ನಮ್ಮ ಇಡೀ ಬದುಕಿನಲ್ಲಿ ಅತ್ಯಂತ ಸುಂದರವಾದ, ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಪ್ರಾಯ ಹದಿಹರೆಯ. ಹಾಗೇ ಎಲ್ಲವನ್ನೂ ತಿಳಿಯುವ ಕಲಿಯುವ ಪ್ರಾಯವೂ ಹೌದು. ಆ ಪ್ರಾಯದವರ ಮನಸ್ಸೂ ಚಂಚಲ. ಯಾವ ಕಡೆಗೂ ಬಾಗಬಹುದು. ಹದಿಹರೆಯ ಮತ್ತು ಯೌವನದ ಭಾವನೆಗಳಿಗೆ, ಅವರ ಕಷ್ಟ-ಸುಖಗಳಿಗೆ ಕಾರಣವಾಗುವ ಅಂಶಗಳ ಬಗೆ ಇಲ್ಲಿ ಪ್ರಸ್ತಾಪವಾಗಿದೆ. ಆ ಪ್ರಾಯದಲ್ಲಿ ಮನಸ್ಸು ಮತ್ತು ಶರೀರಗಳಲ್ಲಿ ಆಗುವ ವ್ಯತ್ಯಾಸ ಅಗಾಧ. ಬದುಕಿನ ಬೇರಾವ ಸಮಯದಲ್ಲೂ ಆಗದಷ್ಟು! ಪರಿಸರ, ಹುಟ್ಟುಗುಣ, ಶಿಕ್ಷಣಗಳು ಅವರ ಮೇಲೆ ಬೀರುವ ಪ್ರಭಾವಗಳ ಬಗ್ಗೆ ಕೂಡ ಒಂದಿಷ್ಟು ಮಾಹಿತಿ ಇದರಲ್ಲಿ ಸಿಗಬಹುದು. ಯಾವ ರೀತಿಯ ಶಿಕ್ಷಣ ಸೂಕ್ತ? ಆಸಕ್ತಿ ಎಂದರೇನು? ಪ್ರೀತಿ ಪ್ರೇಮ ಎಂದರೇನು? ತಾವು ಯಾವ ರೀತಿ ವರ್ತಿಸಬೇಕು? ಎನ್ನುವುದೆಲ್ಲಾ ಆ ಪ್ರಾಯದಲ್ಲೇ ಅವರಿಗೆ ತಿಳಿದಿರಬೇಕು. ಅವರ ನಡವಳಿಕೆಗೆ ಕಾರಣಗಳು ಹೀಗಿರುತ್ತವೆ ಎನ್ನುವುದು ಹಿರಿಯರಿಗೂ ತಿಳಿದಿರಬೇಕು. ಹಾಗಿದ್ದರೆ ಮಾತ್ರ ಅವರ ಭಾವನೆಗಳಿಗೆ ಸ್ಪಂದಿಸಿ ಅವರೊಂದಿಗೆ ಸಂವಹನ ಸುಲಭವಾಗುತ್ತದೆ. ಇದರಲ್ಲಿ ತಜ್ಞರು ವ್ಯಕ್ತಪಡಿಸಿದ ವಿಚಾರಗಳ ಕ್ರೋಢೀಕರಣದ ಜೊತೆಗೆ ನನಗೆ ಕಂಡ ಸತ್ಯಗಳಿವೆ. ಹಾಗಾಗಿ ಇದು ಹಿರಿ-ಕಿರಿಯರೆಲ್ಲರಿಗೂ ಪ್ರಯೋಜನವಾಗಬಹುದು.
-ಗಿರಿಮನೆ ಶ್ಯಾಮರಾವ್
ಪುಟಗಳು: 136