ಜೀವಜಾಲ

ಜೀವಜಾಲ

Regular price
$2.99
Sale price
$2.99
Regular price
Sold out
Unit price
per 
Shipping does not apply

ಖ್ಯಾತ ವನ್ಯಜೀವಿತಜ್ಞ ಸರ್‌ ಡೇವಿಡ್ ಅಟೆನ್ಬರೋ ಒ೦ದು ಮಾತು ಹೇಳುತ್ತಾರೆ "ನಾವು ಭೂಮಿಗೆ ಒಂದು ಪಿಡುಗಾಗಿದ್ದೇವೆ. ನಮ್ಮ ಜನಸಂಖ್ಯೆಯನ್ನು ನಾವೇ ನಿಯಂತ್ರಿಸಬೇಕು. ಇಲ್ಲವಾದರೆ ಪ್ರಕೃತಿಯೇ ಅದನ್ನು ಮಾಡುತ್ತದೆ' ಎ೦ದು. ಇನ್ನೂ ಪ್ರಕೃತಿ ಆ ಕೆಲಸವನ್ನು ಮಾಡಲು ಆರಂಭಿಸಿಲ್ಲ. ನಾವೂ ಆರಂಭಿಸಿಲ್ಲ. ಒಂದು ಶತಮಾನದ ಹಿಂದೆ ಒಂದು ಶತಕೋಟಿಯ ಆಸುಪಾಸಿನಲ್ಲಿದ್ದ ನಮ್ಮ ಜನಸಂಖ್ಯೆ ಇಂದು ಎಂಟು ಶತಕೋಟಿಯನ್ನು ಸಮೀಪಿಸಿದೆ. ಇಂದು ಹಿಂದೆಂದೂ ಕಂಡುಕೇಳರಿಯದ ಸ್ಟೋಟವೇ ಸರಿ. ತ೦ತ್ರಜ್ಞಾನದಲ್ಲಿ ದಾಪುಗಾಲುಡುತ್ತಿರುವುದು, ಒಂದೊಮ್ಮೆ ಮಾನವಕುಲಕ್ಕೇ ಪಿಡುಗಾಗಿ ಇಡೀ ಊರಿಗೆ ಊರನ್ನೇ ಹೊಸಕಿಹಾಕುತ್ತಿದ್ದ ಪ್ಲೇಗ್, ಸಿಡುಬಿನಂಥ ಭಯಾನಕ ಕಾಯಿಲೆಗಳನ್ನು ವೈದ್ಯವಿಜ್ಞಾನದ ನೆರವಿನಿಂದ ಹೊಸಕಿಹಾಕುತ್ತಿರುವುದು ಇವೆಲ್ಲ ಇದಕ್ಕೆ ಕಾರಣ. ಆದರೆ ನಮ್ಮ ಜನಸಂಖ್ಯೆ ಬೆಳೆದಂತೆ ಭೂಮಿಯ ಗಾತ್ರವೇನೂ ಬೆಳೆಯುತ್ತ ಹೋಗುವುದಿಲ್ಲ ಅಥವಾ ಭೂಮಿಯ ಮೇಲಿರುವ ನೈಸರ್ಗಿಕ ಸಂಪನ್ಮೂಲಗಳೂ ಹೆಚ್ಚುತ್ತ ಹೋಗುವುದಿಲ್ಲ. ಆದರೆ ನಾವು ಅವುಗಳನ್ನು ಬಳಸುವ ಪ್ರಮಾಣ ಮಾತ್ರ ಮಿತಿಯಿಲ್ಲದ೦ತೆ ಏರುತ್ತ ಹೋಗುತ್ತಿದೆ. ಅಟಿನ್‌ಬರೋ ಅವರೇ ಇನ್ನೊಂದೆಡೆ ಹೇಳಿದ್ದಾರೆ. "ಒಂದು ಪರಿಮಿತ ಗ್ರಹದೊಳಗೆ ಅನ೦ತ ಬೆಳವಣಿಗೆಯನ್ನು ನಿರೀಕ್ಷಿಸುತ್ತಿರುವವನು ಒಂದೋ ಹುಚ್ಚನಾಗಿರಬೆೇಕು ಅಥವಾ ಆರ್ಥಿಕತಜ್ಞನಾಗಿರಬೇಕು" ಎಂದು ವ್ಯಂಗ್ಯವಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಭೂಮಿಯ ಮೇಲೆ ಇಂದು ಸುಮಾರು ಹತ್ತುಕೋಟ ಜೀವಿಪ್ರಭೇದಗಳು ಅಸ್ತಿತ್ವದಲ್ಲಿವೆ. ಆದರೆ ಅದರಲ್ಲಿ ಮಾನವ ಪ್ರಭೇದವೊಂದೇ ಸಿಂಹಪಾಲು ಬೇರೆಲ್ಲ ಪ್ರಭೇದಗಳಿಗೆ ಗಂಡಾಂತರಕಾರಿಯಾಗಿದೆ. ಇದು ಪದೇಪದೇ ಹೇಳಿರುವ ಮತ್ತು ಹೇಳುತ್ತಿರುವ ಹಾಗೂ ಮುಂದೆಯೂ ಹೇಳಲಿರುವ ಕ್ಲೀಷೆಯಾಗಿದ್ದರೂ ಇದೇ ಭೂಮಿಯ ದಾರುಣ ಸತ್ಯ. ನಮ್ಮ ಎಲ್ಲ ಆಟಗಳನ್ನೂ ಭೂಮಿತಾಯಿ ಇದುವರೆಗೆ ಮೌನವಾಗಿ ಸಹಿಸಿದ್ದಾಳೆ. ಅಲ್ಲೊಂದು ಇಲ್ಲೊಂದು ಉತ್ಪಾತಗಳು ಆಗಾಗ ಸಂಭವಿಸಿದ್ದರೂ ಭೂಮಿ ಮನುಷ್ಯನ ಮೇಲೆ ದೊಡ್ಡಮಟ್ಟದಲ್ಲಿ ಇನ್ನೂ ಸೇಡು ತೀರಿಸಿಕೊಂಡಿಲ್ಲ. ಆ ದಿನ ಬರುವುದಕ್ಕೆ ಮೊದಲೇ ನಾವು ಎಚ್ಚೆತ್ತುಕೊಂಡು ನಮ್ಮಂತೆ ಬೇರೆ ಜೀವಿಗಳನ್ನೂ ಸೌಹಾರ್ದತೆಯಿಂದ ಕಂಡು ಭೂಮಿಯನ್ನು ರಕ್ಷಿಸಬೇಕಿದೆ. ಅಂಥದ್ದೊಂದು ಪ್ರಯತ್ನ ಮಾನವನಿಂದ ನಡೆಯುತ್ತದೆ ಎಂದು ಆಶಿಸೋಣ.

-ಎಸ್.ವಿ.ಶ್ರೀನಿವಾಸಮೂರ್ತಿ

 

ಆಕಾಶದಲ್ಲಿ ಎಂಥಹಾ ಅದ್ಭುತಗಳಿವೆಯೋ ಅದಕ್ಕೆ ಸರಿಸಾಟಿ ಎಂಬಂತೆ ನಾವಿರುವ ಭೂಮಿ ಮತ್ತು ಸಮುದ್ರದೊಳಗೆ ಸರಿ ಸುಮಾರು ಅದಕ್ಕಿಂತ ಹೆಚ್ಚು ಅದ್ಭುತವಾದ ಜೀವಲೋಕವಿದೆ. ಕಂಡು ಕೇಳರಿಯದ ಆಕಾರ ಹೊತ್ತ ಜೀವಿಗಳು ಕಂಡು ಕೇಳರಿಯದ ರೀತಿಯ ಬದುಕನ್ನೇ ಸಾಗಿಸುತ್ತವೆ. ನಮಗೆ ನಮ್ಮದೇ ಬದುಕು ಹೊರೆ ಎಂದುಕೊಂಡಾಗ ಅದು ತಿಳಿಯುವುದೂ ಇಲ್ಲ. ಹಣ ಸಂಪಾದನೆಯೊಂದೇ ಬದುಕಿನ ಗುರಿ ಎನ್ನುವ ಭ್ರಮೆ ಬಿಟ್ಟು ಬದುಕನ್ನು ಹಗುರ ಮಾಡಿಕೊಂಡು ಈ ಜೀವ ಜಗತ್ತುಗಳ ಕಡೆಯೂ ಒಮ್ಮೆ ಕಣ್ಣು ಹಾಯಿಸಿದರೆ ಬದುಕಿನ ನಿಜವಾದ ಅರ್ಥವೂ ಹೊಳೆಯಬಹುದು.

ಎಲ್ಲಾ ಜೀವಿಗಳ ಬಲವಾದ ಶತ್ರು ಮನುಷ್ಯನೇ. ಅನೇಕ ಜೀವಸಂಕುಲಗಳೇ ಮಾನವನಿಂದ ಅಳಿಯುತ್ತಿವೆ. ತಿಳಿದು ನಡೆಯಬೇಕಾದ ಬಾಧ್ಯತೆಯ ಬಗ್ಗೆ ತಿಳಿಯದಿದ್ದರೆ, ಪ್ರಕೃತಿಯನ್ನು ಹಾಳುಗೆಡವದೆ ಅದರೊಂದಿಗೆ ಹೊಂದಿಕೊಂಡು ಹೋಗುವ ಕಲೆ, ಅನಿವಾರ್ಯತೆಗಳ ಆಳ ಅರಿಯದಿದ್ದರೆ ಮನುಷ್ಯನಿಂದ ಎಲ್ಲವೂ ನಾಶವಾಗುತ್ತದೆ. ಜೊತೆಗೆ ತಿಳಿಯದೆಯೇ ನಮ್ಮ ನಾಶದ ದಾರಿ ನಾವೇ ಹಿಡಿಯುತ್ತೇವೆ. ಪ್ರಕೃತಿ ಮತ್ತು ಜೀವಜಗತ್ತುಗಳ ಚಕ್ರದ ಬಗ್ಗೆ ತಿಳಿದು ಪ್ರಕೃತಿಯಲ್ಲಿರುವುದನ್ನು ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಬೇಕಾದ್ದು ನಮ್ಮ ಧರ್ಮ ಮತ್ತು ಕರ್ಮ. ಇಲ್ಲದಿದ್ದರೆ ಅದರ ಫಲವನ್ನು ನಾವೇ ಅನುಭವಿಸಬೇಕು. ಸಮತೋಲನದಲ್ಲಿ ಸುಖವಿದೆ ಎನ್ನುವುದೂ ಜಗತ್ತಿನ ನಿಯಮವೇ. ಜಗತ್ತಿನಲ್ಲಿ ಹೀಗೆಲ್ಲಾ ಇದೆ ಎಂದು ಒಂದು ಮಟ್ಟಕ್ಕಾದರೂ ನಮಗೆ ಜ್ಞಾನ ಬೇಕು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆ ನಾವಾಗಿ ಹಾಗೇ ಬದುಕನ್ನೂ ಕಳೆದು ಬಿಡುತ್ತೇವೆ.

ಈ ಭೂಮಿಯ ಅಪರೂಪದ ಪ್ರಾಣಿವೈಚಿತ್ರ್ಯಗಳ ಬಗ್ಗೆ ರೋಚಕ ವಿವರಗಳೊಂದಿಗೆ ಸಾಮಾನ್ಯರಿಗೂ ತಲುಪುವಂತೆ ಬರೆದಿದ್ದಾರೆ ಕೃತಿಯ ಲೇಖಕ ಶ್ರೀಯುತ ಶ್ರೀನಿವಾಸಮೂರ್ತಿಯವರು. ಅವರಿಗೊಂದು ಧನ್ಯವಾದ ಹೇಳಿಯೇ ಕೃತಿಯಲ್ಲೇನಿದೆ ಎಂದು ನೋಡಬಹುದು. 

-ಗಿರಿಮನೆ ಶ್ಯಾಮರಾವ್ 

 

ಪುಟಗಳು: 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !