ಮರಳಿ ಮಣ್ಣಿಗೆ

ಮರಳಿ ಮಣ್ಣಿಗೆ

Regular price
$9.99
Sale price
$9.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಒಂದು ಕಾದಂಬರಿ ಮನಸಲ್ಲಿ ಉಳಿದು ಬಿಡಲು ಎರಡು ಕಾರಣಗಳು. ಒಂದು ಕಥೆಯ ಹಂದರ ಎರಡು ಮನದಲ್ಲೇ ಉಳಿಯುವಂತಹ ಪಾತ್ರಗಳ ಗಡಸುತನ… ಪುಸ್ತಕ ಹೇಗಿರಬೇಕು ಎಂದು ಯಾರಾದರೂ ನನ್ನ ಕೇಳಿದರೆ ತಟಕ್ಕನೆ ನನ್ನಿಂದ ಬರುವ ಉತ್ತರ… ಓದಿಯಾದ ಮೇಲೆ ಕನಿಷ್ಟ ಕೆಲವು ದಿನಗಳವರೆಗೂ ನನ್ನ ಕಾಡುವಂತಿರಬೇಕು… ನನ್ನ ಮನಸ್ಸನ್ನು ಗೀರುವಂತಿರಬೇಕು… ಪಾತ್ರಗಳೊಂದಿಗೆ ನಾನೇ ಮಾತಿಗಿಳಿಯುವಂತಿರಬೇಕು. ಇಂತಹ ಅನುಭವ ಮೊದಲೂ ಬೇಕಾದಷ್ಟು ಬಾರಿ ಆಗಿದೆ. ಪುನಃ ಆದದ್ದು ಇತ್ತೀಚೆಗೆ ಓದಿದ “ಮರಳಿ ಮಣ್ಣಿಗೆ” ಕಾದಂಬರಿಯಿಂದ.

ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತವನ್ನಾಗಿಸಿದ ಕಾರಂತರು ಬರವಣಿಗೆ.. ಯಕ್ಷಗಾನ.. ರಾಜಕೀಯ ಚಿಂತನೆ.. ಹಾಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ ಬರವಣಿಗೆಯಲ್ಲಿ ಪರಿಸರ ಪ್ರೇಮದ ಜೊತೆಗೆ ಸಾಮಾಜಿಕ ಕಳಕಳಿ ಸಂದೇಶ ವ್ಯಕ್ತಪಡಿಸಿದ “ಮರಳಿ ಮಣ್ಣಿಗೆ” ಕಾದಂಬರಿ ಮಹತ್ತರವಾದುದು. ಬರೋಬ್ಬರಿ 415 ಪುಟಗಳ ವಿಸ್ತಾರ ಕಾದಂಬರಿ ಕರಾವಳಿ ಪ್ರದೇಶಗಳ ಕೋಡಿ, ಪಡುಮುನ್ನೂರು, ಮಂದರ್ತಿ, ಮಣೂರುಗಳ ಪ್ರಾದೇಶಿಕ ಭಾಷೆಯಲ್ಲಿ ಎಳೆಎಳೆಯಾಗಿ ಬಿಡಿಸಿ ಹರವಿದ ಕಥೆ.

ಕಡಲ ಅಬ್ಬರ.. ತೆಂಕುಗಾಳಿ.. ವಿಶಾಲ ಬಯಲಲ್ಲಿ ಮೈಚಾಚಿದ ಹಸಿರ ಹೊಲಗಳು.. ಅರಾಲು.. ಜಡಿಮಳೆ.. ಬೀಸುಗಾಳಿ.. ಕಡಲದಂಡೆ.. ಅಳುವೆ.. ಕೆರೆ.. ತೋಟ.. ಗದ್ದೆ.. ಅಗೇಡಿ.. ಹನೆಮರ.. ಇವೆಲ್ಲವೂ ಕಾರಂತರ ಮಾತಿನಲ್ಲಿ ಸುರುಳಿ ಬಿಚ್ಚಿ ಕಣ್ಮುಂದೆ ಹರಡಿ ಬಿಡುತ್ತವೆ.

ಐತಾಳ ವಂಶದ ರಾಮಐತಾಳರಿಂದ ಹಿಡಿದು ಮೊಮ್ಮಗ ರಾಮನವರೆಗೂ ಮೂರು ತಲೆಮಾರುಗಳಲ್ಲಿ ಒಂದು ಕುಟುಂಬದ ಸ್ಥಿತಿಗತಿಗಳನ್ನು, ಅನುಭವಿಸುವ ಬದುಕಿನ ಅಸದೃಶ ತಿರುವುಗಳಲ್ಲಿ ಬದುಕು ಚಲನಶೀಲವೆಂಬುದಕ್ಕೆ ಉದಾಹರಣೆಯಂತೆ ಬಾಳ್ವೆ ನಡೆಸಿದ ಜೀವಗಳ ಆಸೆಗಳು, ತರ್ಕಗಳು.. ಅದಕ್ಕಾಗಿ ಪಡುವ ತಾಕಲಾಟಗಳು… ಪಡೆದದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚಾಗಿ ಅನುಭವಿಸುವ ರೋಧನೆಯನ್ನು ಮೆಟ್ಟಿನಿಲ್ಲುವ ಈ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ನಿಜಕ್ಕೂ ಮೆಚ್ಚುವಂತದ್ದು. ಸ್ವಾತಂತ್ರ್ಯಪೂರ್ವದ ಕಥೆಯಾಗಿದ್ದರೂ ಕಾಲದ ಗೊಡವೆ ಅಡ್ಡಬರದಂತೆ ಓದಿಸಿಕೊಂಡು ಹೋಗಿ ನನ್ನ ಮನದಲ್ಲಿ ವಿಭಿನ್ನವಾದ ಸ್ಥಾನಪಡೆದುಕೊಂಡಿತು. “ಮರಳಿಮಣ್ಣಿಗೆ” ಶೀರ್ಷಿಕೆಯೇ ಸತ್ಯ.

ಬಡತನದ ಬಾಳ್ವೆಯ… ನಲಿವಿಗಿಂತ ನೋವಿನ ಕಥಾವಸ್ತುವಾದ ಮರಳಿಮಣ್ಣಿಗೆ ಕಾದಂಬರಿ ಕನ್ನಡ ಸಾಹಿತ್ಯಲೋಕಕ್ಕೆ ಮೆರುಗನ್ನು ನೀಡಿದೆ. ಕೆಲವೊಮ್ಮೆ ಅಳಿಸುವ, ಹಲವೊಮ್ಮೆ ಅಚ್ಚರಿಗೊಳಿಸುವ, ಮತ್ತೊಮ್ಮೆ ಗಾಢಮೌನಕ್ಕೆ ತಳ್ಳುತ್ತ ಸಾಗುವ ಕಥೆಯಲ್ಲಿ ಪಾರೋತಿ, ಸರಸೋತಿ, ನಾಗವೇಣಿಯರು ಒಬ್ಬರಿಗಿಂತ ಒಬ್ಬರು ಗಟ್ಟಿಗಿತ್ತಿಯರು. ಅಬ್ಬಾ…! ಎನಿಸುವ ಮಟ್ಟಿಗೆ ಧೈರ್ಯ ತೋರಿ ಬದುಕನ್ನು ಈಸಲು ಹೋರಾಡಿದವರು. ಪಾರೋತಿಗಿಂತ ಸರಸೋತಿ ಹೆಚ್ಚೆಂದುಕೊಂಡರೆ ಕಥೆಯ ಮಧ್ಯಭಾಗದಿಂದ ಬರುವ ನಾಗವೇಣಿ ಇಬ್ಬರನ್ನೂ ಮೀರಿಸಿ ನಿಂತು ಬಿಡುತ್ತಾಳೆ. ಮನೆಯ ಸಮೀಪದ ಕಡಲು ನಾಗವೇಣಿಯ ದುಃಖ, ನಿರಾಶೆ, ನೋವು. ಹತಾಷೆಗಳಿಗೆ ಸಾಕ್ಷಿಯಾಗಿ ನಿಂತು ಅವಳ ಮಡುಗಟ್ಟಿದ ಮೂಕವೇದನೆ ಕಡಲಲ್ಲಿ ಕರಗಿ ಕೊಚ್ಚಿ ಹೋಗಬಾರದೇ ಎಂದು ವ್ಯಥೆಪಡುವಷ್ಟರ ಮಟ್ಟಿಗೆ ನೊಂದುಬಿಡುತ್ತಾಳೆ. 

ಎಲ್ಲಿಂದ ಎಲ್ಲಿಗೆ ನಡೆದರೂ… ಯಾವ ಮೂಲೆಗೆ ಹೋದರೂ… ಹುಟ್ಟಿದ ಮಣ್ಣಿನ ಘಮಲು ಬೀರುವ ಸುಗಂಧವನ್ನರಸಿ ಬರುವ ಜೀವ ಐತಾಳರ ಮೊಮ್ಮಗ ರಾಮ. ಇವನಿಂದಾಗಿಯೇ ನಾಗವೇಣಿ ಸ್ವಲ್ಪಮಟ್ಟಿಗೆ ನೆಮ್ಮದಿ ಪಡೆದದ್ದು ಸಂತಸವೇ. ಇಲ್ಲಿನ ಪ್ರತಿ ಪಾತ್ರಗಳು ಒಂದೊಂದು ರೀತಿ… ಹೆಚ್ಚು ಕಡಿಮೆ ಒಂದೇ ಮನೋಧರ್ಮವಾದರೂ ಅನುಭವಿಸುವ ತಳಮಳಗಳು ಮನಸಿನ ಏಕತಾನತೆಗಳು ಸಹಜ ಜೀವನದ ವಿವಿಧ ರೂಪಗಳಲ್ಲಿ ಬಿಂಬಿತವಾಗಿದೆ. “ಬಾಳ್ವೆಯೇ ಬೆಳಕು… ಅದುವೇ ಬದುಕು” ಎನ್ನುವ ಸಿದ್ಧಾಂತ ಈ ಕಾದಂಬರಿಯಲ್ಲಿರುವ ಪಾರೋತಿ, ಸರಸೋತಿ, ನಾಗವೇಣಿಯರ ಸ್ತ್ರೀಪಾತ್ರಗಳಿಂದ ಮನದಲ್ಲಿ ಭದ್ರವಾಗಿ ನಿಲ್ಲುತ್ತದೆ…. ಹಿಂದೆ ಓದಿದ ಬೆಟ್ಟದ ಜೀವವೂ ಕಾಡಿತ್ತು. ಈಗ ಅದರ ಸ್ಥಾನವನ್ನು #ಮರಳಿಮಣ್ಣಿಗೆ ಪಡೆದಿದೆ….!

 

- ಸಪ್ನಾ ವಂಶಿ

 

ಕೃಪೆ

https://pustakapremi.wordpress.com/

 

ಪುಟಗಳು: 421

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !