ಕನ್ನಡಿಯಲ್ಲಿ ಕಂಡಾತ

ಕನ್ನಡಿಯಲ್ಲಿ ಕಂಡಾತ

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

ನನ್ನ ಲೇಖನ ವ್ಯವಸಾಯ ಹೆಚ್ಚಾಗಿ ಬೆಳೆದು ಬಂದದ್ದು, ನಾನಾ ರೂಪ ತಾಳಿದ್ದು ೧೯೩೩ರಿಂದ ೧೯೭೩ರ ತನಕ ನಾನು ವಾಸಿಸುತ್ತಿದ್ದ ಪುತ್ತೂರಿನ ಬಾಲವನ ವೆಂಬ ತಾವಿನಲ್ಲಿ. ಅಲ್ಲಿನ ಗುಡ್ಡದ ಮೇಲೊಂದು ಮನೆಯನ್ನು ಕಟ್ಟಿ, ಅದರ ಉಪ್ಪರಿಗೆಯೊಳಗೆ ಕುಳಿತು, ನಾಲ್ಕು ಸುತ್ತಿನ ಬೆಟ್ಟ, ಬಾನು, ಗಿಡ, ಮರಗಳ ಸೊಬಗುಗಳನ್ನು ಬರೆಯುವ ಕಾಲಕ್ಕೆ ಸಂಪೂರ್ಣ ಮರೆತು--ಮನಸ್ಸಿಗೆ ತೋಚಿದ್ದನ್ನು ಬರೆಯುತ್ತಿದ್ದೆ ಅಥವಾ ಬಾಯಿಂದ ಹೇಳಿ ಬರೆಯಿಸುತ್ತಿದ್ದೆ. ಅದು ನನ್ನ ಸ್ವಂತ ಸ್ಥಳವಾಗಿದ್ದರೂ ಕಾರಣಾಂತರದಿಂದ ಆ ಸ್ಥಳವನ್ನು ಬಿಟ್ಟು ಈಗ ನನ್ನ ಹುಟ್ಟೂರಿನ ಸಮತಟ್ಟಾದ ನೆಲಕ್ಕೆ ಬಂದು ಸೇರಿಕೊಂಡಿದ್ದೇನೆ. ಇಲ್ಲಿನ ನಿಸರ್ಗವೂ ಸುಂದರವೇ. ನೆಲ ಸಮತಟ್ಟಾಗಿದ್ದರೂ--ಜನರ ಬುದ್ಧಿ ಸಮತಟ್ಟಾಗಿರಬೇಕಿಲ್ಲದ ಕಾರಣ ಕಾದಂಬರಿಕಾರನಿಗೆ ಮುಗಿಯದಷ್ಟು ವಿಷಯಗಳು ದೊರಕುತ್ತವೆ. ಹಾಗಾಗಿ ಆ ಕೊರತೆಯಿಲ್ಲ. ಸುದೈವದಿಂದ ಒಬ್ಬರು ಮಿತ್ರರು, ನಾನು ವಾಸ ಮಾಡಲು ಒಂದು ಚಂದದ ಮನೆಯನ್ನು ಕಟ್ಟಿಸಿ, ಮಹಡಿಯಲ್ಲೊಂದು ಕೋಣೆಯನ್ನು ಕಟ್ಟಿಸಿಕೊಟ್ಟು ನನ್ನ ಮಾರ್ಜಾಲ ತಪಸ್ಸಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ಕೊರತೆಯೊಂದೇ. ಪುತ್ತೂರಿನ ಮನೆಯಲ್ಲಿ ದಾರಿಯ ಸದ್ದು ಕೇಳಿಸುವುದು ಕಡಿಮೆ. ಮನೆಯಲ್ಲೂ ಸದ್ದುಗದ್ದಲ ಕಡಿಮೆ. ಇಲ್ಲಿ ಮಾತ್ರ ಆ ಕೊರತೆಯಿದೆ. ಹೆದ್ದಾರಿಯ ಬಳಿಯ ಮನೆಯಾದುದರಿಂದ ವಾಹನಸಂಚಾರ ದಿನರಾತ್ರಿಯೂ ಇರುತ್ತದೆ. ಪ್ರಾಣಾಪಾಯ ಬಂದಿದೆ--ಎಂದು ಸೂಚಿಸುವ ಚೀತ್ಕಾರಗಳು ಸದಾ ಕೇಳಿಸುತ್ತವೆ. ಒಮ್ಮೆ ಬರವಣಿಗೆಯಲ್ಲಿ ಮುಳುಗಿದೆನಾದರೆ ಅವೆಲ್ಲ ಮರೆಯುತ್ತವೆನ್ನಿ. ಆದರೂ ನಡುನಡುವೆ ಅಡುಗೆಭಟ್ಟರ ಅಸ್ತಿತ್ವ ಎಚ್ಚರಿಕೆ ಕೊಡುತ್ತದೆ. ಪಾತ್ರೆ ಪರಡಿಗಳನ್ನು ಎಸೆದು ಜಲತರಂಗದಂತೆ--ತಪ್ಪಲೆತರಂಗ ಹೊರಡುತ್ತದೆ. ತಾವೊಬ್ಬರೇ ಇದ್ದರೂ ತಮ್ಮ ಅಸ್ತಿತ್ವವನ್ನು ಜಗತ್ತಿಗೆ ಸಾರಲು ಗಂಟಲನ್ನು ಗಟ್ಟಿಯಾಗಿ ತೆರೆಯುತ್ತಾರೆ. ಅದೂ ರೂಢಿಯಾಗುತ್ತ ಬಂದಿದೆ. ಈ ಆವರಣದಲ್ಲಿ ನನ್ನ ಲೇಖನವೃತ್ತಿಯನ್ನು ನಿಲ್ಲಿಸಿಲ್ಲ. ವರ್ಷಕ್ಕೊಂದಾದರೂ ಕಾದಂಬರಿಯನ್ನು ಬರೆಯುವ ಚಟ ಉಳಿದಿದೆ. ಈ ವರ್ಷದ ಕೃತಿಯಾಗಿ ಕಳೆದ ಬೇಸಿಗೆಯಲ್ಲಿ ಇದರ ಜತೆಗಿರುವ ಕಾದಂಬರಿಯನ್ನು ಬರೆದು ಮುಗಿಸುತ್ತೇನೆ. ಈ ಕಾದಂಬರಿಯಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆ ಯೇನಿಲ್ಲ. ಆದರೂ ಒಬ್ಬಾತ ತನಗೆ ತಾನೇ ಒಂದು ಸಮಸ್ಯೆಯಾಗಿ, ತನ್ನವರಿಗೆ ಮತ್ತಷ್ಟು ದೊಡ್ಡ ಸಮಸ್ಯೆಯಾಗಿ ಹೇಗೆ ಪರಿಣಿಸಬಹುದೆಂದು ವ್ಯಕ್ತಿಚಿತ್ರಣವಿದೆ.

ಇಂಥ ಜೀವಿಗಳಿಗೆ ಬದುಕಿನಲ್ಲಿ ತಾನು, ಇಲ್ಲವೆ ಸ್ವಾರ್ಥ ಮುಖ್ಯ. ಆ ದೃಷ್ಟಿಯಿಂದ ಅವರು ಲೋಕವನ್ನು ಅಳೆದು ಬಾಳುತ್ತಾರೆ; ವರ್ತಿಸುತ್ತಾರೆ. ಹಾಗೆ ನಡೆಯುವಾಗ ತಮಗಿಷ್ಟ ಕಂಡ ರೀತಿಯಲ್ಲಿ ಜೀವನಪ್ರವಾಹ ಸರಿಯದೆ ಹೋದರೆ ಲೋಕದ ಮೇಲೆ ಮುನಿದು, ಆ ಮುನಿಸಿಗೆ ವೈರಾಗ್ಯದ ಮುಖವಾಡ ತೊಡಿಸಿ, ತನ್ನವರನ್ನು ಬೆದರಿಸಲು ಯಾತ್ರೆ ಹೊರಡುತ್ತಾರೆ. ಅಂಥ ಒಬ್ಬ ವ್ಯಕ್ತಿ ಇಲ್ಲಿನ ಶಾಲಾ ಮಾಸ್ತರ ಪರಮೇಶ್ವರ. ಅವನ ವಿದ್ವೇಷಕ್ಕೆ ಗುರಿಯಾದ ಜಗತ್ತಿಗೆ ಅವನ ನಿರ್ಗಮನದಿಂದ ಸಾಕಷ್ಟು ಸುಖ ದೊರೆಯುತ್ತದೆ. ಅವನು ಮಾತ್ರ ಕಡಲಲ್ಲಿ ಎಸೆದ ಕಟ್ಟಿಗೆ ತುಂಡಿನಂತೆ ದಡ ಸೇರುವ ತನಕವೂ ಅಲೆಗಳ ಅಪ್ಪಳಿತಕ್ಕೆ ಗುರಿಯಾಗಲೇ ಬೇಕಾಗುತ್ತದೆ. ಮನುಷ್ಯರಿಲ್ಲದ ದಡವನ್ನು ಆತ ಸೇರಲಾರ. ತಿರುಗಿ ಅವರಿರುವ ದಡವನ್ನೇ ಸೇರಿ, ತನ್ನ ಪೂರ್ವಜೀವನವನ್ನು ಅನ್ಯರ ನಡವಳಿಕೆಯ ಕನ್ನಡಿಯಲ್ಲಿ ನೋಡಿ ಚಿಂತಿಸುವ ಅವಕಾಶ ಸಿಗುತ್ತದೆ. ಒಡೆದೊಂದು ಕನ್ನಡಿ ಮೊದಲಿನಂತಾಗ ದಾದರೂ, ಅದರ ಚೂರುಗಳ್ನು ಒಟ್ಟುಗೂಡಿಸಿ ಮುಖ ನೋಡಿ, ತನ್ನ ಆಕಾರವನ್ನೊ, ವಿಕಾರವನ್ನೊ ಗುರುತಿಸುವ ಸಾಧನವನ್ನಾಗಿ ಮಾಡಿಕೊಳ್ಳಬಹುದಲ್ಲ. ಪರಮೇಶ್ವರ ಹಾಗೆ ಮಾಡಿದ. ಎಲ್ಲರೂ ಹಾಗೆ ಮಾಡುತ್ತಾರೆ; ಮಾಡಬಲ್ಲರು ಎಂದಲ್ಲ. ಅವನ ಪಾಲಿಗಿದಿರಾದ ಬದುಕು ಅವನಿಂದ ಹಾಗೆ ಮಾಡಿಸಿತು. ಹಾಗೆ ಮಾಡಲು ಅವನು ಪ್ರತಿಕೂಲನಾಗಿ ವರ್ತಿಸದಿದ್ದುದು ಒಂದು ಕಾರಣ. ತನ್ನ ಸ್ವಾರ್ಥದ ಇತಿಮಿತಿಗಳು ಅವನಿಗೆ ಹೊಳೆದದ್ದು ಮತ್ತೊಂದು ಕಾರಣ.

ಹೀಗೆ, ಈ ಮುನ್ನುಡಿಯಲ್ಲಿ ಬರೆದ ಕತೆಯ ಗುಟ್ಟನ್ನೆಲ್ಲ ನಿಮ್ಮ ಮುಂದಿಟ್ಟುದರಿಂದ ನೀವು ಅದನ್ನು ಮಗುಚಿ ಓದುವ ಗೋಜಿಗೆ ಹೋಗದೆಯೆ ಉಳಿಯುವುದೂ ಸಾಧ್ಯ--ಎಂದು ಸೂಚಿಸಿ ವಿರಮಿಸುತ್ತೇನೆ.

ಇತಿ
ಶಿವರಾಮ ಕಾರಂತ
ಸಾಲಿಗ್ರಾಮ (ದಕ್ಷಿಣ ಕನ್ನಡ)
ನವೆಂಬರ್‌ ೯, ೧೯೭೫

 

ಪುಟಗಳು: 320

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !