ಶೋಭಾರಾಣಿ ಮಹಡಿಯ ಕೊನೆಯ ಮೆಟ್ಟಿಲು ಇಳಿಯುತ್ತಿದ್ದಾಗ ಬಂತೊಂದು ಎಸ್ಸೆಮ್ಮೆಸ್ಸು. ನರಹರಿಯೇ ಇರಬೇಕು ಎಂದುಕೊಂಡು ನೋಡಿದರೆ ಯಾವುದೋ ಗೊತ್ತಿಲ್ಲದ ನಂಬರಿನಿಂದ ಬಂದಿತ್ತು. ಅರ್ಥವೇ ಆಗದ ವಿಚಿತ್ರ ಮೆಸೇಜು. ನಾನು ಇಷ್ಟರಲ್ಲೇ ಬರುತ್ತೇನೆ. ಸಿದ್ಧವಾಗಿರು ಎಂಬ ಹಿಂದಿಲ್ಲದ ಮುಂದಿಲ್ಲದ ಸಂದೇಶ. ಅದುವರೆಗೆ ಕೇಳಿರದ ನಂಬರಿನಂತಿತ್ತು. ಯಾರಿರಬಹುದು ಎಂದುಕೊಂಡು ಶೋಭಾರಾಣಿ ಆ ನಂಬರಿಗೆ ಫೋನ್ ಮಾಡಿದಳು. ನೀವು ಫೋನ್ ಮಾಡಿರುವ ನಂಬರ್ ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶ ಕೇಳಿಸಿತು. ಅಸ್ತಿತ್ವದಲ್ಲಿ ಇಲ್ಲದ ನಂಬರಿನಿಂದ ಸಂದೇಶ ಬರೋದು ಹೇಗೆ ಸಾಧ್ಯ? ತಾನೇನಾದರೂ ತಪ್ಪಾಗಿ ಒತ್ತಿರಬಹುದಾ? ಅಥವಾ ಅದು ಹೊರ ರಾಜ್ಯದ ಫೋನ್‌ನಂಬರ್ ಇರಬಹುದಾ ಅಂದುಕೊಂಡು ಕೊಂಚ ಅನುಮಾನದಿಂದಲೇ ಮತ್ತೊಮ್ಮೆ ಮೆಸೇಜ್ ಓದಿಕೊಂಡಳು. ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ಯಾವ ಗೊಂದಲವೂ ಇರಲಿಲ್ಲ. I AM COMING SOON. BE READY. ಆದರೆ ಯಾರು ಎಲ್ಲಿಗೆ ಬರುತ್ತಿದ್ದಾರೆ. ಏನು ಸಿದ್ಧತೆ ಮಾಡಿಕೊಳ್ಳಬೇಕು ಅನ್ನುವುದು ಮಾತ್ರ ಗೊತ್ತಾಗುತ್ತಿರಲಿಲ್ಲ. ತರಿಕೇರೆಯ ಶೋಭಾರಾಣಿ ಹಾಗೂ ಬನವಾಸಿಯ ನರಹರಿ ದಂಪತಿಗಳ ಜೀವನದಲ್ಲಿ ಮುಂದೆ ಏನಾಯ್ತು? ಮಾಯಾಲೋಕದಲ್ಲೊಂದು ಸುತ್ತು ಹಾಕುವ ಜೋಗಿಯವರ ಕಾದಂಬರಿ "ಮಾಯಾಕಿನ್ನರಿ".
ಪುಟಗಳು: 116