ಬರಹಗಾರರು: ಗಿರಿಮನೆ ಶ್ಯಾಮರಾವ್
ಮನುಷ್ಯರ ಮನಸ್ಸು, ಸ್ವಭಾವಗಳನ್ನು ತಿಳಿದುಕೊಂಡು ಆಗಬೇಕಾದ್ದೇನು? ಎನ್ನುವ ಪ್ರಶ್ನೆ ಮೊದಲಿಗೆ ಸಹಜ. ಆದರೆ ಅದೇ ನಮ್ಮ ಬದುಕಿನ ಏಳು ಬೀಳಿಗೆ ಕಾರಣವಾಗುತ್ತಿರುತ್ತದೆ. ಏಕೆಂದರೆ ನಾವು ದಿನ ನಿತ್ಯ ವ್ಯವಹರಿಸುವುದು ಜನರೊಂದಿಗೇ. ನಮ್ಮಷ್ಟಕ್ಕೆ ನಾವಿದ್ದರೆ ನಮಗೆಲ್ಲಿರುತ್ತದೆ ಕಷ್ಟ ನಷ್ಟ? ಉಳಿದವರ ನಡೆಯೇ ನಮ್ಮ ಕಷ್ಟ-ನಷ್ಟ, ದುಃಖ-ಸಂಕಟಕ್ಕೆ ಕಾರಣವಾಗುತ್ತದೆ. ಅಂತೆಯೇ ನಮ್ಮಿಂದ ಉಳಿದವರಿಗೂ! ಜನ ಹೀಗಿರುತ್ತಾರೆ, ಅಲ್ಲ; ಹೀಗೂ ಇರುತ್ತಾರೆ ಎಂದು ತಿಳಿದರೆ ಅಂಥವರೊಡನೆ ನಾವು ಯಾವ ರೀತಿ ವ್ಯವಹರಿಸಬೇಕೆಂದು ತಿಳಿಯುತ್ತದೆ. ಆಗ ಬದುಕಿನ ಬವಣೆ ಅರ್ಧ ಕಮ್ಮಿಯಾಗುತ್ತದೆ. ಜೊತೆಗೆ ನಮ್ಮ ಸ್ವದೋಷ ಅರಿಯಲೂ ಸಹಾಯವಾಗುತ್ತದೆ. ವಿದ್ಯೆ ದೊರೆತು, ವಿಚಾರ ಮಾಡಿ, ಅನುಭವ ಗಳಿಸುತ್ತಿದ್ದಂತೆ ಮನುಷ್ಯ ಉತ್ತಮನಾಗುತ್ತಾ ಹೋಗುತ್ತಾನೆ. ಉದಾಹರಣೆಗೆ ಅಸೂಯೆ ಒಂದು ಹುಟ್ಟು ಗುಣ. ಅದು ನಮ್ಮಲ್ಲಿದೆ ಎಂದ ತಕ್ಷಣ ನಾವು ಕೆಟ್ಟವರಲ್ಲ. ಅದು ನಮ್ಮ ಹಿರಿಯರಿಂದ ಬಂದಿದ್ದು. ಅದನ್ನು ಹತೋಟಿಯಲ್ಲಿಡುವ ಕ್ರಮ ತಿಳಿದರೆ ನಾವು ಸಂಸ್ಕೃತಿವಂತರು. ಅದರ ಪ್ರಯೋಗಕ್ಕಿಳಿದರೆ ನಾವು ದುಷ್ಟರು. ಅಂದರೆ ಇಲ್ಲಿ ನಾವು ಕಲಿಯಬೇಕಾದ್ದು ನಮಗೆ ಬಳುವಳಿಯಾಗಿ ಬಂದ ಅಸೂಯೆಯನ್ನು ಹತೋಟಿಯಲ್ಲಿಡುವ ಕ್ರಮವನ್ನು! ಇಂಥಾ ನೂರಾರು ಸಂಗತಿಗಳು ನಿಮಗೆ ಇದರಲ್ಲಿ ಸಿಕ್ಕಬಹುದು.