ಕುಡಿಯರ ಕೂಸು

ಕುಡಿಯರ ಕೂಸು

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

ಕಾರಂತರ ಮೊದ ಮೊದಲಿನ ಕಾದಂಬರಿಗಳ ಸೊಗಸೇ ಬೇರೆ. ಬೆಟ್ಟದ ಜೀವದ ದಟ್ಟ ಕಾಡೊಳಗೆ ಕಳೆದು ಹೋದವರಿಗೆ ಅಲ್ಲೇ ಒಂಚೂರು ತಡಕಾಡಿದರೆ ಸಿಗುವ ನಿಧಿಯೇ ಕುಡಿಯರ ಕೂಸು.

ಅದರಲ್ಲಿ ಬೆಟ್ಟ ಕಡಿದು ಕೃಷಿ ನೆಲ ಮಾಡಿದ ಸಾಹಸಿ ಬ್ರಾಹ್ಮಣರ ಜೀವನ ಚಿತ್ರವಿದ್ದರೆ ಇದು ನಿಸರ್ಗದ ಮಕ್ಕಳಾದ ಕುಡಿಯರ ಹಾಡು ಪಾಡು. ಇಲ್ಲಿ ಅವರು ಭೂಮಿಯ ಒಡೆಯರಲ್ಲ. ಧನಿಯ ಒಕ್ಕಲು ಮಕ್ಕಳು. ಮಲೆ ಖರೀದಿಸಿದ ಧನಿಯ ಕೆಳಗೆ ಕೆಲಸ ಮಾಡುತ್ತಾ ವರ್ಷಕ್ಕೆರಡೋ ಮೂರೋ ಬಾರಿ ಬರುವ ಅವರ ಸೇವೆ ಮಾಡುತ್ತಾ ಏಲಕ್ಕಿ ಕುಯ್ದು ಅವರಿಗೆ ಕೊಟ್ಟು ತಮಗೆ ಅಗತ್ಯವಾದ ಉಪ್ಪು,ಬಟ್ಟೆಯ ತೆಗೆದುಕೊಳ್ಳುವವರು. ಅದಷ್ಟೇ ಹೊರ ಜಗತ್ತಿನಿಂದ ಅವರಿಗೆ ಬೇಕಾಗುವಂತಹದ್ದು ಎನ್ನುವುದು ಈಗಿನ ಕಾಲದಲ್ಲಿ ನಂಬಲೂ ಅಸಾಧ್ಯದ ಸಂಗತಿ!!

ಇಂತಹ ಕುಡಿಯರ ಕೆಂಚನ ಮೊಮ್ಮಗ ಕರಿಯ ..ತನ್ನಜ್ಜ ಕಾಲವಾದ ನಂತರ ಗುರಿಕಾರಿಕೆ ನಡೆಸಬೇಕೆಂದು ದೈವ ಹೇಳಿದ ಕಾರಣ ಆದವ. ಕಾಡಿನ ಮಗ. ಇಲ್ಲಿ ಕಥಾನಾಯಕ ಅಂತ ಯಾರಿಲ್ಲ. ಮನುಷ್ಯ ಸಹಜ ಕಾಮನೆಗಳು, ಅವರ ಚರ್ಯೆ ನಿರ್ದೇಶಿಸುವ ದೈವದ ನುಡಿಗಳು, ನಡುವೆ ಮತಾಂತರ ಮಾಡಲು ಬಂದ ಪಾದ್ರಿಗಳು ಸೋತು ಹಿಮ್ಮೆಟ್ಟುತ್ತಾರೆ..ಆದರೆ ಅವರೊಳಗಿನ ಒಡಕಿಗೆ ಹೊರಗಿನವರು ಯಾಕೆ ಬೇಕು? ಎಲ್ಲ ಕಡೆ ಇರುವಂತೆ ಒಳಗೊಳಗೆ ಅಸಮಾಧಾನ ಬೆಂಕಿಯಾದರೆ ಸಾಕಲ್ಲ! ಧನಿ ತಿರುಮಲ ಭಟ್ಟರ ಹೆಣ್ಣು ಚಪಲ ಕುಡಿಯರ ಹೆಣ್ಣುಗಳತ್ತ ಹರಿದಾಗ ಉಂಟಾಗುವ ಘಟನೆಗಳು, ಅವರು ತಮ್ಮ ಕಟ್ಟುಪಾಡುಗಳಲ್ಲಿ ಪ್ರವೇಶಿಸಿದ್ದಕ್ಕೆ ಕುಡಿಯರಿಗಾದ ಬೇಸರ ಇವೆಲ್ಲ ಕಥೆಯ ಜಾಡನ್ನು ಬೇರೆ ಕಡೆ ತಿರುಗಿಸುತ್ತದೆ. ಆದರೆ ಇಡಿಯ ಕಥೆ ಹಬ್ಬಿದ ಅರಣ್ಯದಂತೆ ಮನುಷ್ಯ ಮತ್ತು ಪರಿಸರದ ಸಂಬಂಧವನ್ನು ವಿಸ್ತಾರವಾಗಿ ತೆರೆದಿಡುತ್ತದೆ.

ಒಂದು ಕಾದಂಬರಿಯನ್ನು ಹೀಗೆ ಪಟ್ಟಾಗಿ ಒಂದೇ ಸಲ ಕೂತು ಓದಿ ಯಾವ ಕಾಲವಾಗಿತ್ತೋ! ಮಧ್ಯಾಹ್ನ ಶುರು ಮಾಡಿದವ ಸಂಜೆಯವರೆಗೆ ಕುತೂಹಲ ಕಾಯ್ದುಕೊಂಡು ಓದಿಸಿಕೊಂಡದ್ದು ಕೃತಿಯ ಹೆಚ್ಚುಗಾರಿಕೆ. ಶಿವರಾಮ ಕಾರಂತರ ಒಳ್ಳೆಯ ಕಾದಂಬರಿಗಳ ಸಾಲಿಗೆ ನಿರ್ವಿವಾದವಾಗಿ ಸೇರಿಸಬಹುದಾದ ಕೃತಿ ಇದು. ಎಲ್ಲಕ್ಕಿಂತ ಮುಖ್ಯ ಇದರಲ್ಲಿ ಉಲ್ಲೇಖಿಸಲಾದ ವಿಟ್ಲ ನನ್ನೂರು! ಅದು ಓದಿನ ಖುಷಿಯ ಇನ್ನಷ್ಟು ಹೆಚ್ಚಿಸಿತು.

 

-ಪ್ರಶಾಂತ್ ಭಟ್

 

ಕೃಪೆ

https://pustakapremi.wordpress.com

 

ಪುಟಗಳು: 391

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !