ವೇದ ಮಂತ್ರಗಳ ರಹಸ್ಯ
ಸತ್ಯ ತಿಳಿಯದಿದ್ದರೆ ಸುಳ್ಳೇ ಸತ್ಯದಂತೆ ಭಾಸವಾಗುತ್ತದೆ. ಜ್ಞಾನವಿಲ್ಲದಿದ್ದರೆ ಅಜ್ಞಾನವನ್ನೇ ಜ್ಞಾನವೆಂದುಕೊಳ್ಳುತ್ತೇವೆ. ಜನಸಾಮಾನ್ಯರಿಗೆ ವೇದಮಂತ್ರಗಳ ಬಗ್ಗೆ ಅಜ್ಞಾನ ಇದೆ. ದೇವರ ವಿಷಯ ಸೇರಿದಂತೆ ನಮ್ಮ ಇಡೀ ಬದುಕು ಅದರೊಂದಿಗೆ ತಳಕು ಹಾಕಿಕೊಂಡಿದೆ. ಮಂತ್ರಗಳ ಸರಿಯಾದ ಅರ್ಥ ತಿಳಿಯದೆ ಬೇರೇನೋ ಮಾಡುವುದು, ಅರೆಬರೆ ತಿಳಿದವರು ತಿಳಿಯದವರನ್ನು ಶೋಷಿಸುವುದು ಎಲ್ಲವೂ ನಡೆಯುತ್ತದೆ. ವೇದಮಂತ್ರಗಳೆಂದರೆ ಬೂದಿ ಮುಚ್ಚಿದ ಕೆಂಡದಂತೆಯೇ. ಒಳಗೆ ಕೆಂಡವಿರುವುದು ತಿಳಿಯದೆ ಕೆಲವರು ಮೇಲೆ ಹಾರುವ ಬೂದಿಯನ್ನು ಮಾತ್ರ ನೋಡುತ್ತಾರೆ. ವೇದ, ಜ್ಞಾನ ಎಂಬ ಕೆಂಡ. ಅದನ್ನು ಪ್ರಜ್ವಲಿಸಿದರೆ ಅದು ಎಲ್ಲರಿಗೂ ಉಪಯುಕ್ತವಾಗುವ ಬೆಳಕಿನ ಜ್ಯೋತಿ! ಅದರ ಬೆಳಕಿನಲ್ಲಿ ಎಲ್ಲರೂ ತಮ್ಮ ಬಾಳನ್ನು ಬೆಳಗಿಸಿಕೊಳ್ಳಬಹುದು. ‘ವೇದ ಎಲ್ಲರಿಗೂ ಅಲ್ಲ; ಕಾವಿ ತೊಟ್ಟು, ಜುಟ್ಟು ಬಿಟ್ಟು ದೇವರ ಬಗ್ಗೆ ಹೇಳಿದ್ದನ್ನೇ ಹೇಳಿ ತಲೆ ತಿನ್ನುವ; ಬದುಕಿಗೆ ಅನಗತ್ಯವಾದ ಶಾಸ್ತ್ರಗಳಿಂದ ಕೂಡಿದ ಗ್ರಂಥ’ ಎಂಬಂತಹಾ ಕಲ್ಪನೆಗಳೇ ಜಾಸ್ತಿ. ಆದರೆ ವೇದ ಎಂದರೆ ಅದಲ್ಲವೇ ಅಲ್ಲ! ಆಧುನಿಕರು ನಾಚುವಂತೆ ಅದು ಮೂಢನಂಬಿಕೆಗಳನ್ನು ಹರಿದೆಸೆಯುತ್ತದೆ. ಅದೊಂದು ಸಾಮಾನ್ಯರೂ ತಿಳಿಯಬೇಕಾದ ಬದುಕುವ ಕಲೆ. ಎಲ್ಲಕ್ಕೂ ಮೊದಲು ಮಂತ್ರಗಳು ಎಂದರೇನು? ದೇವರ ವಿಷಯವಾಗಿ ಅದು ಏನು ಹೇಳಿದೆ? ಎಂದು ತಿಳಿಯಬೇಕು. ಮೊದಲಿಗೆ ಅದು ನಮ್ಮ ನಂಬಿಕೆಗೆ ವ್ಯತಿರಿಕ್ತವಾದ ಸಂಗತಿಗಳಂತೆ ಕಂಡರೂ ಅರ್ಥಮಾಡಿಕೊಳ್ಳುತ್ತಾ ಹೋದಂತೆ ಅದೆಷ್ಟು ಸರಳ-ಸುಲಭ ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ವೇದಮಂತ್ರಗಳು ಏನು ಹೇಳುತ್ತವೆ ಎಂದು ತಿಳಿದರೆ ನಿಗೂಢತೆ ಉಳಿಯದೆ ಅಜ್ಞಾನ ಹರಿಯುತ್ತದೆ; ದುರುಪಯೋಗ ಸಾಧ್ಯವಿಲ್ಲ. ಆಗ ಸರಿದಾರಿಯಲ್ಲಿ ನಡೆಯುವವರ ಆತ್ಮವಿಶ್ವಾಸ ಹೆಚ್ಚುತ್ತದೆ. ಅಡ್ಡದಾರಿ ಹಿಡಿದವರು ಸರಿದಾರಿಗೆ ಮರಳುತ್ತಾರೆ. ಜ್ಞಾನ ಎಂದರೆ ಅದೇ ತಾನೇ!
ಪುಟಗಳು : 75