ಕಣ್ಣಿದ್ದೂ ಕಾಣರು

ಕಣ್ಣಿದ್ದೂ ಕಾಣರು

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

ಕಳೆದ ವರ್ಷ ವಾಚಕರಿಗೆ 'ನಾವು ಕಟ್ಟಿದ ಸ್ವರ್ಗ' ಎಂಬ ವ್ಯಂಗ್ಯ ಕಾದಂಬರಿ ಯನ್ನು ಕೊಡುವ ಸಾಹಸ ಮಾಡಿದೆ. ಅದರ ವಸ್ತು ನಮ್ಮ ಕಲುಷಿತ ರಾಜಕೀಯಕ್ಕೆ ಸಂಬಂಧಪಟ್ಟದ್ದು. ಈ ಕಾದಂಬರಿಯ ವಸ್ತು ಹಾಗೇನಲ್ಲ; ಇದು ನಾಲ್ಕೈದು ಸಾವಿರ ವರ್ಷಗಳಿಂದ ಜಗತ್ತಿನ ಬಹು ಜನರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿರುವ ಮತಧರ್ಮಗಳಿಗೆ ಸಂಬಂಧಪಟ್ಟ ಒಂದು ವಿಷಯ. ಒಂದಲ್ಲ ಒಂದು ಮತ, ಧರ್ಮಕ್ಕೆ ನಿಷ್ಠೆ ತೋರಿಸದಂಥ ವ್ಯಕ್ತಿಯನ್ನು ನಾವು 'ನಾಸ್ತಿಕ'ನೆಂದು ಕರೆಯುತ್ತೇವೆ. ಜಗತ್ತಿನ ಇತಿಹಾಸದ ಉದ್ದಕ್ಕೂ ಎಷ್ಟೆಲ್ಲ ಮತಧರ್ಮಗಳೂ, ದೇವರುಗಳೂ ಹುಟ್ಟಿಕೊಂಡು ಮನುಷ್ಯರ ಮೇಲೆ ಪ್ರಭಾವ ಬೀರಿದವು ಎನ್ನುವುದಕ್ಕಿಲ್ಲ. ಅನೇಕರ ಪಾಲಿಗೆ ಮತಧರ್ಮಗಳು ಆವೇಶವನ್ನು ಕೆರಳಿಸುವ ವಿಷಯಗಳಾಗುತ್ತವೆ. ಅವು ಇರುವುದೇ ನಮ್ಮ ಬದುಕನ್ನು ರೂಪಿಸುವುದಕ್ಕೆ; ನಮ್ಮ ವರ್ತಮಾನ ಕಾಲವನ್ನೂ ಸತ್ತ ಮೇಲೂ ಜೀವನ ಇದೆಯೆನ್ನುವವರಿಗೆ ಆ ಅಪರಿಚಿತ ಭವಿಷ್ಯದ ಬಾಳ್ವೆಯ ರೂಪವನ್ನೂ ಅವು ಸೂಚಿಸುತ್ತವೆ. ಅವುಗಳ ಸಾಧನೆಗೆ ಬೇಕಾದ ಆಚಾರವನ್ನು ಬೋಧಿಸುತ್ತವೆ. ಅವನ್ನು ಆಚರಿಸದವರ ಪಾಲಿಗೆ ಭಯವನ್ನೂ, ಒಪ್ಪಿದವರ ಪಾಲಿಗೆ ಸುಖವನ್ನೂ ಅವೇ ಮತಧರ್ಮಗಳು ಜೀವನದ ಆದರ್ಶವಾಗಿ ಎತ್ತಿ ಹಿಡಿಯುತ್ತ ಬಂದಿವೆ. ಒಂದೊಂದು ದೇಶದಲ್ಲೇ ಹುಟ್ಟಿ, ಬೆಳೆದು, ಕಣ್ಮರೆಯಾದ ಮತಗಳ ಸಂಖ್ಯೆ ಎಷ್ಟೋ ಏನೋ! ಅಲ್ಲಿಯ ಮತ ಪ್ರಸಾರಕರ ಪಾಲಿಗೆ ತಾವು ಅನುಸರಿಸುತ್ತಿರುವ ಮತಕ್ಕೆ ಹೊರತಾದ ಎಲ್ಲರೂ ಪಾಪಿಗಳು; ನರಕಕ್ಕೆ ಹೋಗತಕ್ಕವರು--ಎಂದು ಹೇಳಬಲ್ಲ ದಿಟ್ಟತನವೂ ಇದೆ. ಆ ರೀತಿ ಅಜ್ಞಾನದಿಂದ ಜನರು ನರಕಕ್ಕೆ ಹೋಗದಂತೆ ತಡೆಯುವ ಪುಣ್ಯಕಾರ್ಯಗಳಿಗೆ ತಮ್ಮ ಜೀವನವನ್ನು ಅರ್ಪಿಸಿಕೊಂಡಷ್ಟೇ ನಿಷ್ಠಾವಂತ, ಅಷ್ಟೇ ಶುಂಠನಂಬಿಕೆಯವರಾದ ಆಚಾರ್ಯರೂ ಇದ್ದಾರೆ. ಅವರು ತಮ್ಮ ಒಂದು ಕೈಯಲ್ಲಿ ತಿಂಡಿಯನ್ನು ತೋರಿಸುತ್ತ, ಇನ್ನೊಂದು ಕೈಯಲ್ಲಿ ಬೆತ್ತ ಹಿಡಿದು ಬೆದರಿಸುತ್ತ ಅಜ್ಞಾನಿಗಳ ಆತ್ಮೋದ್ಧಾರಕ್ಕೆ ಅಹರ್ನಿಶಿ ದುಡಿಯುತ್ತಾರೆ.

ಕಾಲಮಾನದ ದೃಷ್ಟಿಯಿಂದ ಈ ಇಪ್ಪತ್ತನೆಯ ಶತಮಾನದ ಈಗಿನ ದಿನಗಳಲ್ಲಿ, ಇಂಥ ನಂಬಿಕೆಗಳಿಂದ ಪ್ರೇರಿತರಾಗಿ ಧರ್ಮಶ್ರದ್ಧೆಯನ್ನು ಬೆಳೆಯಿಸಿ ಕೊಂಡವರ ಸಂಖ್ಯೆ ಅಥವಾ ಬೆಳೆಯಿಸಿಕೊಂಡಿದ್ದೇವೆ ಎನ್ನುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಅದೇ ಮಾನದಿಂದ ನಮ್ಮ ಸಾಮಾಜಿಕ ಜೀವನವನ್ನು ನೋಡಿ ದ್ದಾದರೆ, “ಪರರಿಗೆ ಏನಾದರೂ ಚಿಂತೆಯಿಲ್ಲ; ಸ್ವಂತಕ್ಕೆ ಸುಖ ಸಿಗಲಿ' ಎನ್ನುವ ವರ್ತನೆಯೂ ಹೆಚ್ಚುತ್ತಿದೆ. ಹೀಗೇಕಾಗುತ್ತಿದೆ ಎಂಬುದು ಒಂದು ದೊಡ್ಡ ಸಮಸ್ಯೆ. ಹೆಚ್ಚಿನ ಮತಗಳು--ಈ ವಿಶ್ವಸೃಷ್ಟಿ ಮತ್ತು ಅದರೊಳಗಿನ ಜೀವಕೋಟಿಯು ದೇವರೆಂಬ ವ್ಯಕ್ತಿಯಿಂದಲೋ, ಶಕ್ತಿಯಿಂದಲೋ ಉಂಟಾಯಿತೆಂದರೂ, ವರ್ತನೆ ಯಲ್ಲಿ ಮಾತ್ರ ತಾವೆಲ್ಲರೂ ಒಂದೇ ತಂದೆಯ, ಒಂದೇ ತಾಯಿಯ, ಇಲ್ಲವೆ ಬದುಕಿನ ಮಕ್ಕಳು ಎಂಬ ಭಾವನೆ ಕಾಣಿಸುತ್ತಲಿಲ್ಲ.

ಚಪ್ಪಟೆಯಾಗಿತ್ತೆಂಬ ನಮ್ಮ ಭೂಮಿ ಮುಂದೆ ಉರುಟಾಗಿ, ಉರುಟಾಗಿದ್ದ ಗೋಲ ತನ್ನ ಸೇವೆ ಮಾಡುತ್ತಿದ್ದ ಸೂರ್ಯನನ್ನು ಕಳಚಿಕೊಂಡು, ಕ್ರಮೇಣ ಅವನಿಗೇ ಸುತ್ತು ಬರತೊಡಗಿ--ಇವತ್ತಿನ ದಿನದಲ್ಲಿ ಅನಂತ ದೂರಕ್ಕೂ, ವಿಸ್ತಾರಕ್ಕೂ ಚಾಚಿಕೊಂಡ, ಅದ್ಭುತ ವಿದ್ಯಮಾನಗಳಿಂದ ಕೂಡಿದ ಬೃಹತ್‌ ಲೋಕ ವೊಂದರಲ್ಲಿ ಒಂದು ಧೂಳಿನ ಕಣಕ್ಕಿಂತಲೂ ಸಣ್ಣದಾಗಿ ಕಾಣಿಸೀತು. ಆದರೂ, ಈ ಮತಧರ್ಮಗಳು ಕಲ್ಪಿಸಿಕೊಂಡ ದೇವರುಗಳ ಗಾತ್ರ ಬೆಳೆಯಲೇ ಇಲ್ಲ; ಅವರ ಕಾರ್ಯಕ್ಷೇತ್ರ ಹಿಗ್ಗಲಿಲ್ಲ; ಈ ದೇವರುಗಳು, ಅವರನ್ನು ಕಲ್ಪಿಸಿದ ಮನುಷ್ಯರ ಮನಸ್ಸಿನಲ್ಲಿ--ಆರಂಭದಲ್ಲಿ ಎಲ್ಲ ಜೀವಿಗಳ ತಂದೆಯಾಗಿ ಹುಟ್ಟಿದ್ದರೂ, ಮುಂದೆ, ಮುಂದೆ ಆತನಿಗೆ ಬಹಳ ಶ್ರಮ ಕೊಡಬಾರದೆಂದು ಮತಧರ್ಮಗಳು ಅವನಿಗೆ ಮನುಷ್ಯನ ಆರೈಕೆಯನ್ನು ನೋಡಿಕೊಳ್ಳುವ ಹೊಣೆಯನ್ನು ಮಾತ್ರವೇ ಕೊಟ್ಟವು. ಮುಂದೆ, ಅದೂ ತೊಂದರೆಗೆ ಕಾರಣವಾಗಬಹುದೆಂದು ಯೋಚಿಸಿ, ಯಾರು ಅವರೊಡನೆ ಬೇಕಾಗಿಯೋ, ಬೇಡವಾಗಿಯೋ ನಿತ್ಯ ಸಂಭಾಷಣೆಯನ್ನು ನಡೆಯಿಸು ತ್ತಾರೋ, ಅವರೊಡನೆ ಮಾತ್ರವೇ ಸಂಬಂಧ ಇರಿಸಿಕೊಂಬಂತೆ ಮಾಡಿದುವು. ಹೀಗಾಗಿ, ಆತ ಉಳಿದ ಜೀವಕೋಟಿಗಳ ರಕ್ಷಣೆಯ ಹೊಣೆಯನ್ನು ಹೊತ್ತಂತೆ ಕಾಣಿಸುವುದಿಲ್ಲ. ಅವನೇ ಅವನ್ನು ಹೊತ್ತಿರದಾಗ ಮನುಷ್ಯ ಅದನ್ನು ಹೊರಬಲ್ಲನೇ? ಆ ಮನುಷ್ಯನ ಉದ್ದಾರಕ್ಕಾಗಿ ಮಾತ್ರ ಹುಟ್ಟಿದ ಧರ್ಮಗಳು ಹೊರಬಲ್ಲವೇ?

ಇನ್ನೂ ಒಂದು ವಿಷಯವಿದೆ; ದೈವವನ್ನು ಕುರಿತ ನಂಬಿಕೆ ದೇಶದಿಂದ ದೇಶಕ್ಕೆ, ತಲೆಮಾರಿನಿಂದ ತಲೆಮಾರಿಗೆ ಹರಿದುಬಂದ ನಂಬಿಕೆ. ಅಂಥಿಂಥ ನಂಬಿಕೆ ಅದಲ್ಲ. ಹಲವಾರು ಹಿರಿಯರು, ತಾವು ಅವನ್ನು ಕಂಡಿದ್ದೇವೆ; ಭೇಟಿಯಾಗಿದ್ದೇವೆ; ಅವನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡಿದ್ದೇವೆ--ಎಂದಿರುವ ನಂಬಿಕೆ ಅದು. ಇಂಥ ದೇವರುಗಳ ಕುಲ, ಗೋತ್ರ, ಸಂಸಾರದ ಕತೆ, ಗಮನ, ನಿರ್ಗಮನಗಳ ವಿಚಾರಗಳು ಪುರಾಣಗಳ ರೂಪದಲ್ಲಿ ನಮ್ಮ ಕೈಗಳಿಗೆ ಬಂದಿವೆ. ಅಂಥ ದೇವರನ್ನು ಗುರುತಿಸಿದವರೆಲ್ಲರೂ ಅವನನ್ನು ತಮ್ಮ ಭಾಷೆಯಿಂದ ಮಾತನಾಡಿಸಿದ್ದಾರೆ; ಅವನಿಗೆ ತಮ್ಮ ಉಡುಗೆ, ತೊಡುಗೆಗಳನ್ನು ತೊಡಿಸಿ ತೋರಿಸಿದ್ದಾರೆ. ಅದರಿಂದಾಗಿ, ತಮ್ಮ ಜನರಷ್ಟೇ ಅವನನ್ನು ಗುರುತಿಸಬಲ್ಲ ಸೌಕರ್ಯವೂ ದೊರೆಯುತ್ತದೆ.

ಇಷ್ಟೊಂದು ನಿಕಟ ಪರಿಚಯವುಳ್ಳ ದೇವರ ವಿಚಾರದಲ್ಲೂ, ಅವನ ಹೊಣೆಗಾರಿಕೆಯ ವಿಚಾರದಲ್ಲೂ, ಜಗತ್ತಿಗೂ ಮಿಕ್ಕ ಜೀವಿಗಳಿಗೂ ಇರುವ ಸಂಬಂಧದ ವಿಚಾರದಲ್ಲೂ, ಪ್ರತ್ಯಕ್ಷ ದರ್ಶನ ಮಾಡಿಸಿಕೊಂಡ ಜನಗಳು ಹೇಳುತ್ತಿರುವ ಬಣ್ಣನೆಗಳಲ್ಲಿ ಸಮಾನತೆ ಕಾಣಿಸುತ್ತಲಿಲ್ಲ. ಅಷ್ಟೇ ಅಲ್ಲ; ಆ ದೇವರನ್ನು ಮಾತನಾಡಿಸುವಾಗ, ಕರೆಯುವಾಗ 'ಅಮ್ಮನನ್ನು' 'ಅಪ್ಪ' ಎಂದು ಕರೆಯುತ್ತಾರೆ. 'ಗಂಡನ್ನು' 'ಹೆಣ್ಣೆಂದು' ಕರೆಯುತ್ತಾರೆ; 'ಹೆಣ್ಣನ್ನು' 'ಗಂಡೆಂದು' ಕರೆಯುತ್ತಾರೆ. ಅಂಥವರು ಕಂಡುಕೊಂಡ ಸತ್ಯದ ವಿಕೃತಿಗೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ. ದೇವರನ್ನು ಕಂಡುಕೊಂಡ ಗುರುಗಳು ಹೀಗೆ ಮಾಡುತ್ತ ಬಂದರೋ, ಅಥವಾ ಅವರನ್ನು ನಂಬಿಬಂದ ಜನರಿಗೂ ಆ ಬಗೆಯ ಕುರುಡುತನ ಪ್ರಾಪ್ತಿಸಿತೋ ಎಂಬ ಸಂದೇಹದಲ್ಲಿ ಈ ಕಾದಂಬರಿ ಕೊನೆಗೊಳ್ಳುತ್ತದೆ.

ಇನ್ನು ನಮ್ಮ ಉಡುಗೆ, ತೊಡುಗೆಗಳಂತಹ ಅಲಂಕಾರಗಳಂತೆಯೇ ಜನಗಳಲ್ಲಿ ತತ್ವಜ್ಞಾನ, ದರ್ಶನ, ಧರ್ಮಶಾಸ್ತ್ರ ಇತ್ಯಾದಿ ವಿಷಯಗಳು ಕೂಡ ಅಲಂಕಾರಿಕ ವಸ್ತುಗಳಾಗಿ ಬಳಕೆಯಾಗುವುದನ್ನೂ ಕಾಣುತ್ತೇವೆ.

ಈ ಕಾದಂಬರಿಯಲ್ಲಿ ಬೇಕೆಂದೇ ಜಾಣನೆಂಬ ಒಬ್ಬ ಹೆಡ್ಡನನ್ನು ನಾನು ತಂದಿರಿಸುವ ಪ್ರಯತ್ನ ಮಾಡಿದ್ದೇನೆ. ಆದರೆ ಆತ, ಅತೀಂದ್ರಿಯ ಜ್ಞಾನ ಪ್ರದರ್ಶಿಸುವ ಒಬ್ಬ ಸಾಮಾನ್ಯ ವ್ಯಕ್ತಿ; ಆದರೆ ಸಂತರ ಸಾಲಿಗೆ ಸೇರದವನು. ಕೆಲಕೆಲವು ಅತೀಂದ್ರಿಯಶಕ್ತಿಯುಳ್ಳವರು ಇವತ್ತಿಗೂ ಅಲ್ಲಿ, ಇಲ್ಲಿ ಕಾಣಸಿಗುತ್ತಾರೆ. ಅವರ ಅತೀಂದ್ರಿಯ ಜ್ಞಾನಕ್ಕೆ ಅವರೇ ಕಾರಣವನ್ನು ಹೇಳಲಾರರು. ಆದರೆ, ಅವರು ತಾವು ಹೇಳಿದ್ದೆಲ್ಲವೂ ನಿಜವಾಗುತ್ತದೆ--ಎನ್ನದೇ ಹೋದರೂ, ಸಾಕಷ್ಟು ನಿದರ್ಶನ ಗಳು ನಿಜವೆಂದು ತಿಳಿದುಬಂದ ಮೇಲೆಯೂ, ತಾವು ದೇವರ ಅವತಾರಿಗಳು, ಅತಿಮಾನವರು ಎಂದುಕೊಂಡಿಲ್ಲ. ಪೀಟರ್‌ ಹುರ್ಸಾಕ್‌ ಎಂಬ ಒಬ್ಬ ಡಚ್‌ ತರುಣ ಗೋಡೆಗೆ ಬಣ್ಣ ಬಳೆಯುವಾಗ ಹತ್ತಿದ್ದ ಎಣಿಯಿಂದ ಕೆಳಕ್ಕೆ ಬಿದ್ದ. ಬಿದ್ದುದರಿಂದ ಆತನ ಮಿದುಳಿಗೆ ಪೆಟ್ಟಾಯಿತು. ಕೆಲವು ಕಾಲದ ಮೇಲೆ ಆ ಪೆಟ್ಟಿನ ಪ್ರಭಾವದಿಂದಲೋ ಏನೋ, ಆತ ಅತೀಂದ್ರಿಯಶಕ್ತಿಯನ್ನು ಪ್ರದರ್ಶಿಸತೊಡಗಿದ. ಹಾಗೆಯೇ ನಾನು ನನ್ನೀ ಕತೆಯ ಜಾಣನನ್ನು ಮಾಡಿನ ಚಾವಣಿಗೆ ಹುಲ್ಲು ಹೊದೆಸಲು ಕಳುಹಿಸಿ, ಉದ್ದೇಶಪಟ್ಟು ಬೀಳಿಸಿದ್ದೇನೆ. ಇಲ್ಲಿ ನನ್ನ ಉದ್ದೇಶ, ಜಾಣನ ತಲೆಗೆ ಹುಟ್ಟಿನಿಂದ ಅಂಟಿಬಂದ ಸಾಂಸ್ಕೃತಿಕ ಪರೆಗಳು ಕಳಚಿಹೋಗಿ, ಆತ ಒಂದು ಮಗುವಿನಂತೆ ಜಗತ್ತನ್ನು ನೋಡಲಿ ಎಂಬ ಬಯಕೆಯಿಂದ ಹಾಗೆ ಮಾಡಿದೆ. ಜತೆಗೆ, ಆತ ಕೆಲವು ಬಾರಿ ಅತೀಂದ್ರಿಯಶಕ್ತಿಯನ್ನೂ ಪ್ರದರ್ಶಿಸುತ್ತಾನೆ. ಅದು ದೈವಸಾಕ್ಷಾತ್ಕಾರ ಮಾಡಿಕೊಂಡದ್ದರಿಂದ ಬಂದ ಶಕ್ತಿಯಲ್ಲ ಎಂದು ತಿಳಿಯಬಹುದು.

ಅವರವರ ಸಾಂಸ್ಕೃತಿಕ ಹಿನ್ನೆಲೆಗಳಿಂದಾಗಿ ಹೆಚ್ಚಿನ ಜನರು ಅನೇಕ ಧಾರ್ಮಿಕ ಭಾವನೆಗಳನ್ನು ತಮ್ಮ ಜೀವನದ ಉದ್ದಕ್ಕೂ ಹೊತ್ತು ನಲಿಯುತ್ತಾರೆ. ಅಂಥವು ಗಳನ್ನು ಕಳಚಿಕೊಂಡು ನಾನು ಜಗತ್ತನ್ನು ನೋಡುವ ಪ್ರಯತ್ನ ಮಾಡಿದೆ. ಈ ತನಕ ವಿಜ್ಞಾನಿಗಳು ಜಗತ್ತನ್ನು ಕುರಿತು ಏನೇನು ಹೇಳಿದ್ದಾರೋ, ಅದನ್ನು ನನಗೂ ನನ್ನ ಸುತ್ತಣ ಬದುಕಿಗೂ ಇರುವ ಸಂಬಂಧವನ್ನು ತಿಳಿಯಲು ಉಪಯೋಗಿಸಿ ಕೊಳ್ಳುತ್ತಿದ್ದೇನೆ. ನನ್ನ ಕಣ್ಣಿಗೆ ದೇವರು ಇದ್ದಾನೆ, ಅಥವಾ ಇಲ್ಲ ಎಂಬ ಎರಡು ವರ್ಗದವರಲ್ಲಿಯೂ ವ್ಯತ್ಯಾಸ ಕಾಣಿಸುತ್ತಲಿಲ್ಲ. 'ಇದೆ' ಎಂಬ ವಸ್ತುವಿನ ಯಾವ ಪರಿಚಯವೂ ಇಲ್ಲದ ನಂಬಿಕೆ ಏನು ಮಾಡೀತು? 'ಇದ್ದಾನೆ' ಎನ್ನುವವರು ಇದ್ದಂತೆ ವರ್ತಿಸದೆ ಇರುವುದನ್ನು ಕಂಡು ಆತ ಇದ್ದೂ ಪ್ರಯೋಜನವಿಲ್ಲವೆಂಬ ಭಾವನೆ ಯನ್ನು ಅವರಿಂದ ನಾನು ಪಡೆಯುತ್ತಿದ್ದೇನೆ. ದೇವರು ಇದ್ದರೂ, ಇಲ್ಲದಿದ್ದರೂ ಆತ ನನಗಿಂತ ಎಷ್ಟೆಷ್ಟೋ ಮೊದಲಿನಿಂದಲೇ ಇದ್ದಿರಬೇಕು. ಅಥವಾ ಇಲ್ಲದಿರಬೇಕು; ನನ್ನ ನಂತರವೂ ಇರಬೇಕು ಅಥವಾ ಇಲ್ಲದಿರಬೇಕು. ನಾನು ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಆ ಭಾವನೆ ಯಾವ ರೀತಿಯ ಪುಷ್ಟಿಯನ್ನು ಕೊಡುತ್ತದೆ; ಅರ್ಥ ಕೊಡುತ್ತದೆ ಎಂಬುದು ಮುಖ್ಯ ವಿಷಯ. ಆ ವಿಷಯವೇ ಜೀವನ ಪ್ರವಾಹ; ಅದು ತೊಡಗಿ ೩,೦೦೦ ಮಿಲಿಯ ವರ್ಷಗಳಿಗಿಂತ ಹೆಚ್ಚಾಯಿತು. ಭೂಮಿಯ ಮೇಲೆ ಜೀವಕೋಟಿ ಕಾಣಿಸಿದಂದಿನಿಂದಲೂ ಆ ಪ್ರವಾಹ ತೊಡಗಿತು. ಇದು ತುಂಬ ಹಳೆಯ ವಿಷಯ. ಆದರೆ ಇನ್ನೂ ಎಷ್ಟೋ ಮುಂದಕ್ಕೆ ಚಾಚಿಕೊಳ್ಳಲಿರುವ ವಿಷಯ. ನಮ್ಮೆಲ್ಲ ಮತ ಮತ್ತು ಧರ್ಮಗಳನ್ನು ಸಾರಿದ ಪ್ರವಾದಿಗಳೂ, ಋಷಿಗಳೂ ಕಾಣಿಸಿಕೊಂಡದ್ದು ನಿನ್ನೆಯೋ ಮೊನ್ನೆಯೋ! ಮನುಷ್ಯ ಭೂಮಿಯ ಮೇಲೆ ಕಾಣಿಸಿಕೊಂಡದ್ದು ಕೇವಲ ಮೂರು ಮಿಲಿಯ ವರ್ಷ ಗಳಿಂದೀಚೆ; ಮತಧರ್ಮಗಳು ಕಾಣಿಸಿಕೊಂಡು ೧೦,೦೦೦ ವರ್ಷವಾಗಿದ್ದೀತು! ಅವರಿಗಿಂತ ಮೊದಲು ಈ ಭೂಮಿಯ ಮೇಲೆ ಪ್ರಕಟಗೊಂಡ ಯುಗಾಂತರಗಳ ಜೀವನದ ಪ್ರವಾಹ ನಿರರ್ಥಕ ಎಂದಾದಲ್ಲಿ, ನನ್ನ ಸ್ವಂತ ಬದುಕು ಸಹ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಪಡೆಯಲಾರದು. ಅದಕ್ಕಾಗಿ ನಾನು ಕೊರಗಬೇಕಾದ ಕಾರಣವೇ ಇಲ್ಲ.


- ಶಿವರಾಮ ಕಾರಂತ

 

ಪುಟಗಳು: 400

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !