ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಕಾದಂಬರಿ
ಕತೆಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಕಾಡು ಕಾಲಕಾಲಕ್ಕೆ ಬದಲಾಗುತ್ತಾ ಸಾಗಿದೆ. ಕಾನೂನು ಹೆಗ್ಗಡಿತಿಯ ಕಾಡಲ್ಲಿ ಬೇಟೆ ಒಂದು ಸಂಭ್ರಮ. ಕಾರಂತರ ನಾಯಕನಿಗೆ ಕಾಡು ಕಡಿದು ಅಲ್ಲಿ ಹೊಲಗದ್ದೆ ಮಾಡುವುದು ವ್ಯಕ್ತಿಯ ಸಾಧನೆ, ಛಲದ ಪ್ರತೀಕ. ತೇಜಸ್ವಿಯವರಿಗೆ ಕಾಡಿನ ನಿಗೂಢಗಳ ಕುರಿತು ಅತೀವ ಬೆರಗು. ಅದೊಂದು ಮುಗಿಯದ ಅಚ್ಚರಿಯ ಸಂತೆ. ಆದರೆ ಇವತ್ತು ಶಿಕಾರಿ ನಿಷಿದ್ಧ. ಕಾಡನ್ನು ಕಡಿದು ಹೊಲ ಮಾಡುವುದು ಪರಿಸರ ವಿರೋಧಿ ನಿಲುವು. ನಿಗೂಢತೆಯನ್ನಷ್ಟೇ ಕಾಡು ಉಳಿಸಿಕೊಂಡಿದೆ. ‘ಅಭಿವೃದ್ಧಿ ಯೋಜನೆ’ಗಳ ತೆಕ್ಕೆಯಿಂದ ಕಾಡನ್ನು ಹೇಗೆ ಪಾರು ಮಾಡಬೇಕು ಅನ್ನುವುದು ಇವತ್ತಿನ ಚಿಂತೆ. ಹೀಗೆ ಬದಲಾಗುತ್ತಾ ಬಂದಿರುವ ಕಾಡಿನ ಕುರಿತ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಕಾದಂಬರಿ ರೂಪುಗೊಂಡಿದೆ.