ಅನಂತ ನಾದ (ಗೇಯ ಕಾದಂಬರಿ) (ಆಡಿಯೋ  ಬುಕ್)

ಅನಂತ ನಾದ (ಗೇಯ ಕಾದಂಬರಿ) (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE


ಬರೆದವರು: ಗಾನಕಲಾಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ

 

 

ಓದಿದವರು: ರಂಜನಿ ಕೀರ್ತಿ

 

ನಿರ್ಮಾಣ : ಶಾರದಾ ಕಲಾ ಕೇಂದ್ರ, ಬೆಂಗಳೂರು

ಆಡಿಯೋ ಪುಸ್ತಕದ ಅವಧಿ : 8 ಗಂಟೆ

 

ಸಂಗೀತವನ್ನೇ ದ್ರವ್ಯ ಆಗಿಸಿಕೊಂಡ ಕಥೆ-ಕಾದಂಬರಿಗಳು ಕನ್ನಡದಲ್ಲಿ ತೀರಾ ಕಡಿಮೆ. ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ `ಮಂದ್ರ’ ಕಾದಂಬರಿ ಬಿಟ್ಟರೆ ಕನ್ನಡ ಸಾಹಿತ್ಯದಲ್ಲಿ ಸಂಗೀತವನ್ನು ಕುರಿತಾದ ಪೂರ್ಣ ಪ್ರಮಾಣದ ಕಾದಂಬರಿ ಬಂದೇ ಇಲ್ಲ ಎನ್ನಬಹುದು. ಈ ಸಾಲಿಗೆ ಸೇರುವ ಕಾದಂಬರಿ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧರಾದ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಬರೆದಿರುವ `ಅನಂತನಾದ.

ಈ ಕಾದಂಬರಿ ಎರಡು ವಿಧದಲ್ಲಿ ವಿಶಿಷ್ಟ. ಸಂಗೀತದ ಅಂತಃಸತ್ವವನ್ನು, ತಾಂತ್ರಿಕ ಅಂಶಗಳ ಒಳಗೊಂಡಿರುವುದು ಮೊದಲ ವಿಶೇಷ. ಸ್ವತಃ ಕರ್ನಾಟಕ ಸಂಗೀತದ ಮೇರು ಕಲಾವಿದರೇ ಬರೆದಿರುವುದು ಇನ್ನೊಂದು ವಿಶೇಷ. ಒಬ್ಬ ಶಾಸ್ತ್ರೀಯ ಸಂಗೀತಗಾರರಾಗಿ, ಸಂಗೀತವನ್ನು ಹೊರತುಪಡಿಸಿ ಸಾಹಿತ್ಯಕವಾಗಿ ಏನಾದರೂ ರಚಿಸಬೇಕು ಎನ್ನುವ ತುಡಿತ ವಿದ್ವಾನ್ ಆರ್‌ಕೆಪಿ ಅವರನ್ನು ಕಾಡಿದ್ದರ ಅಭಿವ್ಯಕ್ತಿಯೇ ಈ ಗೇಯ ಕಾದಂಬರಿ.  ಕೀರ್ತನ ಎಂಬ ಪುಟ್ಟ ಹುಡುಗಿಯ ಅಸಾಧಾರಣ ಸಂಗೀತ ಪ್ರತಿಭೆ ಕಾದಂಬರಿಯ ಕಥನ. ಈ ಬಾಲಕಿಯ ಸಾಧನೆಯ ಹಿನ್ನೆಲೆಯಲ್ಲಿ ರಾಗ, ತಾಳ, ಕೀರ್ತನೆಗಳ ಬಗ್ಗೆಯೂ ವಿವರಣೆ ಕೊಡುವ ಕಾದಂಬರಿಯ ಆರಂಭ ಗಮನಸೆಳೆಯುವಂತಿದೆ.

ಕಾದಂಬರಿ ಉದ್ದಕ್ಕೂ ಮನೋರಂಜನೆ, ಕುತೂಹಲ ಪ್ರಸಂಗಗಳು ಇದ್ದು, ಕೃತಿಯನ್ನು ಸರಾಗ ಓದಿಸಿಕೊಂಡು ಹೋಗಲು ಸಹಕಾರಿಯಾಗಿದೆ. ಪಲ್ಲವೀಪುರದ ನವರಾತ್ರಿ ಉತ್ಸವದಲ್ಲಿ ಕೀರ್ತನ ಹಾಡಿದ್ದರ ವರ್ಣನೆ ಸೊಗಸಾಗಿದೆ. ಮೊದಲ ಸಂಗೀತ ಕಛೇರಿಯಲ್ಲಿ ಕೀರ್ತನ ಹಾಡಿದ ಕಲ್ಯಾಣಿ ರಾಗದ `ವರ್ಣ’ದ ವರ್ಣನೆ ಕಲ್ಯಾಣಿ ರಾಗ ಕೇಳಿದಷ್ಟೇ ಆನಂದವಾಗುತ್ತದೆ. ಆದರೆ ಭಾಗ ಒಂದರಲ್ಲೇ, ಕೀರ್ತನ ಜ್ವರ ಬಂದು ಸಾಯುವುದರ ವಿವರಣೆ ಮಾತ್ರ ಕೊಂಚ ಅಸಹಜ ಎನಿಸುತ್ತದೆ. ಮುಂದೆ ಕೀರ್ತನಳ ಅಣ್ಣ ಅನಂತ ಸಂಗೀತ ಗುರುಗಳ ಅನ್ವೇಷಣೆಗಾಗಿ ಚಿದಂಬರಂ, ತಂಜಾವೂರು ಎಂದು ಅಲೆದಾಡಿ ಸಂಗೀತದಲ್ಲಿ ಸಂಪೂರ್ಣ ಹಿಡಿತ ಸಾಧಿಸುವ ಪರಿ ಮಾತ್ರ ಅತ್ಯಂತ ರೋಚಕ. ನಡುನಡುವೆ ಬರುವ ಗಂಭೀರ ಪ್ರಸಂಗಗಳು ಕಾದಂಬರಿಯ ಏಕತಾನತೆಯನ್ನು ಮರೆಸಿ ಲವಲವಿಕೆಯಿಂದ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಸಂಗೀತದ ಪಾರಿಭಾಷಿಕ ಶಬ್ದಗಳು, ರಾಗ, ರಾಗಲಕ್ಷಣ, ತಾಳ-ಭಾವ-ಲಯ, ಆಹತ ಮತ್ತು ಅನಾಹತ ನಾದಗಳ ವಿಶ್ಲೇಷಣೆ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಸಂಗೀತ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಿಗೆ ಸೂಕ್ತವೆನಿಸುವ ಹಾಗೆ ಕಥೆಯನ್ನು ವಿಸ್ತರಿಸಿರುವುದು ಕೂಡ ಸೊಗಸಾಗಿದೆ. ಮಂದ್ರದಲ್ಲಿ ಷಡ್ಜ, ನಿಷಾದಗಳನ್ನು ಹಿಡಿಯುವ ರೀತಿ, ತಾರಸ್ಥಾಯಿವರೆಗೂ ಸ್ವರವನ್ನು ವಿಸ್ತರಿಸುವ ಪರಿ, ವಿವಿಧ ರಾಗಗಳ, ನವಾವರಣ ಕೃತಿಗಳ ವಿಶ್ಲೇಷಣೆ, ವಾಗ್ಗೇಯಕಾರರ ಉಲ್ಲೇಖ, ಅವರ ಕೃತಿ ಕುರಿತ ಪರಿಚಯದ ಜತೆಗೆ ಕೀರ್ತನೆಯ ರಾಗಗಳ ಮಾಹಿತಿ ಎಲ್ಲವೂ ಸಮಗ್ರವಾಗಿದೆ. ಸರಳವಾದ ಭಾಷೆ, ಸುಲಲಿತ ನಿರೂಪಣೆ, ನವಿರಾದ ಶೈಲಿ- ಒಬ್ಬ ಮೇರು ಕಲಾವಿದ ಹಾಡುಗಾರಿಕೆಯಲ್ಲಿ ಮಾತ್ರವಲ್ಲ; ಬರವಣಿಗೆಯಲ್ಲೂ ತಮ್ಮ ಸಾಧನೆ ತೋರಿಸಿರುವುದು ಅಚ್ಚರಿ ಹುಟ್ಟಿಸುವಂತಿದೆ. ಕಾದಂಬರಿಯ ನಡುವೆ ಬಳಸಿರುವ ತಂಬೂರಿ ಮತ್ತು ಇತರ ರೇಖಾಚಿತ್ರಗಳು ಕೂಡ ಗಮನಸೆಳೆಯುವಂತಿವೆ. ಸಂಗೀತ ಶಿಕ್ಷಕರು, ಆಸಕ್ತರು, ಸಂಗೀತ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ ಇದು. ಸಂಗೀತದ ವಿದ್ಯಾರ್ಥಿಗಳು ಇದನ್ನು ಅಭ್ಯಾಸದ ಕೈಪಿಡಿಯಾಗಿಯೂ ಬಳಸಬಹುದು.

ಪ್ರಜಾವಾಣಿ ವಿಮರ್ಶೆ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.