ಕರುಳಿನ ಕರೆ

ಕರುಳಿನ ಕರೆ

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಈ ಕಥಾನಕದಲ್ಲಿ ನಮ್ಮ ಸಮಾಜ ಜೀವನದ ಸುಂದರವಾದೊಂದು ಭಾವನೆಯನ್ನು ಚಿತ್ರಿಸಲೆತ್ನಿಸಿದ್ದೇನೆ. ಮಾನವನ ಬಾಳು ತೃಪ್ತಿ ಪಡೆಯ ಬಹುದಾದ, ಸಂತೋಷಗೊಳ್ಳಬಹುದಾದ ವಿಧಾನಗಳು ಹಲವು. ನೋವು ಗೊಳ್ಳಬಹುದಾದ ಪ್ರಸಕ್ತಿಗಳೂ ಕಡಿಮೆಯಿಲ್ಲ. ಸಂತೋಷಕಾರಕ ವಸ್ತುಗಳಲ್ಲಿ ಪ್ರೇಮವೆಂಬುದು ಅತ್ಯಮೂಲ್ಯ ವಸ್ತುವೆಂದು ನನ್ನ ಭಾವನೆ. ಅದಿಲ್ಲದ ಜೀವನವೇ ಬರಡು. ಅದನ್ನು ಕಳೆದುಕೊಂಡ ವ್ಯಕ್ತಿ ನೋವಿಗೂ ಗುರಿಯಾಗು ತ್ತಾನೆ. ಮಾನವತೆ ವಿಶಾಲಿಸಿ ದೈವಿಕತೆಯನ್ನು ಹೊಂದುವುದು ಸಾಧ್ಯವಿದ್ದರೆ, ಅದು ಪ್ರೀತಿಸಬಲ್ಲ ಗುಣದಿಂದ. ಈ ಗುಣ ಬೆಳೆಯಲು ನೆಲ, ಕಾಲ, ಸಂಪತ್ತು ಇವುಗಳ ಅನುಕೂಲತೆಗಳಾಗಲಿ, ಅಂತರ, ಅಡಚಣೆಗಳಾಗಲೀ ಇಲ್ಲ. ನೆಲ, ಕಾಲ, ಸಂಪತ್ತುಗಳು ತಂದೊಡ್ಡುವ ಅಡಚಣೆಗಳ ಹಿನ್ನೆಲೆಯಲ್ಲಿ ಪ್ರೇಮದ ವೈಖರಿ ಇನ್ನಷ್ಟು ಹೆಚ್ಚೀತೇ ವಿನಾ ಕಡಿಮೆಯಾಗಿ ಕಾಣಲಾರದು.

'ಇದೊಂದು ಪ್ರೇಮ ಚಿತ್ರ'-ಎಂದೊಡನೆಯೇ ಪ್ರಣಯ ಕಾದಂಬರಿ ಎಂದು ತಿಳಿಯಬೇಕಾಗಿಲ್ಲ. ಪ್ರಣಯವೂ ಪ್ರೇಮದ ಒಂದು ರೂಪವೇ. ಇಲ್ಲಿ ನಾನು ಚಿತ್ರಿಸಬೆಳೆಸಿದ್ದು ಪ್ರೇಮದ ವಾತ್ಸಲ್ಯ ರೂಪವನ್ನು; ಎರಡು ಬಳಗಗಳ, ನಿಸ್ಸಹಾಯರಾಗಿ ತೊಳಲಿದ ತಾಯಂದಿರು ತಮ್ಮ ಕರುಳಿನ ಮರುಕ ತೋರಿದ ಬಗೆಯನ್ನು. ಇದನ್ನು 'ಶಬರಿಯ ಪ್ರೇಮ' ಎಂದರೂ ಸಲ್ಲುತ್ತದೆ. ಪ್ರೀತಿಯ ಸಲುವಾಗಿ, ಪ್ರೀತಿಯೇ ಅದರ ಗುರಿ; ಸ್ವಲಾಭವಲ್ಲ. ಪ್ರೀತಿಸುವ ವಸ್ತುವಿನ ಕಲ್ಯಾಣದ ಬಯಕೆಯೇ ಆ ಮರುಕಕ್ಕೆ ಕಾರಣ.

ಬಡತನದಲ್ಲಿ ತಾಯಿತಂದೆಯರ ಋಣ ಪಡೆದು, ಹುಟ್ಟಿ, ಬೆಳೆದು, ತಾರುಣ್ಯ ಬರುತ್ತಲೇ ದೊರೆಯುವ ಸ್ವಾತಂತ್ರ್ಯದಿಂದ ಹಿಗ್ಗಿ, ನೌಕರಿ ದೊರಕಿಸಿ, ಹಿರಿಯರಿಂದ ದೂರವಾಗಿ, ಹಿಂದಿನ ಸಂಬಂಧವನ್ನೆಲ್ಲ ಮರೆತ ಒಬ್ಬಿಬ್ಬರು ತರುಣ ಮಿತ್ರರ ನಡವಳಿಕೆ ಈ ಕಾದಂಬರಿಯನ್ನು ಕೆರಳಿಸಿತು. ನಾನು ನನ್ನ ಹಿರಿಯರ ಸೇವೆಯನ್ನು ಬಹಳವಾಗಿ ಮಾಡಿರುವೆನೆಂಬ ಹೆಮ್ಮೆಯಿಲ್ಲ. ಆದರೆ. ನಮ್ಮ ತಾಯಿ, ಸಾಯುವ ಗಳಿಗೆಯ ತನಕ ತನ್ನ ಮಕ್ಕಳಿಗಾಗಿ ಎಷ್ಟು ಉದಾರವಾದ ಪ್ರೀತಿ ಸಲ್ಲಿಸಿದಳು ಎಂಬುದು ನನ್ನ ಕಲ್ಪನೆಯನ್ನು ಮೀರಿಸುತ್ತದೆ. ಅಂಥ ಹೃದಯ ವಿಸ್ತಾರ, ನಮ್ಮೆಲ್ಲರ ಬಾಳಿನಲ್ಲೂ ಬಂದು ನಮ್ಮನ್ನು ಮಾನವರನ್ನಾಗಿಸಲಿ-ಎಂಬುದೇ ನನ್ನ ಹಂಬಲ.

ಈ ಕಥಾಸರಣಿಯ ಕಾಶೀ ಸಮಾರಾಧನೆಯ ಪ್ರಸಂಗವಾಗಲಿ, ಚಿಕ್ಕ ಪ್ರಮಾದಕ್ಕಾಗಿ ಸಿಟ್ಟಿಗೆದ್ದು, ಬಂಧುಗಳನ್ನು ಕೊಲೆ ಮಾಡಿ, ಬೆದರಿ ತಲೆ ತಪ್ಪಿಸಿಕೊಂಡ ಘಟನೆಯಾಗಲಿ ನಡೆದ ವಿಷಯಗಳೇ. ಅವನ್ನು ನನ್ನ ಉದ್ದೇಶಕ್ಕೆ ನೆರವಾಗುವಂತೆ ಇಲ್ಲಿ ಬಳಸಿಕೊಂಡಿದ್ದೇನೆ.

ಈ ಕಥಾರಂಗ ಕನ್ನಡ ಜಿಲ್ಲೆಯಿಂದ ಬಿಜಾಪುರದ ತನಕ ವಿಸ್ತರಿಸಿದ್ದರೂ ಲೇಖಕನ ಸ್ವದೇಶ ಪ್ರೇಮ ಕನ್ನಡ ಜಿಲ್ಲೆಯನ್ನೇ ಒಲಿದಿರು ವುದೆಂದರೆ, ಅದು ಆ ನಾಡಿನ ಹಸಿರುಹಚ್ಚೆ, ಗುಡ್ಡ ಬೆಟ್ಟ, ಕಡಲು, ನದಿಗಳು ಅವನ ಜೀವನಕ್ಕೆ ಕೊಡುತ್ತಲಿರುವ ಚಿದಾನಂದದ ಕಾಣಿಕೆಯಿಂದಲ್ಲದೆ ಇನ್ನೇನಲ್ಲ. ಬೆಂಗಾಡಿನಲ್ಲಿ ಹುಲಿಯಾಗಿ ಮೆರೆಯುವುದಕ್ಕಿಂತ ಮಲೆನಾಡಿನಲ್ಲಿ ಹುಲ್ಲೆಯಾಗಿ ನಲಿಯುವ ಆಶೆ ಅವನಿಗೆ.


- ಶಿವರಾಮ ಕಾರಂತ

 

ಪುಟಗಳು: 288

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !