ಶಿವರಾಮ ಕಾರಂತರ ಇನ್ನಷ್ಟು ಬಿಡಿ ಬರಹಗಳು (ಇಬುಕ್)

ಶಿವರಾಮ ಕಾರಂತರ ಇನ್ನಷ್ಟು ಬಿಡಿ ಬರಹಗಳು (ಇಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

ಕನ್ನಡದ ಪ್ರಖ್ಯಾತ ಲೇಖಕ ಡಾ. ಕೋಟ ಶಿವರಾಮ ಕಾರಂತರ ಬಿಡಿ ಬರಹಗಳ ಹತ್ತನೆಯ ಸಂಪುಟವನ್ನು ಕನ್ನಡಿಗರ ಕೈಗೆ ನೀಡಲು ಅತೀವ ಹೆಮ್ಮೆಯೆನಿಸುತ್ತಿದೆ. ರಾಷ್ಟ್ರೀಯ ಲೇಖಕ (National writer) ರೆನಿಸಿಕೊಳ್ಳಲು ಅರ್ಹತೆ ಗಳಿಸಿರುವ ಏಕೈಕ ವ್ಯಕ್ತಿ, ರವೀಂದ್ರನಾಥ ಠಾಕೂರರ ಬಳಿಕ, ಕನ್ನಡದ ಶಿವರಾಮ ಕಾರಂತರೇ ಸೈ - ಎಂಬುದಾಗಿ ವಿಮರ್ಶಕರಿಂದ ಪ್ರಶಂಸೆ ಪಡೆದಿರುವ - ನಮ್ಮ ಕಾರಂತರ ಬರಹಗಳು ಪ್ರಕಟವಾಗದ ಕನ್ನಡ ನಿಯತಕಾಲಿಕೆಗಳೇ ಇಲ್ಲವೆಂಬ ಡಾ. ಹಾ.ಮಾ.ನಾಯಕರ ಮಾತು ಅಕ್ಷರಶಃ ನಿಜವೆಂಬುದು ನನಗೀಗ ಚೆನ್ನಾಗಿ ಮನವರಿಕೆಯಾಗಿದೆ. ಹಳೆಗಾಲದ ಯಾವ ಪತ್ರಿಕೆ, ನಿಯತಕಾಲಿಕೆಗಳ ಪುಟಗಳನ್ನು ತಿರುವಿ ಹಾಕಿದರೂ, ಕಾರಂತರ ಬರಹಗಳು ಕಣ್ಣೆದುರು ಧುತ್ತೆಂದು ನಿಲ್ಲುತ್ತವೆ; ಅವರ ಬರವಣಿಗೆ ಕೇವಲ ಸಾಹಿತ್ಯಕ ಬರಹಗಳಿಗೆ ಸೀಮಿತವಾಗದೆ ಇದ್ದುದರಿಂದ, ಇಂದು ವ್ಯಾಪಕವಾಗಿ ಚರ್ಚೆ, ಸಂಶೋಧನೆ, ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಕೃಷಿ, ಜಾನುವಾರುಗಳ ಸಾಕಣೆ, ತಳಿ ಅಭಿವೃದ್ಧಿ, ಹೆಚ್ಚು ಹಾಲಿನ ಇಳುವರಿ, ಜೇನು ಸಾಕಣೆ, ಕೋಳಿ ಸಾಕಣೆ - ಮುಂತಾದ ಜನಜೀವನದ ದಿನನಿತ್ಯದ ಪ್ರಶ್ನೆಗಳ ಕುರಿತೂ ಕಾರಂತರು ಇಪ್ಪತ್ತನೇ ಶತಮಾನದ ಎರಡು, ಮೂರನೆಯ ದಶಕಗಳಷ್ಟು ಹಿಂದೆಯೇ ಯೋಚಿಸಿದ್ದು, ಲೇಖಕರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಅಷ್ಟು ಹಿಂದೆಯೇ ಕಾಡಿನ ಸಂರಕ್ಷಣೆ, ಕಾಡುಪ್ರಾಣಿಗಳಿಗೆ, ನಾಡಿನ ಪಶುಪಕ್ಷಿಗಳಿಗೂ ಈ ಭೂಮಿಯ ಮೇಲಿನ ಹಕ್ಕು - ಮನುಷ್ಯರಿಗಿರುವಷ್ಟೇ ಇದೆ - ಎಂಬ ಪುರೋಗಾಮಿ ಚಿಂತನೆಯನ್ನು ಕಾರಂತರ ಲೇಖನಿ ಹೊರಗೆಡಹಿದೆ. ಅಂದಿನಿಂದಲೇ ಶುದ್ಧ ನೆಲ, ಪರಿಶುದ್ಧ ಜಲದ ಬಗ್ಗೆ ಚಿಂತಿಸಿದ ಕಾರಂತರ ಲೇಖನಿ ಅವರು ಕೊನೆಯುಸಿರು ಬಿಡುವ ತನಕವೂ ಕಲುಷಿತಗೊಂಡದ್ದೇ ಇಲ್ಲ. ಅವರ ಬರವಣಿಗೆಯು ಹತ್ತು ಹಲವಾರು ದಿಗಂತಗಳತ್ತ ಕೈಚಾಚಿದ್ದರ ದೆಸೆಯಿಂದ ಕನ್ನಡ ಭಾಷೆಗೆ, ಕನ್ನಡದ ಮನಸ್ಸುಗಳ ವೈಚಾರಿಕ ಚಿಂತನೆಗೆ, ಸಾಮಾಜಿಕ ಸಮಸ್ಯೆಗಳ ಚಿಂತನ-ಮಂಥನಕ್ಕೆ ಮೂಲ ಸೆಲೆಯಾಗಿ, ಆದಿಮ ಸ್ಫೂರ್ತಿಯ ಕಣಜವಾಗಿ ಮೈತುಂಬಿ - ಕನ್ನಡಿಗರ ಬೊಕ್ಕಸಕ್ಕೆ ಕಾಣಿಕೆಯಾಗಿ ಲಭಿಸಿದ್ದ ವಾಸ್ತವವನ್ನು ಕನ್ನಡಿಗರು ಮರೆಯುವಂತಿಲ್ಲ.

"ಇಂದು ಕಾರಂತರ ಕಾದಂಬರಿ ಪ್ರಸ್ತುತವಲ್ಲ; ಕಾರಂತರ ಸಾಹಿತ್ಯೇತರ ಬರಹಗಳು ಅಪ್ರಸ್ತುತವಾಗಿವೆ; ಯಾರೂ ಬರೆಯಬಹುದಾದ ಅಥವಾ ಅನುವಾದಿಸಬಹುದಾದ ವಿಷಯ ಸಂಪತ್ತು ನಮ್ಮ ಕಣ್ಮುಂದಿರುವುದರಿಂದ ಕಾರಂತರ ಬರಹಗಳೇನು ಮಹಾ?" ಎಂದವರ ಟೀಕಾಸ್ತ್ರಗಳೂ ನನ್ನ ಕಿವಿಗೆ ಬಿದ್ದಿವೆ. ಕಾರಂತರು ಬರೆದಿದ್ದ ಕಾಲ, ಅಂದಿನ ಕನ್ನಡ ಭಾಷೆಯ ಮಟ್ಟ, ಜಾಗತಿಕ ಜ್ಞಾನ ಸಂವಹನದ ಇತಿಮಿತಿ- ಮುಂತಾಗಿ ಹಲವು ಮಗ್ಗುಲುಗಳಿಂದ, ಪೂರ್ವಾಗ್ರಹಪೀಡಿತರಾಗದೆ ನಾವು ಚಿಂತಿಸಬಲ್ಲೆವಾದರೆ - ಕಾರಂತರ ಬರಹಗಳ ಮಹತ್ವವನ್ನು ನಾವು ಮನಗಾಣಲು ಸಾಧ್ಯ.

1923ರಿಂದ ತೊಡಗಿ, ಕಾರಂತರು 1997ರಲ್ಲಿ ಕಾಲವಾಗುವ ತನಕವೂ ಬರೆದಿದ್ದ 1000ಕ್ಕೂ ಮಿಕ್ಕಿದ ಬಿಡಿ ಲೇಖನಗಳನ್ನು ಸಂಶೋಧಿಸಿ, ಸಂಪಾದಿಸಿ, ಹತ್ತು ಸಂಪುಟಗಳಲ್ಲಿ ಮುದ್ರಣಗೊಳ್ಳಲು ದುಡಿಯುವಾಗ ನನ್ನ ಗಮನಕ್ಕೆ ಬಂದೊಂದು ವಿಶೇಷ ಸಂಗತಿ ಎಂದರೆ - ಲೇಖನಗಳ ಶಿರೋನಾಮೆಗಳಲ್ಲಿ ಪುನರುಕ್ತಿ ಇಲ್ಲದಿರುವುದು. ಅಪವಾದವೆಂಬಂತೆ, ಒಂದೋ, ಎರಡೋ ಹೆಸರುಗಳನ್ನಷ್ಟೇ ಗುರುತಿಸಬಹುದಾದರೂ, ಲೇಖನದ ವಿಷಯ ಸಂಪೂರ್ಣ ಬೇರೆ, ಬೇರೆಯಾಗಿವೆ. ತನ್ನ ಬರಹಗಳನ್ನು ಅಥವಾ ತನ್ನ ಕುರಿತು ಇತರರು ಬರೆದಿರುವ ಬರವಣಿಗೆಗಳನ್ನು ಕಾಪಿಡಲು ಯಾವುದೇ ಕಾಳಜಿ ವಹಿಸಿರದ ಕಾರಂತರು ಸುಮಾರು ಏಳೂವರೆ ದಶಕಗಳ ತನಕವೂ ಅವ್ಯಾಹತವಾಗಿ ಬರೆದವರು; ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ವಾಸ್ತವಿಕ ವಿದ್ಯಮಾನಗಳ ದೃಷ್ಟಾಂತರೂಪದ ವಿವರಣೆಗಳಲ್ಲಷ್ಟೇ ಪುನರುಕ್ತಿಯನ್ನು ಕೆಲವೊಂದು ಬರಹಗಳಲ್ಲಿ ಗುರುತಿಸಬಹುದಾದರೂ, ವಿಷಯ ಮಂಡನೆ, ವಾಕ್ಯಗಳ ಜೋಡಣೆ, ನಿರೂಪಣಾ ಶೈಲಿಗಳಲ್ಲಿ ಚರ್ವಿತಚರ್ವಣವನ್ನು ಕಾಣಲಾರೆವು. ಯಾವೊಬ್ಬ ಕನ್ನಡ ಲೇಖಕನಿಗಿಂತಲೂ ಅತಿ ಹೆಚ್ಚು ಸಾರ್ವಜನಿಕ ಉಪನ್ಯಾಸಗಳನ್ನು ಮಾಡಿರುವ ಶಿವರಾಮ ಕಾರಂತರ ಭಾಷಣಗಳಿಗೂ ಇದೇ ಮಾತು ಅನ್ವಯವಾಗುತ್ತದೆ - ಎಂಬುದನ್ನು ನಾನು ಗಮನಿಸಿದ್ದೇನೆ.


ಇತಿ,
ಬಿ. ಮಾಲಿನಿ ಮಲ್ಯ.

 

ಪುಟಗಳು: 320

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !