ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಅನೇಕ ಕುರುಡು ನಂಬಿಕೆಗಳು ಮಕ್ಕಳ ಕುತೂಹಲವನ್ನು ಕೆದಕುತ್ತವೆ. ʻʻಅದೇಕೆʼʼ ʻʻಇದೇಕೆʼʼ ಎಂದು ಅವರು ಹಿರಿಯರನ್ನು ಪೀಡಿಸುತ್ತಾರೆ. ಆದರೆ, ಹೆಚ್ಚಿನ ಕುರುಡು ನಂಬಿಕೆಗಳಿಗೆ ನಮ್ಮ ಹಿರಿಯರಲ್ಲಿಯೂ ಉತ್ತರ ಸಿಗುವುದಿಲ್ಲ. ಅಂಥದ್ದನ್ನು ಪ್ರಶ್ನಿಸಬಾರದು- ಎಂದೇ ಹೆಚ್ಚಿನವರು ಕೊಡುತ್ತಿರುವ ಸಮಜಾಯಿಸಿಕೆ. ಕಾರಂತರ ಬಳಿ ಅಂಥವಕ್ಕೂ ಸ್ವಾರಸ್ಯಕರವಾದ ಉತ್ತರಗಳಿವೆ. ʻʻಸ್ವರ್ಗ ನರಕ ಸತ್ಯವೇʼʼ ಎಂದ ಬಾಲಕನ ಪ್ರಶ್ನೆಗೆ ʻʻಶಾಲೆಗೆ ಹೋಗುವ ಸಣ್ಣ ಮಕ್ಕಳನ್ನು ಸ್ವರ್ಗ, ನರಕಗಳ ಒಳಗೆ ಸೇರಿಸಿಕೊಳ್ಳುವುದಿಲ್ಲ; ಅದರ ಚಿಂತೆ ಬಿಡುʼʼ ಎಂದುತ್ತರಿಸಿ, 9 ವರ್ಷ ಪ್ರಾಯದ ಮಗುವನ್ನು, ಹಿರಿಯರ ಚಿಂತನೆಯಿಂದ ವಿಮುಖ ಮಾಡಿಬಿಡುತ್ತಾರೆ. ʻʻಗ್ರಹಣ ಕಾಲದಲ್ಲಿ ಊಟ ಮಾಡುವುದು ಒಳ್ಳೆಯದಲ್ಲವೆನ್ನುತ್ತಾರೆʼʼ ಎಂದು ಸಂಶಯ ತಾಳಿದ 14 ವರ್ಷದ ಹುಡುಗನಿಗೆ ʻʻಗ್ರಹಣ ಕಾಲದಲ್ಲಿ ವಿಪರೀತ ಕತ್ತಲಾದರೆ ದೀಪಹಚ್ಚಿ ಊಟ ಮಾಡಬಹುದು. ರಾತ್ರಿಯ ಕತ್ತಲಲ್ಲಿ ಪ್ರಾಣಿಗಳು ಆಹಾರ ತಿಂದರೆ ಏನಾದೀತೋ, ಹಗಲಲ್ಲಿ ತಿಂದರೂ ಅದೇ ಫಲ- ಹಾಗೆ ತಿಂದರೆ ಒಳ್ಳೆಯದಲ್ಲ ಎಂಬ ನಂಬಿಕೆ ಗ್ರಹಣವನ್ನು ಕುರಿತ ಭಯದಿಂದ ಹುಟ್ಟಿದ್ದುʼʼ ಎಂದು ತಿಳಿಹೇಳುತ್ತಾರೆ. ʻʻದೇವರನ್ನು ನಾವು ನೋಡಬಹುದೇʼʼ ಎಂದ ಹತ್ತು ವರ್ಷದ ಬಾಲಕಿಗೆ ʻʻಅವನು ನಿನ್ನ ಬಳಿಗೆ ಬಂದಾಗ, ಅವನ ಗುರುತು ನಿನಗೆ ಸಿಕ್ಕಿದರೆ ನೋಡಬಹುದೋ ಏನೋʼʼ ಎಂಬ ತಮಾಷೆಯ ಉತ್ತರದಿಂದ ಮಗು ಯೋಚಿಸುವಂತೆ ಮಾಡುತ್ತಾರೆ. ಈ ಗ್ರಂಥದ ಉದ್ದಕ್ಕೂ ಇಂತಹ ಹಲವಾರು ಪ್ರಶ್ನೋತ್ತರಗಳಿವೆ. ಕಾರಂತರು ಇವಕ್ಕೆಲ್ಲ ಮಕ್ಕಳು ಅರ್ಥಮಾಡಿ ಕೊಳ್ಳಬಲ್ಲ ರೀತಿಯಲ್ಲಿಯೇ ಉತ್ತರಿಸಿ, ಅಂತಹ ನಂಬಿಕೆಗಳು ಅನುಸರಣೀಯವಲ್ಲ ಎಂಬ ಸೂಚನೆಯನ್ನು ಕೊಡುತ್ತಾರೆ. ಲಭಿಸುತ್ತದೆ.
ಪುಟಗಳು: 484
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !