ್ಲಿದ್ದ ಹಾಲೇಶಪ್ಪ ಎಂಬ ಯುವ ಪೊಲೀಸ್ ಒಬ್ಬರು ಬೆಂಗಳೂರಿಗೆ ಬಂದು ನನ್ನ ಜೊತೆ ಎರಡು ಗಂಟೆ ಕೂತು ಮಾತನಾಡಿದರು. ನಾವಿಬ್ಬರು ಜೊತೆಯಲ್ಲಿ ಕೂತು ಊಟ ಮಾಡಿದೆವು. ಕನ್ನಡ ಸಾಹಿತ್ಯದ ಬಗ್ಗೆ, ಅಂಕಣ ಬರಹಗಳ ಕುರಿತು, ಒಟ್ಟಾರೆ ಮಾಧ್ಯಮ ಲೋಕದಲ್ಲಿನ ಆಗು-ಹೋಗುಗಳ ಕುರಿತು ಹಾಲೇಶಪ್ಪ ಅವರು ಮಾತನಾಡುತ್ತಿದ್ದಾಗ ಅವರ ಓದು-ಅನುಭವಕ್ಕೆ ತಲೆದೂಗಿ ಹೋದೆ. ಅದೇ ರೀತಿ ಪ್ರತ್ಯಕ್ಷ- ಪರೋಕ್ಷವಾಗಿ ನನ್ನೊಡನೆ ದೀರ್ಘ ಚರ್ಚೆಗಳನ್ನು ಮಾಡಿದರು. ಆ ಪ್ರೀತಿ- ವಿಶ್ವಾಸ ಹೇಗಿತ್ತು ಎಂದರೆ, ಇನ್ನೂ ಓದುಗರು ಒಳ್ಳೆಯ ಬರಹಗಳಿಗೆ ಹಾತೊರೆಯುತ್ತಿದ್ದಾರೆ ಮತ್ತು ಹಾತೊರೆಯುತ್ತಾರೆ ಎನ್ನುವಂತಿತ್ತು.

ಇನ್ನು ’ಕಲ್ಲುಕುಟಿಗರ ಸೀತು’ವಿನಿಂದ ಹಿಡಿದು ’ಲಲಿತಾ ಟೀಚರ್‍’ವರೆಗೆ ಒಂದು ವರ್ಷದ ಅವಧಿಯಲ್ಲಿ ೨೬ ಮಹನೀಯರ ಜೊತೆ ಹಳೆ ನೆನಪುಗಳೊಂದಿಗೆ ಮರಳಿ ಬದುಕಲು ಸಿಕ್ಕಿದ ಅವಕಾಶವನ್ನು ಅಕ್ಷರಗಳಲ್ಲಿ ಹಿಡಿದಿಡಲು ಅಸಾಧ್ಯ. ನನ್ನ ಪಾಲಿಗೆ ಇದೊಂದು ಪುನರ್ಜನ್ಮ ಎಂದೇ ಹೇಳಬಹುದು. ಇನ್ನೇನು ಅಂಕಣ ನಿಲ್ಲುತ್ತದೆ ಎನ್ನುವಾಗಲೇ ಹುಟ್ಟೂರಿನಿಂದ ಒಂದು ಕರೆ ಬಂತು. ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸುಬ್ರಮಣ್ಯ ಭಟ್ ಮತ್ತು ಹುಟ್ಟೂರಿನ ಅನೇಕ ಹಿರಿಯರ ಒತ್ತಾಯಕ್ಕೆ ನಾನು ತಲೆಬಾಗಲೇಬೇಕಾಯಿತು. ೧೫ನೇ ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ. ’ಮುಸಾಫಿರ್‍’ ಕೃತಿಯನ್ನು ಸಾಹಿತ್ಯ ಸಮ್ಮೇಳನದ ವೇದಿಕೆ ಮೇಲೆ ಬಿಡುಗಡೆ ಮಾಡಲು ಅದರ ಪದಾಧಿಕಾರಿಗಳು ಒಪ್ಪಿಕೊಂಡರು. ಅದಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ಹುಟ್ಟಿದೂರಿನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿರುವುದು ನನ್ನ ಪುಣ್ಯವೇ ಸರಿ.

ನನ್ನೆಲ್ಲ ಬರವಣಿಗೆಗಳಿಗೆ ಶಕ್ತಿ ನೀಡುವ ಕುಟುಂಬದ ಸದಸ್ಯರ ಮತ್ತು ಸ್ನೇಹಿತರ ಒಂದು ಸಣ್ಣ ಗುಂಪೇ ಇದೆ. ಅವರಿಲ್ಲದೇ ಹೋಗಿದ್ದರೆ ಕಾರ್ಪೋರೇಟ್ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ನನಗೆ ಬರವಣಿಗೆ ಮುಂದುವರಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಎಲ್ಲರಿಗೂ ನಾನು ಚಿರಋಣಿ.

 

-ಸತೀಶ್ ಚಪ್ಪರಿಕೆ

 

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !