ತೇಜಸ್ವಿ ಪತ್ರಗಳು

ತೇಜಸ್ವಿ ಪತ್ರಗಳು

Regular price
$9.99
Sale price
$9.99
Regular price
Sold out
Unit price
per 
Shipping does not apply

ಲೇಖಕರು:

ಗೌರವ ಸಂಪಾದಕರು: ಶ್ರೀಮತಿ ರಾಜೇಶ್ವರಿ ತೇಜಸ್ಟಿ ಶ್ರೀ ಬಿ.ಎನ್‌. ಶ್ರೀರಾಮ್‌

ಸಂಪಾದಕ: ನರೇಂದ್ರ ರೈ ದೇರ್ಲ

 

ಇಲ್ಲಿರುವ ಪತ್ರಗಳು ಪೂರ್ಣಚಂದ್ರ ತೇಜಸ್ವಿಯವರಿಗೆ ಸಂಬಂಧಿಸಿದುದು. ಈ ಕಾರಣಕ್ಕಾಗಿಯೇ ತೇಜಸ್ವಿಯವರನ್ನು ಇಲ್ಲಿ ನಾನು ಪ್ರತ್ಯೇಕವಾಗಿ ಕನ್ನಡಿಗರಿಗೆ ಪರಿಚಯಿಸುವ ಯಾವ ಅಗತ್ಯವು ಇಲ್ಲ. ಒಂದು ತಲೆಮಾರನ್ನು ಎಚ್ಚರಿಸಿದ, ಓದುವ ಆಸಕ್ತಿಯನ್ನು ಬೆಳೆಸಿ ಉಳಿಸಿದ; ಪರಿಸರ ಕಾಳಜಿಯಿಂದ ನೆಲದ ಕೌತುಕ, ಸತ್ಯಗಳನ್ನು ಸರಳವಾಗಿ ಬರೆದ ಅದ್ಭುತ ಲೇಖಕರವರು. “ಕುವೆಂಪು ಅವರ ಕಲಾತ್ಮಕತೆ, ಕಾರಂತರ ಪ್ರಯೋಗಶೀಲತೆ, ಲೋಹಿಯಾ ಅವರ ಸಮಾಜವಾದಿ ಚಿಂತನೆಗಳೇ ನನ್ನನ್ನು ಬೆಳೆಸಿದ್ದು” ಎನ್ನುತ್ತಿದ್ದ ತೇಜಸ್ವಿ ಬರೀ ಲೋಹಿಯಾ-ಸಮಾಜವಾದಿ ಚಳುವಳಿಗಳಿಗಷ್ಟೇ ಸೀಮಿತವಾಗಿರದೆ ಜಾತಿವಿನಾಶ ಹೋರಾಟದಲ್ಲೂ ತೊಡಗಿದ್ದವರು. ಪ್ರಕೃತಿ ಮತ್ತು ಸಮಾಜ ಇವೆರಡರ ತೀವ್ರ ಮುಖಾಮುಖಿ; ಜಾಗತೀಕರಣ, ನವನಾಗರಿಕತೆಯ ತಲ್ಲಣಗಳೇ ಅವರ ಕೃತಿಯ ವಸ್ತುಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಕನ್ನಡದ ಬೇರೆ ಅನೇಕ ಲೇಖಕರಂತೆ ತೇಜಸ್ವಿಯವರು ಆತ್ಮಚರಿತ್ರೆಯನ್ನು ಬರೆದಿಲ್ಲ. ಕುವೆಂಪು ಬಗ್ಗೆ ಬರೆದ ‘ಅಣ್ಣನ ನೆನಪು’ ಕೃತಿಯಲ್ಲಿ ತೇಜಸ್ವಿ ತಮ್ಮ ಬದುಕಿನ ಕೆಲವೊಂದು ಅಂಶಗಳನ್ನು ಪ್ರಾಸಂಗಿಕವಾಗಿ ದಾಖಲಿಸಿದ್ದಾರೆ. ತೇಜಸ್ವಿ ಅಗಲಿದ ಮೇಲೆ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಭಾಗಶಃ ಪೂರ್ಣಚಂದ್ರ ತೇಜಸ್ವಿಯವರ ಜೀವನ ಚರಿತ್ರೆಯೂ ಹೌದು. ತದ ನಂತರ ತೇಜಸ್ವಿಯವರೊಂದಿಗೆ ಒಡನಾಟ ಇಟ್ಟುಕೊಂಡವರು, ಅಭಿಮಾನಿ ಓದುಗರು, ಕೃತಿ ಸಂಬಂಧೀ ಸಂವಾದ ನಡೆಸಿದವರು ಹತ್ತಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದರು. ಅವೆಲ್ಲವನ್ನೂ ಕನ್ನಡದ ಓದುಗರು ಹಳೆಯ ಪ್ರೀತಿ, ಅಭಿಮಾನದಿಂದ ಸ್ವೀಕರಿಸಿದ್ದಾರೆ. ಬರೆದಂತೆ ಬದುಕಿದ ತೇಜಸ್ವಿಯವರ ಬಗ್ಗೆ ಹೊಸದಾಗಿ ಏನೇ ಬರಲಿ ಓದುಗ ಅದನ್ನು ರಭಸದಿಂದಲೇ ಸ್ವೀಕರಿಸುತ್ತಿದ್ದಾನೆ. ಭೌತಿಕವಾಗಿ ಇಲ್ಲದಿದ್ದರೂ ಕೃತಿಪುಟದೊಳಗೆ ತೇಜಸ್ವಿಯವರನ್ನು ಮತ್ತೆ ಜೀವಂತಗೊಳಿಸುವ ಈ ವೇಗ, ಮನಸ್ಥಿತಿ ಅದ್ಭುತವಾದುದು. ಅದರಲ್ಲೂ ಯುವ ಓದುಗರು ತೇಜಸ್ವಿಗಾಗಿ ಹಾತೊರೆಯುವ ಭಾವಕ್ರಮ ಬೆರಗಿನದು.

ತೇಜಸ್ವಿಯವರು ಹುಟ್ಟಿದಾಗ ಶಿವಮೊಗ್ಗದ ದೇವಂಗಿ ಮನೆಯಿಂದ ಮೈಸೂರಿನ ಕುವೆಂಪು ಮನೆಗೆ ಹೋಗುವ ಟೆಲಿಗ್ರಾಂನಿಂದ ತೊಡಗಿ ಮೊನ್ನೆ ಮೊನ್ನೆಯವರೆಗಿನ ಅವರ ಕೊನೆಯ ಪತ್ರದವರೆಗೆ ಸುಮಾರು ಎರಡುಸಾವಿರಕ್ಕಿಂತಲೂ ಹೆಚ್ಚು ಪತ್ರಗಳನ್ನು ನನ್ನ ಕೈಗಿತ್ತು ಇದನ್ನು ಸಂಪಾದಿಸಿ ಪ್ರಕಟಿಸಿ ಎಂದವರು ಶ್ರೀಮತಿ ರಾಜೇಶ್ವರಿಯವರು. ತೇಜಸ್ವಿ ಕುಟುಂಬದೊಳಗೆ ನಾನು ಇರಿಸಿಕೊಂಡಿದ್ದ ಬಂಧುತ್ವ, ನಂಬಿಕೆಯೇ ಇದಕ್ಕೆ ಮುಖ್ಯ ಕಾರಣ ಎಂದು ಇಲ್ಲೇ ತೇಜಸ್ವಿ ಕುಟುಂಬಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮುಂದುವರೆಯುತ್ತೇನೆ.

ಕುವೆಂಪು ತನ್ನ ಮಗನ ಪ್ರಶ್ನೆಗಳೊಳಗೆಯೇ ತೇಜಸ್ವಿಯ ಭವಿಷ್ಯವನ್ನು ನಿಖರವಾಗಿ ಊಹಿಸಿರುವುದಂತು ಸತ್ಯ. ಕುವೆಂಪು ಬರೆದ ‘ಶ್ರೀರಾಮಯಣ ದರ್ಶನಂ’ ಮಹಾಕಾವ್ಯವನ್ನು ಹದಿನೇಳರ ಹರಯದಲ್ಲೇ ಸಂಪೂರ್ಣ ಓದಿ ಅರಗಿಸಿಕೊಂಡ ತೇಜಸ್ವಿ ಭಾವತೀವ್ರತೆಗೆ ಒಳಗಾಗಿ ಸುಪ್ತವಾಗಿ ಹುಟ್ಟಿಕೊಂಡ ಆಸೆ, ಅಭೀಕ್ಷೆ, ಉದ್ಧಾರಾಕಾಂಕ್ಷೆಗಳನ್ನು ಪ್ರಶ್ನೆಯಾಗಿಸಿ ತಂದೆಗೆ ದೀರ್ಘವಾದ ಪತ್ರವೊಂದನ್ನು ಬರೆಯುತ್ತಾರೆ. ಒತ್ತಡಕ್ಕೆ ಒಳಗಾಗಿ ಅದರ ಕೆಲವೊಂದು ಪುಟಗಳನ್ನು ಹರಿದು ಕೆಲವಷ್ಟೇ ವಿವರ ಭಾಗವನ್ನು ತಂದೆಗೆ ಕಳಿಸುತ್ತಾರೆ. ಆಗ ತೇಜಸ್ವಿ ಓದುತ್ತಿದ್ದುದು ಶಿವಮೊಗ್ಗದಲ್ಲಿ. ಓದು-ಪರೀಕ್ಷೆಗಳನ್ನು ನಿರ್ಲಕ್ಷಿಸಿ ಸಾಹಿತ್ಯದ ಗಂಭೀರ ಓದು, ಚಿಂತೆ, ಚಿಂತನೆಯಲ್ಲಿದ್ದ ತೇಜಸ್ವಿ ಮರ್ಮವನ್ನು ಅರಿತ ಕುವೆಂಪು ಮಗನಿಗೆ ಬರೆಯುವ ಆ ಪತ್ರ ಪ್ರಮುಖವಾದುದು. “ನೀನು ಶ್ರೀರಾಮಾಯಣದರ್ಶನಂನ್ನು ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬಾ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಆವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಖಿಕವಾದ ಓದಿಗೂ ಆಕರ್ಷಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ ಎಂತಹ ಮಹೋನ್ನತ ಪ್ರತಿಭೆಯಾದರೂ ಲೋಕದಲ್ಲಿ ಅದು ಪ್ರಕಟಗೊಳ್ಳುವಾಗ ಲೌಖಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಟೆಗಳ ಚೌಕಟ್ಟಿನಲ್ಲಿಯೇ ವಿಕಾಸಗೊಳ್ಳಬೇಕಾದುದು ಅನಿವಾರ್ಯ-ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ವರ್ಷ ಮೈಸೂರಿಗೆ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಮಿಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರೆರಿಯೇ ನಿನಗೆ ಸಾಕು, ಜಗತ್ತಿನ ಅತ್ಯುತ್ತಮತೆಯನ್ನೆಲ್ಲ ಪಡೆಯುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು”. ಬರೀ ಇಷ್ಟೇ ಅಲ್ಲ, ಮೂಡಿಗೆರೆಯ ಹೊಸತೋಟವನ್ನು ಉದ್ಧರಿಸಲು ಹಣದ ಸಹಾಯ ಬೇಕೆಂದು ಕುವೆಂಪು ಅವರಿಗೆ ತೇಜಸ್ವಿ ಬರೆದ ಪತ್ರಗಳು ಇವೆ. ಮಗಳು ತಾರಿಣಿಯ ಮದುವೆ ಸಂದರ್ಭಕ್ಕೆ ‘ಉದಯರವಿಗೆ’ ಬಣ್ಣ ಹಚ್ಚಲು ಮೂಡಿಗೆರೆಯಿಂದ ಡಬ್ಬಿಸುಣ್ಣ ತಾ ಎಂದು ಮಗನಿಗೆ ನೆನಪಿಸುವ ಮಾತುಗಳೂ ಇಲ್ಲಿವೆ. ಶಿವರುದ್ರಪ್ಪ, ಕೋ. ಚೆನ್ನಬಸಪ್ಪ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ್, ಕಡಿದಾಳು ಶಾಮಣ್ಣ, ಕೆ.ರಾಮದಾಸ್, ಬಿ.ಎನ್. ಶ್ರೀರಾಮ್, ನಂಜುಂಡ ಸ್ವಾಮಿ, ಸುಂದರೇಶ್, ಗಿರೀಶ್ ಕಾರ್ನಾಡ್, ದೇವರನೂರು ಮಹಾದೇವ, ವಿಜಯನಾಥ್ ಶೆಣೈ, ಡಿ.ಎಸ್.ನಾಗಭೂಷಣ, ಶಂಕರ್ ಪಾಟೀಲ, ಸಿದ್ದಲಿಂಗ ಪಟ್ಟಣಶೆಟ್ಟಿ, ಶಂಕರ ಮೊಕಾಶಿ ಪುಣೇಕರ್ ಮೊದಲಾದವರೊಂದಿಗೆ ನಡೆಯುವ ಸಾಹಿತ್ಯಕ, ಸಾಮಾಜಿಕ ಚಳವಳಿ ಸಂಬಂಧೀ ವಾಗ್ವಾದಗಳು ಇಲ್ಲಿವೆ. ಇವರಲ್ಲಿ ಅನೇಕರು ಇಂದು ನಮ್ಮೊಂದಿಗೆ ಇಲ್ಲ.

ತೇಜಸ್ವಿ ಬರವಣಿಗೆಯ ಸಂದರ್ಭದಲ್ಲೇ ಲಂಕೇಶ ಪತ್ರಿಕೆ ಹುಟ್ಟಿಕೊಂಡದ್ದು; ಲಂಕೇಶರ ನವ್ಯಕೇಂದ್ರಿತ ಜಿಜ್ಞಾಸೆ, ಲಂಕೇಶ್ ಪತ್ರಿಕೆಯಲ್ಲಿ ತೇಜಸ್ವಿಗೆ ಸಿಗುವ ಅವಕಾಶ, ಪ್ರಜಾವಾಣಿಯ ಓದುಗ ಪುಟ, ರೈತಮುಖಂಡ ನಂಜುಂಡಸ್ವಾಮಿಯ ಹೋರಾಟಗಳು, ಪ್ರಗತಿಪಂಥದ ಸಂಘಟನೆಗಾಗಿ ರಾಜ್ಯ ಸಂಚಾರ, ಅನಂತಮೂರ್ತಿ, ಲಂಕೇಶ, ತೇಜಸ್ವಿ ನಡುವಿನ ವಾಗ್ವಾದಗಳು; ಕುವೆಂಪು ನಾಟಕಗಳನ್ನು ಬಳಕೆಗನ್ನಡಕ್ಕೆ ತಂದ ಜಿ.ಎಸ್. ಶಿವರುದ್ರಪ್ಪನವರು ಗುರುವಾದರೂ ತೇಜಸ್ವಿಯವರು ಎತ್ತಿದ ಪ್ರಶ್ನೆಗಳು ಎಲ್ಲವೂ ಮುಖ್ಯವಾದುವೆ. ಕಾರಂತರಂಥ ಹಿರಿಯ ಲೇಖಕರಿಗೆ ತೇಜಸ್ವಿ ತೋರುವ ಪ್ರೀತಿ, ಗೌರವ ಒಂದು ಬಗೆಯಾದರೆ ಎಲ್ಲೋ ಇರುವ ಅಜ್ಞಾತ ಓದುಗನೊಂದಿಗೆ ಅವರು ನಡೆಸುವ ಸಂವಾದವೂ ಅಷ್ಟೇ ಮಹತ್ವದ್ದು. ಮಂಗಳೂರು ವಿ.ವಿ ಯಲ್ಲಿ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಲ್ಲಿ ಸಮಾಜವಾದ ಹುಟ್ಟಲು ಚೋದಿಸುವ ತೇಜಸ್ವಿ ಪತ್ರಗಳು ಒಂದು ಬಗೆಯಾದರೆ; ಎಲ್ಲೋ ದೂರದ ಸುಳ್ಯದ ಬಲ್ಪ ಗ್ರಾಮದ ಕೃಷ್ಣಪ್ರಸಾದ್ ಎಂಬವರಿಗೆ ತಮ್ಮ ತೋಟದೊಳಗೆ ಅಳವಡಿಸಿದ್ದ ಹೈಡ್ರಾಲಿಕ್ ರ‍್ಯಾಮ್ ನೀರೆತ್ತುವ ಪಂಪಿನ ಬಗ್ಗೆಯೂ ತೇಜಸ್ವಿ ಪತ್ರದಲ್ಲಿ ಮಾಹಿತಿ ಕೊಡುತ್ತಾರೆ.

ಬೇರೆ ಪತ್ರಗಳನ್ನು ಇಡಿಯಾಗಿ ನಿಮಗೇ ಓದಲು ಬಿಟ್ಟು ಕೇವಲ ಒಂದು ಪತ್ರದ ಬಗ್ಗೆ ಮಾತ್ರ ಇಲ್ಲಿ ಉಲ್ಲೇಖಿಸಲೇಬೇಕು. ಕನ್ನಡದಲ್ಲಿ ಓದುಗರನ್ನು ಸೃಷ್ಟಿಸಿದ, ವೃದ್ಧಿಸಿದ ಕೀರ್ತಿ ಎಸ್.ಎಲ್.ಭೈರಪ್ಪನವರಿಗೆ ಸಲ್ಲಬೇಕು ಎಂಬುದು ನಿರ್ವಿವಾದ. ಇದನ್ನು ತೇಜಸ್ವಿಯವರು ಒಂದೆರಡು ಸಂದರ್ಭಗಳಲ್ಲಿ ಹೇಳಿದ್ದರೂ, ಸ್ವತಃ ಭೈರಪ್ಪನವರ ಸಾಹಿತ್ಯವನ್ನೂ ಅವರು ಓದಿದ್ದರೂ ಕನ್ನಡದ ಒಂದಷ್ಟು ಓದುಗರಿಗೆ ಇವರಿಬ್ಬರ ಮನಸ್ಥಿತಿಗಳು ಒಂದಕ್ಕೊಂದು ಕೋದುಕೊಂಡಿಲ್ಲ, ಎಡ ಮತ್ತು ಬಲ ಎಂಬ ನಂಬಿಕೆಗಳಿತ್ತು. ಇಂಥವರನ್ನು ಚಕಿತಗೊಳಿಸಬಲ್ಲ ಒಂದು ಪತ್ರ ಈ ಸಂಪುಟದಲ್ಲಿ ಇದೆ. ೨೦೦೧ ರಲ್ಲಿ ರಾಜ್ಯ ಸರಕಾರ ‘ಪಂಪ ಪ್ರಶಸ್ತಿ’ ಆಯ್ಕೆ ಸಮಿತಿಗೆ ತೇಜಸ್ವಿಯವರನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ. ಅವರು ಎಸ್. ಎಲ್. ಭೈರಪ್ಪರವರ ಹೆಸರನ್ನು ಸೂಚಿಸಿ ಯಾಕೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಬಹುದು ಎಂಬುದಕ್ಕೆ ಕಾರಣವನ್ನು ಈ ರೀತಿ ದಾಖಲಿಸುತ್ತಾರೆ. “ಕಾದಂಬರಿಗಾರನಾಗಿ ಖ್ಯಾತರಾಗಿರುವ ಶ್ರೀಯುತ ಎಸ್.ಎಲ್.ಭೈರಪ್ಪನವರು ಕನ್ನಡ ಗದ್ಯ ಸಾಹಿತ್ಯದ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿದವರು. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಸಾಹಿತ್ಯವನ್ನು ಕೊಂಡು ಓದುವವರ ಸಂಖ್ಯೆಯೇ ನಶಿಸಿಹೋಗುತ್ತಿದ್ದಾಗ ಭೈರಪ್ಪನವರು ಓದುಗ ಸಹೃದಯ ಸಮುದಾಯವನ್ನು ಜೀವಂತವಾಗಿ ಇಟ್ಟವರು. ಸಾಹಿತಿಗಳಲ್ಲಿ ಬಹುಪಾಲು ಪ್ರಶಸ್ತಿ, ಸನ್ಮಾನಗಳ ಬೆನ್ನುಹತ್ತಿರುವ, ಸ್ವಂತ ಅಭಿಮಾನಿಗಳ ಕೂಟವನ್ನು ಕಟ್ಟಿಕೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯ ಅಂತಿಮವಾಗಿ ಲೇಖಕ ಮತ್ತು ಓದುಗರ ನಡುವಿನ ಸಂವಾದವಾಗಿಯೇ ಉಳಿಯಬೇಕಾಗುತ್ತದೆ ಎಂಬ ವಾಸ್ತವವನ್ನು ಮರೆಯದೆ ಇವತ್ತಿಗೂ ಕೃತಿರಚನೆ ಮಾಡುತ್ತಾ ಬಂದಿರುವ ಲೇಖಕ ಶ್ರೀಯುತ ಎಸ್.ಎಲ್.ಭೈರಪ್ಪನವರು. “ಪರ್ವ, ದಾಟು, ತಬ್ಬಲಿಯೇ ನೀನಾದೆ.....” ಇವು ಶ್ರೀಯುತ ಎಸ್.ಎಲ್.ಭೈರಪ್ಪನವರ ಗಮನಾರ್ಹ ಕೃತಿಗಳು”. ತೇಜಸ್ವಿಯವರು ಭೈರಪ್ಪನವರ ಹೆಸರನ್ನಷ್ಟೇ ಅಲ್ಲ ಶ್ರೀಮತಿ ಸಾರಾ ಅಬೂಬಕ್ಕರ್, ಶ್ರೀಯುತ ಕೆ.ಎಸ್. ನಿಸಾರ್ ಅಹಮದ್ ಅವರ ಹೆಸರನ್ನೂ ಪಂಪ ಪ್ರಶಸ್ತಿಗೆ ಸೂಚಿಸಿದ್ದರು.

ತೇಜಸ್ವಿಯವರು ಬೇರೆಯವರಿಗೆ ಬರೆದ ಮತ್ತು ತೇಜಸ್ವಿಯವರಿಗೆ ಬೇರೆಯವರು ಬರೆದ ಕನ್ನಡ- ಇಂಗ್ಲಿಷ್‌ನ ಸುಮಾರು ಏಳೂನೂರಕ್ಕಿಂತಲೂ ಹೆಚ್ಚು ಪತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಅವೆಲ್ಲವೂ ಈಗ ಮುದ್ರಿತ ಏಕರೂಪಗಳು. ಯಥಾವತ್ತಾಗಿ ಯಾವುದೇ, ಯಾರದ್ದೇ ಪತ್ರಗಳನ್ನು ಮುದ್ರಿಸುವುದು ಸಾಧ್ಯವಾದರೂ ಆ ಪ್ರಯತ್ನ ತುಂಬಾ ದುಬಾರಿ ಮತ್ತು ಓದುವುದಕ್ಕೂ ಕಷ್ಟ. ಪುಟಗಳು ದ್ವಿಗುಣಗೊಳ್ಳುತ್ತವೆ. ವೆಚ್ಚ ವಿಪರೀತವಾಗುತ್ತದೆ. ಆದರೂ ಕೆಲವೊಂದು ಮಾದರಿಗಳನ್ನು ಯಥಾವತ್ತಾಗಿ ಹಸ್ತಾಕ್ಷರದಲ್ಲೇ ಮುದ್ರಿಸಿದ್ದೇವೆ.


- ನರೇಂದ್ರ ರೈ ದೇರ್ಲ

 

ಪುಟಗಳು: 618

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !