ರಂಗಕರ್ಮಿ ಮೌನೇಶ್ ಬಡಿಗೇರ್ ಕನ್ನಡದ ಬಹು ಒಳ್ಳೆಯ ಕತೆಗಾರರೂ ಹೌದು. ಅವರ ಮೊದಲ ಕಥಾಸಂಕಲನವಾದ ಈ ಕೃತಿಗೆ ಛಂದ ಪುಸ್ತಕ ಬಹುಮಾನ ದೊರೆತಿದೆ. ಅದನ್ನು ಆಯ್ಕೆ ಮಾಡಿದ ನಾಡಿನ ಹಿರಿಯ ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿ ಅವರು ಅತ್ಯಂತ ಸಂಭ್ರಮದಿಂದ ಮತ್ತು ಸಂತೋಷದಿಂದ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಇದೇ ಕೃತಿಗಾಗಿ ಲೇಖಕರಿಗೆ ಅನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವೂ ಸಂದಿತು.
ಮೌನೇಶ ಬಡಿಗೇರ ಹುಟ್ಟಿದ್ದು ೧೯೮೪ರಲ್ಲಿ ತಾಯಿಯ ಊರಾದ ಹುಬ್ಬಳ್ಳಿಯಲ್ಲಾದರೂ, ಓದಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಓದಿದ್ದು ಎನ್ನುವುದಕ್ಕಿಂತ ಓದು ಬಿಟ್ಟದ್ದು ಎಂದರೇನೇ ಹೆಚ್ಚು ಸತ್ಯ. ಓದುತ್ತಿದ್ದ ಕಂಪ್ಯೂಟರ್ ಡಿಪ್ಲಮೋವನ್ನ ಅರ್ಧಕ್ಕೇ ಬಿಟ್ಟು ರಂಗಭೂಮಿಗೆ ಹಾರಿದ್ದು, ಈ ಎಡಬಿಡಂಗಿ ಸ್ಥಿತಿಯಲ್ಲೇ ಅಲ್ಪಸ್ವಲ್ಪ ಸಾಹಿತ್ಯದ ಓದು ಸಾಧ್ಯವಾದದ್ದು, ಓದಿದ್ದನ್ನ ಬರೆದದ್ದು, ಬರೆದದ್ದನ್ನ ಹರಿದದ್ದು! ನಂತರ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ರಂಗಭೂಮಿಯ ಅಭ್ಯಾಸ. ಕಲಿಕೆ ಮತ್ತು ಕಲಿಕೆಯ ಮುರಿಕೆ! ಬರೆದ ಅಲ್ಪವನ್ನೇ ಗುರುತಿಸಿಕೊಟ್ಟ ೨೦೧೧ರ ಟೋಟೋ ಪುರಸ್ಕಾರ, ಗಾರ್ಡನ್ ಸಿಟಿ ವಿಶ್ವಕನ್ನಡ ಚೇತನ ಪುರಸ್ಕಾರ. ಪ್ರಸ್ತುತ ಬೆಂಗಳೂರಿನಲ್ಲಿ ರಂಗಕರ್ಮ: ರಂಗಕಾರ‍್ಯಾಗಾರಗಳು, ರಂಗವಿಮರ್ಶೆಗಳು, ನಿರ್ದೇಶನ, ಅಭಿನಯ ತರಬೇತಿಗಳು, ಸಿನಿಮಾ, ಹೀಗೆ-ಖಾಯಂ ನಿರುದ್ಯೋಗಿ; ಆಗಾಗ ಉದ್ಯೋಗಿ. ಇಂತಹ ಕೋಲಾಹಲದಲ್ಲಿ ಇದು ಇನ್ನೊಂದು- ಮಾಯಾಕೋಲಾಹಲ! - ಮೊದಲ ಕಥಾಸಂಕಲನ.
ಪುಟಗಳು: 140
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !