ಬೇರು (ಇಬುಕ್)

ಬೇರು (ಇಬುಕ್)

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

ಬೇರು ಮತ್ತು ವರ್ಜಿನ್ ಮೊಹಿತೊ ಎರಡೂ ಕಥಾ ಸಂಕಲನಗಳು. ಈ ಎರಡೂ ಸಂಕಲನಗಳ ನಡುವೆ ೧೮ ವರ್ಷಗಳ ಅಂತರವಿದ್ದರೂ ಅಲ್ಲಿರುವ ಹದಿನಾರು ಕಥೆಗಳು ಈ ಲೇಖಕ ಮೂಲತಃ ಒಬ್ಬ ಕಥೆಗಾರ ಎನ್ನುವುದನ್ನು ಸಾಬೀತು ಮಾಡುತ್ತವೆ. ಇಲ್ಲಿ ಗ್ರಾಮೀಣ- ನಗರ ಸಂವೇದನೆಗಳ ಹದವಾದ ಮಿಶ್ರಣ ಮತ್ತು ಸರಾಗವಾಗಿ ಓದಿಸಿಕೊಂಡು ಹೋದರೂ ಓದುಗರನ್ನು ಯೋಚನೆಗೆ ತಳ್ಳುವ, ಬಡಿದೆಬ್ಬಿಸುವಂತಹ ಕಥೆಗಳಿವೆ. ಒಬ್ಬ ಪತ್ರಕರ್ತ ಕಥೆ ಬರೆಯಲು ಹೋದಾಗ ಅವು ಗೊತ್ತಿಲ್ಲದೇ ’ವರದಿ’ಗಳಾಗುವ ಅಪಾಯ ಇದ್ದೇ ಇರುತ್ತದೆ. ಆದರೆ, ಈ ಲೇಖಕ ಅತ್ಯಂತ ಸಹಜವಾಗಿ ಆ ಅಪಾಯದಿಂದ ಮುಕ್ತವಾಗಿ ಅತ್ಯಂತ ಸರಾಗವಾಗಿ ಕಥೆಗಳನ್ನು ಹೆಣೆದಿದ್ದಾರೆ.

- ಸತೀಶ್ ಚಪ್ಪರಿಕೆ

 

ಎಡಮಾವಿನ ಹೊಳೆ, ಹಳೆಯ ಸಾರ, ಅಲಿ ಸಾಹೇಬರ ಅಂಗಡಿ ಪಕ್ಕದಲ್ಲಿದ್ದ ಮಾವಿನ ತೋಪಿನ ತೋತಾಪುರಿ, ಕಲ್ಲುಕುಟಿಗರ ಸೀತು, ಬಾಡಿಕುಪ್ಪ, ಐಡಿ ಕೃಷ್ಣ.... .

ನಾಗೂರನ್ನು ಬಿಟ್ಟು ಹದಿನೇಳು ವರ್ಷಗಳು ಕಳೆದಿದ್ದರೂ ಈ ಎಲ್ಲಾ ಚಿತ್ರಗಳು ಈಗಲೂ ನನ್ನನ್ನು ಕಾಡಿಸುತ್ತಲೇ ಇವೆ. ಇನ್ನು ಮುಂದೆ ಕೂಡ ಕಾಡುತ್ತಲೇ ಇರುತ್ತವೆ ಎನ್ನುವ ನಂಬಿಕೆ ಕೂಡ ಇದೆ.

ಸುಮಾರು ಹತ್ತು ವರ್ಷಗಳ ಹಿಂದೆ ಅಂತಹುದೇ ಒಂದಿಷ್ಟು ಚಿತ್ರಗಳು ನನ್ನ ಲೇಖನಿಯಿಂದ ‘ಅರ್ಥ’ ರೂಪದಲ್ಲಿ ಹೊರ ಚಿಮ್ಮಿದ್ದವು. ಅಷ್ಟರೊಳಗೆ ಗೆಳೆಯ ಕಾಂತರಾಜುವಿನ ಸಿ.ಕೆ. ಸರ್ಕ್ಯುಲೇಟಿಂಗ್ ಲೈಬ್ರರಿ ಯಲ್ಲಿದ್ದ ಶಿವರಾಮ ಕಾರಂತ, ಎಸ್.ಎಲ್. ಭೈರಪ್ಪ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್ ಮತ್ತು ಶಾಂತಿನಾಥ ದೇಸಾಯಿ ಅವರ ‘ಪರಿಚಯ’ ಆಗಿತ್ತು.

ಕಾಂತರಾಜುವಿನ ಸಹವಾಸದ ಫಲವಾಗಿ ಓದುವ ಹುಚ್ಚು ಹಿಡಿದು ಎರಡು ವರ್ಷಗಳಾಗುವಷ್ಟರಲ್ಲಿಯೇ ನಾನೂ ಕಾದಂಬರಿಕಾರನಾಗಿದ್ದೆ! ಲೈಬ್ರರಿಯೊಂದಿಗೆ, ಪುಸ್ತಕ ಪ್ರಕಟಣೆಯನ್ನು ಮಾಡುತ್ತಿದ್ದ ಕಾಂತರಾಜುವಿನ ಒತ್ತಾಯಕ್ಕೆ ಮಣಿದು ನಾನೊಂದು ಕಾದಂಬರಿ ಬರೆದಿದ್ದೆ. ಆಗ ನನಗೆ ಇಪ್ಪತ್ತು ವರ್ಷ ವಯಸ್ಸು. ಮೊದಲ ಬಾರಿಗೆ ಹಸ್ತಪ್ರತಿ ನೋಡಿದ ಕಾಂತರಾಜು, ಆ ಕೃತಿಯ ಮುಖಪುಟ ಚಿತ್ರ ಬರೆಸಿದ್ದ. ‘ಮುಸುಕಿದ ಮೋಡ’ ಎಂಬ ಶೀರ್ಷಿಕೆ ಹೊತ್ತಿದ್ದ ಆ ಕೃತಿಯ ಮುಖಪುಟ ಸಿದ್ಧವಾಗಿತ್ತು. ಅಚ್ಚಿಗಾಗಿ ನಾಲ್ಕು ಬ್ಲಾಕ್‌ಗಳು ಸಿದ್ಧವಾಗಿದ್ದವು. ಕೊನೆಗೊಂದು ದಿನ ಇದ್ದಕ್ಕಿದ್ದಂತೆ ನಾನು ಆ ಹಸ್ತಪ್ರತಿಯನ್ನು ಸುಟ್ಟು ಹಾಕಿದೆ. ‘ಮುಸುಕಿದ ಮೋಡ’ ಕೃತಿಯ ಮಹಾಯಾಗವಾದ ಮೇಲೆ ನಾನು ಬರೆದ ಮೊದಲ ಕಥೆ ‘ಅರ್ಥ’ ಅದರ 1992ರಲ್ಲಿ ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಯಿತು.

ಅದಾದ ನಂತರ ಪ್ರತಿ ವರ್ಷಕ್ಕೆ ಒಂದರಂತೆ ಕಥೆ ಬರೆಯಲಾರಂಭಿಸಿದೆ. 1994ರಲ್ಲಿ ‘ಬೇರು’ ಮತ್ತು 1996ರಲ್ಲಿ ‘ಮರ’ ಕಥೆಗೆ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿಗಳು ಬಂದ ಮೇಲೆ ನನ್ನ ಬರವಣಿಗೆಯ ಬಗ್ಗೆ ನನ್ನಲ್ಲಿ ಭರವಸೆ ಮೂಡಿತು.

ಆ ಭರವಸೆ ಮೂಡಿದ ಮರುವರ್ಷವೇ ನಾನು ‘ಪ್ರಜಾವಾಣಿ’ಯ ಅಂಗವಾದೆ. ಅನಂತರ ಕೆಲವು ‘ನಿಗೂಢ’ ಕಾರಣಗಳಿಂದ ಕಥ ಬರೆದು ಅವು ಓದುಗರನ್ನು ತಲುಪಲಿಲ್ಲ.

ಈ ನಡುವೆ ಬದುಕೆಂಬ ಹೊಳೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿತ್ತು. ಎಲ್ಲೋ ಮನಸ್ಸಾದಾಗ ಯಾವುದೋ ಒಂದು ಕಾಗದದ ಚೂರಿನ ಮೇಲೆ ಕಥೆಯ ಒಂದಿಷ್ಟು ಭಾಗವನ್ನು ಬರೆದು, ಕೊನೆಗೆ ‘ಹೇಗಿದ್ದರೂ ಇದು ಪ್ರಕಟವಾಗುವುದಿಲ್ಲ’ ಎಂದು ಅರಿವಾದಾಗ ಆ ಕಾಗದವನ್ನು ಬದಿಗೆ ಸರಿಸಿಡುತ್ತಾ ಕಾಲ ಕಳೆದೆ. ಆರು ವರ್ಷಗಳ ಕಾಲ.

ಒಂದು ವರ್ಷದ ಹಿಂದೆ ಹಿರಿಯರಾದ ಪ್ರಕಾಶ್ ಕಂಬತ್ತಳ್ಳಿ ಹಾಗೂ ಅವರ ಪತ್ನಿ ಪ್ರಭಾ ನಿಮ್ಮ ‘ಕಥಾ ಸಂಕಲನ’ವನ್ನು ನಾವು ಪ್ರಕಟಿಸುತ್ತೇವೆ ಎಂದಾಗ ಒಳಗಿದ್ದ ಕಥೆಗಾರನಿಗೆ ಮತ್ತೆ ಜೀವ ಬಂತು. ಜೀವ ಹೋಯಿತು. ಕೊನೆಗೆ ಮತ್ತೆ ಜೀವ ಬಂತು ಪರಿಣಾಮ ಈಗ ಈ ‘ಬೇರು’ ನಿಮ್ಮ ಕೈಯಲ್ಲಿದೆ.

ಒಬ್ಬ ವ್ಯಕ್ತಿಯಾಗಿ ನನಗೆ ಹೇಗೆ ಎರಡು ವಿಭಿನ್ನ ಆಯಾಮಗಳಿವೆಯೋ, ಅದೇ ರೀತಿಯಲ್ಲಿ ಈ ಸಂಕಲನಕ್ಕೆ ಎರಡು ಆಯಾಮಗಳಿವೆ. ಸಂಕಲನ ಆರಂಭದ ನಾಲ್ಕು ಕಥೆಗಳಾದ ‘ಅರ್ಥ’, ‘ಸೇತುವೆ’, ‘ಬೇರು’ ಮತ್ತು ‘ಮರ’ ನನ್ನ ನಾಗೂರಿನ ಕಾಡುವ ಚಿತ್ರಗಳಾಗಿವೆ. ಸಂಕಲನದ ಉಳಿದ ಕಥೆಗಳು ನಾಗೂರು ಎನ್ನುವ ನನ್ನ ಬದುಕಿನ ಕೇಂದ್ರ ಬಿಂದುವಿನಿಂದ ದೂರ ಸರಿದಾದ ಮೇಲಿನ ಪ್ರಯತ್ನಗಳು.

ನನ್ನ ಈ ಎರಡು ಆಯಾಮಗಳ ಪೈಕಿ ಯಾವುದು, ಯಾರಿಗೆ ಪ್ರಿಯವಾಗುತ್ತದೆ? ಎನ್ನುವ ಬಗ್ಗೆ ನಾನು ಚಿಂತೆ ಮಾಡಲಾರೆ. ಏನಿದ್ದರೂ ‘ಬೇರು’ ಬಿಡುವ ನನ್ನ ಈ ಯತ್ನ ಪ್ರಾಮಾಣಿಕವಾದದ್ದು ಎಂದಷ್ಟೇ ಹೇಳಬಲ್ಲೆ.

 

ಸತೀಶ್‌ ಚಪ್ಪರಿಕೆ

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !