ಅಚ್ಚಗನ್ನಡ ನುಡಿಕೋಶ (ಇಬುಕ್)

ಅಚ್ಚಗನ್ನಡ ನುಡಿಕೋಶ (ಇಬುಕ್)

Regular price
$10.99
Sale price
$10.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ಆವ ಪಾಲ್ಗಡಲ ಪಾಲ್ ಮೊಲೆಗಳೆಲ್ಲವ ತುಂಬಿ
ಹೂಜೇನು ಹಣ್ಗಳ ಸೀಯಾಗಿ ಮುಂತೆ
ಬಗೆ ಬಗೆ ಸವಿಯಾಗಿ ಹೊನಲಾಗಿ ಕಾವುದೋ
ಪಾಲ್ಗಡಲದಕೆ ಮಣಿವೆ ಮೊದಲಂತೆ

ನಮ್ಮ ತಂದೆಯವರ ಈ ಕೃತಿಯನ್ನು ಕನ್ನಡಿಗರ ಮುಂದಿಡುವ ಹೊತ್ತು ಅವರ ನುಡಿವಣಿಯ ಪ್ರಾರ್ಥನಾ ಸ್ತುತಿಯಿಂದಲೇ ನಮ್ಮ ಮಾತು ಪ್ರಾರಂಭಿಸುತ್ತಿದ್ದೇವೆ.

ಕನ್ನಡವು ಅಳವುಳ್ಳ ಭಾಷೆ. ಸರಳವೂ, ಸ್ವತಂತ್ರವೂ ಆದ ನುಡಿ. ಸಾವಿರ ವರ್ಷಗಳ ಹಿಂದಿನಿಂದ ಬಾಳಿದ ನುಡಿ. ಇಂದಿಗೂ ಬೆಳೆಯುತ್ತಿರುವ ನುಡಿ. ಆದರೆ ಹೆರರ ನುಡಿಯೊಡವೆಗಳ ಸಾಲದಿಂದಲೇ ಬೆಳೆಯುವಂತೆ ತೋರುತ್ತದೆ. ಮಾರ್ಕೊಳ್ಳುವ ಬಗೆಯಿಂದಲೇ ನಮ್ಮ ತಿಳಿವು ಬೆಳೆಯಬೇಕು ನಿಜ. ಆದರೆ ಕೊಳ್ಳುವ ಸಾಲವೇ ಹೆಚ್ಚಾದರೆ ನಮ್ಮೊಡವೆಗಳ ಪಾಡು? ಕನ್ನಡದ ಹೊನ್ನಿನಂತಹ ನುಡಿಗಳನ್ನು ನಾವು ಹೆಚ್ಚಾಗಿ ಬಳಸದೆ ಅವು ಒಂದೊಂದಾಗಿ ಕಣ್ಮರೆಯಾಗುತ್ತಿವೆ, ಮಣ್ಮರೆಯಾಗುತ್ತಿವೆ. ನಮ್ಮ ನುಡಿಗಳನ್ನು ಆಯ್ದು ಬಳಸಬೇಕು. ಸಾಲದೆಡೆ ಪರರಿಂದ ಸಾಲ ತರಬೇಕು.

ಬಗೆಯನ್ನರಳಿಸಿ ಎಚ್ಚರದಿಂದ ಬರೆಯತೊಡಗಿದರೆ ಕನ್ನಡದಲ್ಲೇ ನಾವು ಕಂಡ ಚೆಲ್ವನ್ನು, ಉಂಡ ಸವಿಯನ್ನು, ಮನದ ಆಸರಿಕೆ ಬೇಸರಿಕೆಗಳನ್ನು ಚೆನ್ನಾಗಿ ಸವಿಯುವಂತೆ ಮಾಡಬಹುದು. ಈ ಕನಸು ಕಂಡವರು ನಮ್ಮ ತಂದೆಯವರು. ಈ ಕನಸಿನ ಬಿತ್ತ ನೆನಸಿನ ಮರವಾಗಿ ‘ಕಾಲೂರ ಚೆಲುವೆ’ ಎಂಬ ಹಾಡೇ ಒಡಲಾದ ಬರಹವನ್ನು ಬರೆದರು. ಹಳೆಯ ನುಡಿವಳಿ, ಹೊಸ ನಡೆವಳಿಗಳನ್ನು ಬೆಸೆದು ಹೊಸ ಬಗೆಯ ಚೆಲುವನ್ನು ಕಂಡರು. ಕವಿಯ ಪರಿಸರ ಪ್ರಜ್ಞೆ, ಸಾಮಾಜಿಕ ಕಳಕಳಿ, ಆಳವಾದ ಜೀವನಾನುಭವ, ಕನ್ನಡದ ಒಲವುಗಳ ಚೆನ್ನೊಡಲು ‘ಕಾಲೂರ ಚೆಲುವೆ’. ಮುಂದೆ ‘ಕಾಲೂರ ಚೆಲುವೆ’ಯ ಒಡಹುಟ್ಟೆನ್ನುವಂತೆ ‘ನುಡಿವಣಿಗಳು’ ಎಂಬ ಸಾವಿರದ ಮುಕ್ತಕಗಳನ್ನು ರಚಿಸಿದರು. ಇದರಲ್ಲಿ ಹಳೆಯ ಸೃಷ್ಟಿ, ಹೊಸ ದೃಷ್ಟಿಗಳ ಸಂಗಮವಿದೆ. ಈ ಹೊತ್ತಗೆ ದೈವೀಶಕ್ತಿ, ಪ್ರಕೃತಿಯ ಸ್ವರೂಪ, ಜೀವನದ ವಿವಿಧ ಮುಖಗಳ ಕುರಿತು ಆಳವಾದ ಚಿಂತನ ಮಂಥನ ಹೀಗೆ ಹಲವು ಅನುಭವ ವಿಶೇಷಗಳ ಒಂದು ಪುಟ್ಟ ಪ್ರಪಂಚ.

ಈ ಎರಡು ಅಚ್ಚಗನ್ನಡ ಕೃತಿಗಳಲ್ಲೂ ಅಪೂರ್ವ ಪದ ಪ್ರಯೋಗಗಳಿವೆ. ನೂತನ ಶಬ್ದ ಸೃಷ್ಟಿಯಿದೆ. ಕನ್ನಡದ ಮೇಲಿನ ಹೆಚ್ಚಿನ ಒಲವುಳ್ಳ ಇವರ ಗದ್ಯ ಬರಹಗಳಲ್ಲಿಯೂ ಅಚ್ಚಗನ್ನಡದ ಅಚ್ಚೊತ್ತಿದೆ.

ಕಲಾರಾಧಕ ಮನೆತನದಲ್ಲಿ ಜನಿಸಿದ ಇವರು ಬಡತನದ ನಡುವೆ ಬೆಳೆದು ಜೀವನದ ಬಹುಭಾಗವನ್ನು ಅಧ್ಯಾಪಕ ವೃತ್ತಿಯಲ್ಲಿಯೇ ಕಳೆದರು. ಇವರಿಗೆ ವ್ಯಾಸಂಗದ ಒಲವು ಬಹಳ. ಮುಂದೆ ಅಧ್ಯಾಪಕ ವೃತ್ತಿಗೆ ಹೆಜ್ಜೆಯಿಡುವ ಕಾಲದಲ್ಲಿ ಎಂ.ಎನ್‌.ಕಾಮತ್, ಉಗ್ರಾಣ ಮಂಗೇಶರಾಯರಂತಹ ಸಾಹಿತಿಗಳ ಒಡನಾಟವು ಸಾಹಿತ್ಯಾಸಕ್ತಿಯನ್ನು, ಸಾಹಿತ್ಯ ರಚನೆ ಅಭಿರುಚಿಯನ್ನು ಹೆಚ್ಚಿಸಿತು. ಶಾಲೆಯಲ್ಲಿ ಕಲಿತ ವಿದ್ಯಾಭ್ಯಾಸ ನಾಲ್ಕನೆಯ ತರಗತಿಯ ಅವರೆಗೆ. ಯಕ್ಷಗಾನ ಕಲೆಯಲ್ಲಿ ಆಸಕ್ತಿಯಿದ್ದ ಇವರು ಆ ಕ್ಷೇತ್ರಕ್ಕೂ ತಮ್ಮ ಸೇವೆಯನ್ನು ಸಲ್ಲಿಸಿರುವರು. ಯಕ್ಷಗಾನ ಅರ್ಧಧಾರಿಗಳೂ, ಪ್ರಸಂಗ ಕರ್ತರೂ ಆದ ಇವರು ‘ನೆಲ್ಲೂರಗೆಲ್ಲ' ‘ಅಂಧಕಾಸುರ ಕಾಳಗ’ ಮುಂತಾದ ಯಕ್ಷಗಾನ ಕೃತಿಗಳನ್ನು ರಚಿಸಿರುವರು. ಹಸ್ತ ಸಾಮುದ್ರಿಕಾ ಶಾಸ್ತ್ರ, ಜ್ಯೋತಿಶ್ಯಾಸ್ತ್ರದಲ್ಲೂ ಆಸಕ್ತಿಯಿದ್ದ ಇವರು ಅದಕ್ಕೆ ಸಂಬಂಧಿಸಿದ ಎರಡು ಹೊತ್ತಗೆಗಳನ್ನು ಬರೆದಿರುವರು: ೧) ಬೆರಳುಗಳಿಂದ ಅದೃಷ್ಟ ೨) ಹಸ್ತ ಸಾಮುದ್ರಿಕಾ ಶಾಸ್ತ್ರ. ಇವರದು ಬಹುಮುಖ ಸಾಹಿತ್ಯಾಭಿರುಚಿ. ಬಿಡಿಕವನ, ಸಣ್ಣಕತೆ, ನಾಟಕ, ಕಾವ್ಯ, ಮುಕ್ತಕಗಳು, ಗದ್ಯಸಾಹಿತ್ಯ ಇವುಗಳಲ್ಲೆಲ್ಲ ಇವರ ಸೃಜನಶೀಲತೆ ಚೆಲ್ಲವರಿದಿದೆ. ಅಧ್ಯಾಪಕರಾಗಿದ್ದು ಮಕ್ಕಳ ಮನೋಧರ್ಮವನ್ನರಿತ ಇವರ ‘ಹೂವೀಡು’ ‘ಮಾತಿಲ್ಲಾ ಮಾತಿಲ್ಲಾ' ಎರಡು ಶಿಶು ಸಾಹಿತ್ಯಕೃತಿಗಳು. ಸಾಮಾಜಿಕ ಸಮಸ್ಯೆಗಳನ್ನು ಕುರಿತು ನಾಟಕಗಳು ‘ತಾಳಿ’ , ‘ತಲೆಯಂತೆ ಬಾಲ’ ಇತ್ಯಾದಿ.

ನಮ್ಮ ತಂದೆಯವರು ಎಳವೆಯಿಂದಲೇ ಸಾಹಿತ್ಯಾಭ್ಯಾಸಿ, ಕವಿ. ನಾಡೋಜ ಪಂಪನ ಕಾವ್ಯಗಳನ್ನು, ಕೇಶಿರಾಜನ ಶಬ್ದಮಣಿದರ್ಪಣವನ್ನು ಇವರು ಚೆನ್ನಾಗಿ ಅಭ್ಯಾಸ ಮಾಡಿದ್ದರು. ವಡ್ಡಾರಾಧನೆಯ ಕೆಲವು ಅಪೂರ್ವ ಕನ್ನಡ ನುಡಿಗಳು ಇವರನ್ನು ಬೆರಗುಗೊಳಿಸಿದ್ದುವು. ಮುದ್ದಣನ ರಾಮಾಶ್ಚಮೇಧ ಇವರ ಮೆಚ್ಚಿನ ಕೃತಿಯಾಯಿತು. ಇವುಗಳಿಂದೆಲ್ಲ ಪ್ರಭಾವಿತರಾದ ಇವರು ಈ ನವ್ಯಯುಗದಲ್ಲಿ ಅಚ್ಚಗನ್ನಡದ ಹರಿಕಾರರಾದರು. ಹೆಚ್ಚು ಒತ್ತಿಲ್ಲದ, ಸರಳ ಆದರೆ ತಿರುಳಾದ ಕನ್ನುಡಿಯ ಮೆಲ್ಪನ್ನು ಸವಿಯತೊಡಗಿದರು. ಅಚ್ಚಗನ್ನಡ ಕಾವ್ಯರಚನೆಯಿಂದಲೇ ತೃಪ್ತರಾಗದೆ ಅಚ್ಚಗನ್ನಡ ನಿಘಂಟು ರಚನೆಗೆ ಮುಂದಾದರು. ಸರ್ವಜ್ಞನಂತೆ ಏಕಾಂಗಿಯಾಗಿ ಸಿಕ್ಕಲ್ಲಿ ತನ್ನ ಜೋಳಿಗೆಗೆ ಕನ್ನಡ ಪದಗಳನ್ನು ತುಂಬಿಕೊಂಡರು. ಸತತ ಪರಿಶ್ರಮದಿಂದ ಅಧ್ಯಯನ ನಡೆಸಿ ಹೊಸ ಪದಪುಂಜಗಳನ್ನು ರಚಿಸಿದರು. ಅನುಭವ ಸ್ಫುರಣಕ್ಕೆ ಶಬ್ದಶಿಲ್ಪ ಸಾಮರ್ಥ್ಯ ಅತ್ಯವಶ್ಯಕ. ಹೊಸ ಹೊಸ ಭಾವನೆಗಳು ಉದಿಸಿದಂತೆ ಅವುಗಳನ್ನು ಸ್ಪಷ್ಟಪಡಿಸಲು ಹಳೆಯ ಶಬ್ದಸಂಗ್ರಹ ಸಾಲದು. ಅಂತಹ ಸಂದರ್ಭದಲ್ಲಿ ಪದಕ್ಕೆ ಪದವನ್ನು, ಪದಕ್ಕೆ ಪ್ರತ್ಯಯವನ್ನು ಸೇರಿಸಿ ಹೊಸ ಪದಗಳನ್ನು ಸೃಷ್ಟಿಸಬಹುದು. ಉದಾ:- ಬಾನೋಡ(ವಿಮಾನ), ಮೇಲ್ನೆಲ(ಸ್ಟರ್ಗ), ಬೆಟ್ಟಳಿಯ(ಶಿವ). ಅನುಭವದ ಟಂಕಸಾಲೆಯಲ್ಲಿ ಹೊಸ ಪದಗಳನ್ನು ಟಂಕಿಸಿರುವರು. ಉದಾ-ಮಬ್ಬಿಗ(ರಾಕ್ಷಸ), ಏರ್ವಣೆ(ಕುರ್ಚಿ). ಕೆಲವೆಡೆ ವಿವರಣಾತ್ಮಕ ಸ್ವೀಕಾರ ಮತ್ತು ಭಾಷಾಂತರ ಪದಗಳು ಹೇರಳವಾಗಿ ದೊರೆಯುತ್ತವೆ. ಉದಾ:- ನುಡಿವುರುಳ್‌(ಶಬ್ದಸಂಪತ್ತು), ಪೆರ್ಗೆಚ್ಚಲಾವು(ದೊಡ್ಡ ಕೆಚ್ಚಲಿನ ಹಸು), ಪಳಿಮಂಜಳೆಣ್ಣೆ(ಪದ್ಧತಿಯ ಹಳದಿ ಎಣ್ಣೆ). ಅನುಭವವು ಭಾಷಾ ಮಾಧ್ಯಮದಲ್ಲಿ ಮೂಡಿ ಕಲಾಮುದ್ರೆಯನ್ನು ಪಡೆದು ಮಿಂಚುವ ನುಡಿಗಳು ಕೆಲವಿವೆ. ಉದಾ:- ದಾಂಟುಮರ(ಪಾಲ), ಕಲ್ಲಾಯ್ತ(ಉಪಾಧ್ಯಾಯ).

ಈ ಅಚ್ಚಗನ್ನಡ ನುಡಿಕೋಶದಲ್ಲಿ ಎಲ್ಲ ಅಚ್ಚಗನ್ನಡ ಪದಗಳನ್ನೂ, ತದ್ಭವಗಳೂ ಸೇರಿದಂತೆ ಅಕಾರಾದಿಯಾಗಿ ಕೊಡಲಾಗಿದೆ. ಅರ್ಥ ವಿವರಣೆಯನ್ನು ಮಾಡಲಾಗಿದೆ. ಪದಗಳಿಗೆ ಇರಬಹುದಾದ ಸಂವಾದಿ ಪದಗಳನ್ನೂ, ಭಿನ್ನಾರ್ಥಗಳನ್ನೂ ಕೊಡಲಾಗಿದೆ. ಅಲ್ಲಲ್ಲಿ ವ್ಯಾಕರಣ ವಿಶೇಷಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹಳೆಗನ್ನಡ ಕಾವ್ಯಗಳಲ್ಲಿ, ಜಾನಪದ ಸಾಹಿತ್ಯದಲ್ಲಿ, ವಿವಿಧ ಪ್ರದೇಶಗಳ ಜನರು ಆಡುವ ಅನೇಕ ಅಚ್ಚಗನ್ನಡದ ಪದಗಳಿಗೆ ವಿವಿಧ ಅರ್ಥಗಳನ್ನು ನೀಡಲಾಗಿದೆ. ಕೆಲವು ಪದಗಳಿಗೆ ಉದಾಹರಣೆಯನ್ನು ಮಾತ್ರ ಕೊಡಲಾಗಿದೆ. ಆಕರ ಗ್ರಂಥಗಳನ್ನು ಸೂಚಿಸಿಲ್ಲ. ಅವರ ಜೀವಿತ ಕಾಲದಲ್ಲಿಯೇ ಈ ಗ್ರಂಥವು ಪ್ರಕಟವಾಗಿದ್ದರೆ ಚೆನ್ನಾಗಿತ್ತು. ಇವರ ಪ್ರಕಟಿತ ಕೃತಿಗಳಾದ ‘ಕಾಲೂರ ಚೆಲುವೆ’ ಮತ್ತು 'ನುಡಿವಣಿಗಳು’ ವಿದ್ವಾಂಸರ ಪ್ರಶಂಸೆಯನ್ನು ಗಳಿಸಿದರೂ ನಾಡಿನ ಸಾಹಿತ್ಯವಲಯದಲ್ಲಿ ಸಾಕಷ್ಟು ಪರಿಚಯಗೊಂಡಿಲ್ಲ. ಇದಕ್ಕೆ ಕಾರಣ ಕವಿ ಪ್ರಕಾಶನವೆಲ್ಲವೂ ಸ್ವಂತ ನೆಲೆಯಿಂದ. ಅದೂ ಹಳ್ಳಿ ಕೊಂಪೆಯಲ್ಲಿ. ಅದರೊಡನೆ ಹೆಸರು ಪ್ರಚಾರಗಳ ಬೆನ್ನು ಹಿಡಿದು ಅವರು ಹೋಗಲಿಲ್ಲ. ಪ್ರಶಸ್ತಿ ಸನ್ಮಾನಗಳನ್ನು ಬಯಸಲಿಲ್ಲ. ಅವರ ಪ್ರಕಟಿತ ಕೃತಿಗಳಿಗಿಂತ ಅಪ್ರಕಟಿತ ಬರೆಹಗಳು ಹತ್ತು ಪಾಲು. ಅವರು ಹಿಂದೆ ಬರೆದ, ಆಮೇಲೆ ರಚಿಸಿದ ಕತೆ, ಕವನ, ಪ್ರಬಂಧ, ನಾಟಕ ಮೊದಲಾದ ಹಲವು ಬರೆಹಗಳು ಹಸ್ತಪ್ರತಿಯಲ್ಲಿದ್ದುದೂ ಕಳೆದುಹೋಗಿವೆ.

ತಮ್ಮ ಅಚ್ಚಗನ್ನಡ ಕೃತಿಗಳನ್ನು ನಾಡು ಕೊಂಡು ಕೊಂಡಾಡದಿದ್ದರೂ ಅವರು ನೊಂದುಕೊಳ್ಳಲಿಲ್ಲ. ತಮ್ಮ ಕಾಲವಾದ ಮೇಲಾದರೂ ಆ ಕಾಲ ಬರಬಹುದೆನ್ನುವ ಭರವಸೆ ಅವರಲ್ಲಿತ್ತು. ತಮ್ಮ ಜೀವಿತದಲ್ಲೇ ತಮ್ಮ ಕನ್ನುಡಿ ಕಣಜ ಅಚ್ಚುಗೊಂಡುದನ್ನು ಕಾಣಬೇಕೆಂದು ಬಾಯ್ಬಿಟ್ಟು ಅವರು ಹೇಳದಿದ್ದರೂ ಅವರ ಒಳಬಯಕೆ ನಮಗೆ ಅರ್ಥವಾಗುತ್ತಿತ್ತು. ಅವರ ಈ ಆಸೆಯನ್ನು ಅವರು ಮಣ್ಣಾದ ಮೇಲಾದರೂ ಕೈಗೂಡಿಸುವ ಕರ್ತವ್ಯ ಮಾಡುತ್ತಿದ್ದೇವೆ.

 

ಪುಟಗಳು: 571

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !