ಆಲೂರು ಪ್ರಬಂಧಗಳು

ಆಲೂರು ಪ್ರಬಂಧಗಳು

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರಕಾಶಕರು: ಸಂಕಥನ

Publisher: Sankathana

 

ಇಲ್ಲಿನ ಪ್ರಬಂಧಗಳಲ್ಲಿ ಎದ್ದು ಕಾಣುವುದು ವಸ್ತುವೈವಿಧ್ಯ. ಸಿನಿಮಾ, ಮಳೆ, ಗೋಡೆಬರೆಹ, ನಗರದ ಬದುಕು, ಗ್ರಾಮ ಬದುಕಿನ ಪಲ್ಲಟ, ರೈತಾಪಿ ಕಷ್ಟ, ಬದುಕಿನಲ್ಲಿ ಸೆಣಸುವ ವ್ಯಕ್ತಿಗಳು, ನಾಟಕೀಯ ಹೊರಳಿಕೆ ಪಡೆವ ಮನುಷ್ಯ ಸಂಬಂಧಗಳು-ಹೀಗೆ ಪನಸಾರೆ ಅಂಗಡಿಯಲ್ಲಿಟ್ಟ ಎಲೆ ಬೀಜ ಬೇರುಗಳಂತೆ ಇಲ್ಲಿನ ವಸ್ತುಲೋಕವಿದೆ. ಈ ವಸ್ತುಗಳ ಒಳಗಿನ ಪದರಗಳನ್ನು ತಾಳ್ಮೆಯಿಂದ ಬಿಡಿಸಿ ತೋರುವ ಪ್ರಬಂಧಗಳು ತಮ್ಮ ಒಡಲಿಂದ ಬಾಳದೃಷ್ಟಿಯೊಂದನ್ನು ಹೊಮ್ಮಿಸುತ್ತವೆ. ಈ ದೃಷ್ಟಿಕೋನವು ಅವಸರದಲ್ಲಿ ತೆಗೆದುಕೊಂಡ ನೈತಿಕ ಸರಳೀಕರಣದಲ್ಲಿ ಹುಟ್ಟಿದ್ದಲ್ಲ. ಇಲ್ಲಿ ಬರುವ ಹಳ್ಳಿ-ನಗರದ ಕೊಡುಕೊಳೆಯನ್ನೇ ಗಮನಿಸಬಹುದು. ಇಲ್ಲೆಲ್ಲೂ ಹಳ್ಳಿಯನ್ನು ಕೇವಲ ಮಮಕಾರದಲ್ಲಿ ನಗರವನ್ನು ಕೇವಲ ಸಿನಿಕತೆಯಲ್ಲಿ ಚಿತ್ರಿಸುವುದಿಲ್ಲ. ಅಲ್ಲಿನ ಕಷ್ಟ ಮತ್ತು ಜೀವಂತಿಕೆಯನ್ನು ಪ್ರಬಂಧಗಳು ಒಟ್ಟಿಗೆ ಹಿಡಿದುಕೊಡುತ್ತವೆ. ನಗರ ಸೆಳೆತಕ್ಕೆ ಸಿಕ್ಕು ಗ್ರಾಮಗಳು ಚಿಗುರೊಡೆಯುತ್ತಿರುವ ಚಿತ್ರಗಳಿರುವಂತೆ, ಬರ್ಬಾದಾಗುತ್ತಿರುವ ಚಿತ್ರಗಳೂ ಇವೆ. ಎರಡೂ ತಮ್ಮ ಸ್ನೇಹ ಮತ್ತು ಸಂಘರ್ಷದಲ್ಲಿ ಪಡೆದುಕೊಂಡ ಮತ್ತು ಕಳೆದುಕೊಳ್ಳುತ್ತಿರುವ ದೃಶ್ಯಗಳಿವೆ. ಜಯಂತ ಕಾಯ್ಕಿಣಿಯವರು ಬೀದಿ ಚಿತ್ರಗಳ ಮೂಲಕ ಮುಂಬೈ ಬದುಕನ್ನು ಹಿಡಿದುಕೊಟ್ಟಂತೆ ಇಲ್ಲಿ ಬೆಂಗಳೂರಿನ ಬದುಕಿದೆ.

ಇಡೀ ಸಂಕಲನ ಸುಂದರವಾದ ವ್ಯಕ್ತಿಚಿತ್ರಗಳ ಸಂಪುಟದಂತಿದೆ. ದನದ ಮಾರಾಟಗಾರ, ನಟಿ, ರೈತ, ವಾಚ್‌ವುಮನ್, ಸ್ಟೇಶನ್‌ಮಾಸ್ಟರ್ ಹೀಗೆ ಹಲವಾರು ಪಾತ್ರಗಳು ಇಲ್ಲಿವೆ. ಬಹುತೇಕ ವ್ಯಕ್ತಿಗಳು ಚೈತನ್ಯವಂತ ಸ್ತ್ರೀಯರು. ಇಷ್ಟಾಗಿ ಸ್ಟೇಶನ್ ಮಾಸ್ತರಾಗಿರುವ ಪ್ರಬಂಧನಾಯಕನ ತಂದೆಯ ಪಾತ್ರವು ಓದುಗರ ಚಿತ್ತದಲ್ಲಿ ಗಾಢವಾಗಿ ನಿಂತುಬಿಡುತ್ತದೆ. ಈ ಪಾತ್ರದ ಭಾಗವಾಗಿ ರೈಲು ರೈಲ್ವೆಹಳಿ ಸಿಗ್ನಲ್ ಪ್ಲಾಟಫಾರಂ ಸ್ಟೇಶನ್ ಕ್ವಾರ್ಟಸ್ಸುಗಳ ವಿಶಿಷ್ಟ ಜಗತ್ತೇ ಇಲ್ಲಿ ಮೈತಳೆಯುತ್ತದೆ. ಕುವೆಂಪು ಪ್ರಬಂಧಗಳಲ್ಲಿ ಕಾಡಿನಂತೆ, ಗೊರೂರರ ಪ್ರಬಂಧಗಳಲ್ಲಿ ಹೊಳೆಯಂತೆ, ಪುತಿನ ಪ್ರಬಂಧಗಳಲ್ಲಿ ದೇಗುಲದಂತೆ ಇಲ್ಲಿ ರೈಲ್ವೆಸ್ಟೇಶನ್ನು ರಸ್ತೆ ಮತ್ತು ಸಿಗ್ನಲ್ಲುಗಳ ಲೋಕವಿದೆ. ಈ ಲೋಕವು ರೂಪಕವಾಗಿ ಸಂಕೇತವಾಗಿ ಮತ್ತೆಮತ್ತೆ ಪ್ರಬಂಧಗಳಲ್ಲಿ ಅವತರಿಸುತ್ತದೆ.

ಇಲ್ಲಿ ಸಜೀವ ಪಾತ್ರಗಳಿವೆ; ಜೀವಂತ ಸಂಭಾಷಣೆಗಳಿವೆ; ಪ್ರಬಂಧಗಳಲ್ಲಿ ಸಣ್ಣಕತೆ ಮತ್ತು ಪ್ರವಾಸ ಕಥನದ ಗುಣಗಳಿವೆ; ಕಾವ್ಯದ ಚಿತ್ರಕತೆಯಿದೆ. ನಡುರಾತ್ರಿ ನಿರ್ಜನ ಕತ್ತಲ ರೈಲುನಿಲ್ದಾಣದಲ್ಲಿ ಕುಟುಂಬವೊಂದು ಕತ್ತಲಲ್ಲಿ ಇಳಿದಾಗ ಪಟ್ಟ ಅನುಭವದ ಚಿತ್ರಣವಂತೂ ಕತ್ತರಿಸಿಟ್ಟ ಕಾವ್ಯಭಾಗದಂತಿದೆ. ಸ್ವಾನುಭವ ಮತ್ತು ನೆನಪುಗಳಿಂದಲೇ ಉದ್ಭವಿಸುವ ಪ್ರಬಂಧಗಳಿವು. ಕೆಲವಂತೂ ಆತ್ಮಕಥೆಯ ಅಧ್ಯಾಯಗಳಂತಿವೆ. ಮರಳಿಮರಳಿ ಆತ್ಮಕಥನಕ್ಕೆ ಸ್ವಾನುಭವಕ್ಕೆ ಹೊರಳುವ ಕಡೆ ಬರೆಹವು ವಿಶಿಷ್ಟವಾದ ಆಪ್ತತೆಯನ್ನು ಪಡೆಯುತ್ತದೆ. ಕಾವ್ಯ ಕತೆ ಚಿಂತನೆ ಆತ್ಮಕತೆಗಳ ಪ್ರವಾಸ ಕಥನಗಳು ಒಟ್ಟಿಗೆ ಸಂಗಮಿಸಿದಂತೆ ಈ ಪ್ರಬಂಧಗಳ ವಿನ್ಯಾಸವಿದೆ. ಪ್ರಬಂಧಗಳ ಚೆಲುವನ್ನು ಹೆಚ್ಚಿಸಿರುವ ಸಂಗತಿಗಳಲ್ಲಿ ಸಾಹಿತ್ಯದ ಓದಿನ ಅರ್ಥಪೂರ್ಣ ಉಲ್ಲೇಖಗಳೂ ಸೇರಿವೆ. ಇವು ವಿಶ್ವಸಾಹಿತ್ಯದ ಬೇರೆಬೇರೆ ಲೇಖಕರ ಮತ್ತು ಕೃತಿಗಳಿಂದ ಬಂದಿದ್ದು, ಲೇಖಕರ ಓದಿನ ಹರಹನ್ನು ತೋರಿಸುತ್ತವೆ. ಈ ಉಲ್ಲೇಖಗಳು ಬಿರುಕಿಲ್ಲದೆ ಹೆಣಿಕೆಗೊಂಡು ಪ್ರಬಂಧದ ವಸ್ತು ಮತ್ತು ಜೀವನದೃಷ್ಟಿಕೋನದಲ್ಲಿ ಒದಗಿಕೊಳ್ಳುತ್ತವೆ ಕೂಡ. ಹೆಚ್ಚಿನ ಪ್ರಬಂಧಗಳಲ್ಲಿ ನಡುನಡುವೆ ಹಾಯುವ ಧ್ವನಿಪೂರ್ಣವಾದ ಚಿಂತನೆಗಳಿವೆ. ಪ್ರಬಂಧಗಳ ಕೊನೆಯಲ್ಲಿ ಅನರೀಕ್ಷಿತವಾಗಿ ಬರುವ ಸಾಲು ಓದುಗರನ್ನು ಮರುಚಿಂತನೆಗೆ ಪ್ರೇರಿಸುತ್ತವೆ. ಪ್ರಬಂಧಗಳಲ್ಲಿ ಲೇಖಕ ಸ್ವಾನುಭವವನ್ನು ಓದುಗರೊಡನೆ ಹಂಚಿಕೊಳ್ಳುವ ಬಹಿರ್ಮುಖೀ ಗುಣದ ಜತೆ, ತನ್ನ ಪಾಡನ್ನು ತಾನು ಅನುಭವಿಸುವ ತಲ್ಲಣಿಸುವ ಅಂತರ್ಮುಖಿ ಆಯಾಮವೂ ಇದೆ. 

ಇಲ್ಲಿನ ಶ್ರೇಷ್ಠ ಪ್ರಬಂಧಗಳು. ಇಲ್ಲಿನ ಗದ್ಯದಲ್ಲಿ ಒಂದೂ ಸ್ವರಗೆಟ್ಟ ವಾಕ್ಯವಿಲ್ಲ. ಲೇಖಕರು ಸೃಜನಶೀಲ ಗಳಿಗೆಯಲ್ಲಿ ರೂಪುಗೊಳ್ಳುವ ಭಾಷೆ ಮತ್ತು ಬರೆಹದ ಕಸುಬುದಾರಿಕೆಯನ್ನು ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡಿದ್ದ ಲಂಕೇಶರ ಗರಡಿಯಲ್ಲಿ ನುರಿತ ಕಾರಣದಿಂದಲೂ ಇದು ಸಾಧ್ಯವಾಗಿರಬಹುದು. ಮನುಷ್ಯಕೇಂದ್ರಿತ ಜೀವನಪ್ರೀತಿಯನ್ನು ಅಂತರ್ಗತಗೊಳಿ ಸುವುದು ಕನ್ನಡದ ಶ್ರೇಷ್ಠ ಗದ್ಯಬರೆಹದ ಯಾವತ್ತೂ ಲಕ್ಷಣವಾಗಿದೆ. ಅಂತಹ ಗದ್ಯ ಬರೆಹಗಳಿವು. ಹೊಸತಲೆಮಾರಿನ ಓದುಗರಲ್ಲಿ ಮತ್ತು ಲೇಖಕರಲ್ಲಿ ಆಲೂರರನ್ನು ಓದಿರದವರು ಇದ್ದರೆ, ಖಂಡಿತ ಓದುವಂತಾಗಬೇಕು; ಅವರ ಪ್ರಬಂಧಗಳ ಮಂದ್ರ ಸಂಗೀತದಂತಹ ಚಿಂತನಶೀಲತೆಯನ್ನೂ ಅನುಭವದ ಆಪ್ತತೆಯ ಬಿಸುಪನ್ನೂ ಅನುಭವಿಸು ವಂತಾಗಬೇಕು ಎಂದು ನಾನು ಬಯಸುತ್ತೇನೆ.

-ರಹಮತ್ ತರೀಕೆರೆ

ಕನ್ನಡ ವಿಶ್ವವಿದ್ಯಾನಿಲಯ, ಹಂಪಿ

 

 

ಪುಟಗಳು: 400

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !