ಬರೆದವರು: ಡಾ. ಶಾಂತಲ
ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್
Publisher: MyLang Books
ಕತೆ ಹೇಳುತ್ತಾ ಹೇಳುತ್ತಾ ಒಂದು ಅದ್ಭುತವಾದ ಭವಿಷ್ಯದ ಜಗತ್ತನ್ನು ನಿರ್ಮಿಸಿ ಬಿಡುತ್ತಾರೆ ಶಾಂತಲಾರವರು. ಅದರಲ್ಲಿ ತೀರ ಮುಂದುವರೆದ ಟೆಕ್ನಾಲಜಿಗಳನ್ನು ನೀವು ನೋಡುತ್ತೀರಿ. ಗುರುತಿಸಲಾಗದಷ್ಟು ಬದಲಾಗಿ ಹೋದ ಮಾನವ ಬದುಕನ್ನು ಕಾಣುತ್ತೀರಿ. ಹಾಗೆಯೇ, ವಿಲಕ್ಷಣವಾದ ಜೀವನ ಮೌಲ್ಯಗಳ ತಿಕ್ಕಾಟವನ್ನೂ ನೋಡಿ ಬೆರಗಾಗುತ್ತೀರಿ. ಅತ್ಯಾಧುನಿಕ ಜಗತ್ತಿನಲ್ಲೂ ಮನುಷ್ಯ ಜೀವಿಯ ಅತಿ ಪುರಾತನ ಸಂವೇದನೆಗಳನ್ನೂ, ತೊಳಲಾಟಗಳನ್ನೂ ನೋಡಿ ನಿಟ್ಟುಸಿರಿಡುತ್ತೀರಿ. ಜೊತೆ ಜೊತೆಗೆ ಎಂದೂ ಅಳಿಸಲಾಗದ ಮನುಷ್ಯನ ಆಶಾಭಾವಕ್ಕೂ, ಹೋರಾಟದ ಚೈತನ್ಯಕ್ಕೂ ಸಾಕ್ಷಿಯಾಗುತ್ತೀರಿ.
ಡಾ. ಶಾಂತಲಾ ಅವರ ಕತೆಗಾರಿಕೆಯ ಬಗ್ಗೆ ಇನ್ನೊಂದು ಮಾತು ಹೇಳಬೇಕು. ಅವರು ಕಟ್ಟಿ ಕೊಡುವ ಹೊಸ ಐಡಿಯಾಗಳನ್ನು authentic ಮಾಡುವಲ್ಲಿ ಅವರದು ಅಪರೂಪದ ಪ್ರತಿಭೆ ಎಂದು ನನಗನ್ನಿಸುತ್ತದೆ. 3019 A.D ಯಲ್ಲಿ ಕಾಣಸಿಗುವ ಟೆಕ್ನಾಲಜಿಗಳು, ಸಂಸ್ಥೆಗಳು, ಅವಕ್ಕೆ ಸಂಬಂಧಪಟ್ಟ ಕಾನೂನುಗಳು ಇವುಗಳ ಹೆಸರುಗಳನ್ನು ನೀವು ನೋಡುತ್ತಿದ್ದರೆ ಅವುಗಳು ವರ್ತಮಾನ ಪತ್ರಿಕೆಗಳಲ್ಲೋ , ಇತಿಹಾಸ ಪುಸ್ತಕಗಳಲ್ಲೋ ಕಂಡುಬರುವ ಹೆಸರುಗಳಷ್ಟು ನೈಜ ಮತ್ತು authentic ಆಗಿವೆ. ಈ ವಿಷಯದಲ್ಲಿ ಅವರು 'Brave New World' ನ ಸುಪ್ರಸಿದ್ಧ ಲೇಖಕ ಆಲ್ಡಸ್ ಹಕ್ಸ್ಲೀ (Aldous Huxley) ಅವರನ್ನು ನೆನಪಿಗೆ ತರುತ್ತಾರೆ.
- ಪವಮಾನ್ ಅಥಣಿ, ಮೈಲ್ಯಾಂಗ್ ಪ್ರಕಾಶನ
3019 AD ಕನ್ನಡದಲ್ಲಿ ಬಂದ ಅತ್ಯಂತ ಹೊಸತಾದ ಕತೆ ಅನ್ನಲು ಯಾವುದೇ ಅಡ್ಡಿಯಿಲ್ಲ. ಲಕ್ಷ ವರ್ಷದ ಹಿಂದೆ ಮನುಷ್ಯರಲ್ಲಿ ಹಲವು ಪ್ರಭೇದಗಳಿದ್ದವು ಎಂದು ನಾವು ಶಾಲೆಯಲ್ಲಿ ಓದುತ್ತಿದ್ದೆವು. ಡಾ.ಶಾಂತಲ ಅವರ ಈ ಕಾದಂಬರಿಯಲ್ಲಿ ಸಾವಿರ ವರ್ಷದ ನಂತರದ ಭೂಮಿಯಲ್ಲಿ ಮತ್ತೆ ಮನುಷ್ಯರಲ್ಲಿ ನಾಲ್ಕೈದು ಪ್ರಭೇದಗಳಿರುತ್ತವೆ, ಆದರೆ ಇವೆಲ್ಲವೂ ನೈಸರ್ಗಿಕವಾಗಿ ವಿಕಸಿತವಾದ ಮನುಷ್ಯರ ಪ್ರಭೇದಗಳಾಗಿರದೇ ಮನುಷ್ಯನು ತನ್ನ ಬುದ್ಧಿ ಶಕ್ತಿಯಿಂದ ನಿಸರ್ಗದ ನಿಯಮಗಳನ್ನು ಮೀರಿ ಹುಟ್ಟು ಹಾಕಿದ ಹೊಸ ಪ್ರಭೇದಗಳಾಗಿರುತ್ತವೆ ಅನ್ನುವುದು ಒಂದು ಮೈನವಿರೇಳಿಸುವ ಕಲ್ಪನೆ. ದೇಶ ದೇಶಗಳ ನಡುವೆ ಇಂದು ಸ್ಪರ್ಧೆಯನ್ನು ನೋಡಬಹುದು, ಆದರೆ 3019 AD ಯಲ್ಲಿ ಭೂಮಿಯೇ ಬೇರೆ ಗ್ರಹಗಳ ಜೊತೆಗೆ ಪೈಪೋಟಿ ನಡೆಸುವ ಕಲ್ಪನೆ ಕನ್ನಡದಲ್ಲಿ ಓದುವ ಅವಕಾಶ ಒದಗಿದ್ದು ಮತ್ತು ಅದರ ಆಡಿಯೋ ಆವೃತ್ತಿಗೆ ದನಿ ನೀಡುವ ಅವಕಾಶ ನನಗೆ ಸಿಕ್ಕಿದ್ದು ನನಗೆ ಅತ್ಯಂತ ಸಂತಸ ಕೊಟ್ಟ ವಿಚಾರ. ಹಾಲಿವುಡ್ ಸಿನೆಮಾಗಳಲ್ಲಿ ಸೈನ್ಸ್ ಫಿಕ್ಷನ್ ಕತೆಗಳು ಅಂದರೆ ಅಲ್ಲಿ ಹಿಂಸೆ, ರಕ್ತಪಾತ ದಂಡಿಯಾಗಿ ಇರುತ್ತೆ, ಆದರೆ ಡಾ.ಶಾಂತಲ ಅವರ ಕಾದಂಬರಿ ರಕ್ತಪಾತ ಇಲ್ಲದೇ, ಮನುಷ್ಯ ಸಂವೇದನೆಯನ್ನು ಕಳೆದುಕೊಳ್ಳದೇ ಒಂದು ಸಂಘರ್ಷದ ಕತೆಯನ್ನು ಸೊಗಸಾಗಿ ಹೇಳುವುದು ಹೇಗೆ ಎಂದು ತೋರಿಸಿಕೊಟ್ಟಿದೆ. ಇದು ಕನ್ನಡ ಓದುಗರಿಗೆ ಖಂಡಿತವಾಗಿಯೂ ಹಿಡಿಸುತ್ತೆ ಎಂದು ನನ್ನ ಗಟ್ಟಿ ನಂಬಿಕೆ.
- ಸಚಿನ್ ನಾಯಕ್, ಧ್ವನಿ ಕಲಾವಿದರು ಮತ್ತು ಸಾಹಿತ್ಯಪ್ರೇಮಿ
ಪುಟಗಳು: 252
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !