"ಮಿಸ್ಡ್ ಕಾಲ" ಮಲೆನಾಡಿನ ಕಥಾನಕಗಳ ಸರಮಾಲೆ. ಒಂದು ತಲೆಮಾರಿನ ಮಲೆನಾಡು ಈಗ "ಮಿಸ್" ಆಗಿದೆ. ಆ "ಕಾಲ" ಇಲ್ಲವಾಗಿದೆ.ಮಲೆನಾಡಿನ ಕಣಿವೆಗಳಲ್ಲಿ, ಗುಡ್ಡಗಳ ಎತ್ತರದಲ್ಲಿ, ತಗ್ಗಿನಲ್ಲಿ, ಅದರಾಚೆಯಲ್ಲಿ, ಇಳಿಜಾರಿನಲ್ಲಿ, ಗದ್ದೆ ಬಯಲಿನಲ್ಲಿ, ಹೊಳೆಯ ದಡದಲ್ಲಿ ನಿತ್ಯ ಹುಟ್ಟುವ ಸಂಗತಿಗಳು, ಮಾನವೀಯತೆಯ ಘಟನೆಗಳು, ಅಳಿಯದ ಸಂಬಂಧಗಳು ಕುತೂಹಲ ಹುಟ್ಟಿಸುತ್ತದೆ. ಯಾವುದೋ ಕಾಲಘಟ್ಟದಲ್ಲಿ ಶುರುವಾದ ಕೆಲ ಕೆಟ್ಟ ಆಚರಣೆಗಳು ವಿಷಾದ ಹುಟ್ಟಿಸುತ್ತದೆ. ಬೇಸರ ಮೂಡಿಸುತ್ತದೆ. ಇಂತಹ ನೋಡಿದ, ಕೇಳಿದ ಘಟನೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಉದ್ದೇಶದಿಂದಲೇ ಬರೆದ ಈ ಕಥೆಗಳು ನಿಮ್ಮ ಮುಂದಿವೆ.
ಮಲೆನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಟ್ಟಿನ ಕಿರು ಚಿತ್ರಣವಂತೂ ಇಲ್ಲಿ ಸಿಗುತ್ತದೆ. ಹೊಸ ತಲೆಮಾರು ಹಳೆಯದನ್ನು ಮರೆತು ಅದೆಲ್ಲೋ ದೂರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿಯೇ ಇದ್ದರೂ ಒಂದೆರಡು ತಲೆಮಾರಿನ ಅಂತರದಲ್ಲಿ, ಆಧುನಿಕತೆಯ ಸ್ಪರ್ಶದಲ್ಲಿ ಬದಲಾಗಿ ಹೋಗಿದ್ದಾರೆ. ಇನ್ನೊಂದು ತಲೆಮಾರು ಸರಿದರೆ ಅವರಿಗೆ ಆ ಹಳೆಯ ಮಲೆನಾಡಿನ ಚಿತ್ರಣ ಎಂದೆಂದೂ ಅಪರಿಚಿತವಾಗಿಯೇ ಉಳಿದು ಬಿಡುತ್ತದೆ. ಹೀಗಾಗಿ ಇದೆಲ್ಲವನ್ನೂ ಕಟ್ಟಿಕೊಡುವ ಪ್ರಯತ್ನವೊಂದನ್ನು ಇಲ್ಲಿ ಮಾಡಲಾಗಿದೆ. ಇಡೀ ಪುಸ್ತಕವನ್ನು ಓದುವಾಗ ಒಮ್ಮೆ ಮಲೆನಾಡಿನಲ್ಲಿ ವಿಹರಿಸಿ ಬಂದಂತೆ ಭಾಸವಾಗುತ್ತದೆ.
ಪುಟಗಳು : 128