ಮುಗಿದ ಯುದ್ಧ

ಮುಗಿದ ಯುದ್ಧ

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

ಕಳೆದ ಕೆಲವು ವರ್ಷಗಳಿಂದ, ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದ ಕೆಲಕೆಲವು ಲೇಖಕರು- ಕಾರಂತರ ಕೃತಿಗಳ ಕುರಿತೂ- ಅವುಗಳ ಪ್ರಸ್ತುತತೆಯ ಬಗ್ಗೆ ಹೆಚ್ಚು ಹೆಚ್ಚು ಚರ್ಚಿಸುತ್ತಿದ್ದಾರೆ ಎಂಬ ವಿಷಯವನ್ನು ನಾನು ಗಮನಿಸಿದ್ದೇನೆ. ಆದರೆ ನನಗೆ ಇಂಥ ವಾದಗಳೇ ಅಪ್ರಸುತ್ತವಾಗಿ ಕಾಣಿಸಿವೆ. ಯಾಕೆಂದರೆ, ಕಾಳಿದಾಸ, ಭಾಸ, ರನ್ನ, ಪಂಪ, ಮಹಾಭಾರತ, ರಾಮಾಯಣ ಮುಂತಾದ ಹಳೆಗಾಲದ ಕೃತಿಗಳನ್ನು ಕಾಲಬಾಧಿತ ಕೃತಿಗಳೆಂದು ಯಾರೂ ಮೂದಲಿಸುವಂತಿಲ್ಲ. ಅಂದಿನ ಭಾಷೆ, ಶೈಲಿ, ಕಾಲ- ನಮ್ಮದು ಅಲ್ಲವೇ ಅಲ್ಲ. ಹಾಗಿದ್ದರೂ, ಅವಕ್ಕೆ ಇಂದಿಗೂ ಮನ್ನಣೆ ಸಿಗುತ್ತಲೇ ಇದೆ. ಎಲ್ಲ ದೇಶಗಳಲ್ಲೂ ಅವರವರ ಭಾಷೆಗಳಲ್ಲಿ ರಚಿತವಾಗಿದ್ದ ಮಾರ್ಗಕೃತಿಗಳಿಗೆ ಇಂದಿಗೂ ಬೆಲೆ ಇದ್ದೇ ಇದೆ. ಮನುಷ್ಯ ಕುಲದ ನಾಗರಿಕತೆಯ ಇತಿಹಾಸ, ವೈಜ್ಞಾನಿಕ ಸಂಶೋಧನೆಗಳು ಹೇಗೆ ಸಾರ್ವಕಾಲಿಕ ಅಗತ್ಯದ ಪ್ರಸ್ತುತತೆಯನ್ನು ಗಳಿಸಿಕೊಂಡಿವೆಯೋ ಅದೇ ರೀತಿಯಲ್ಲಿ ಯಾವುದೇ ದೇಶದ ಭಾಷಾವಿಜ್ಞಾನ ಅಥವಾ ಸಾಹಿತ್ಯ ಕೃತಿಗಳು ಅಪ್ರಸ್ತುತ ಎಂಬ ಮಾತೇ ಅರ್ಥಹೀನ. ಕೃತಿಯ ಸತ್ವ ಮತ್ತು ಸತ್ವಹೀನತೆಗಳೇ ಪ್ರಸ್ತುತತೆ ಮತ್ತು ಅಪ್ರಸ್ತುತತೆಗಳಿಗೆ ಮಾನದಂಡವಾಗಬೇಕು ವಿನಃ ಬರೆದಿದ್ದ ಕಾಲ ಒಂದೇ ನಿರ್ಣಾಯಕವಾಗಬಾರದು.

ತಮ್ಮ ಪ್ರಖರವಾದ ಚಿಂತನೆಗಳಿಂದ, ದೃಷ್ಟಾರತನದ ಮುನ್ನೋಟಗಳಿಂದ ಶಿವರಾಮ ಕಾರಂತರು ತಮ್ಮ ಅನೇಕ ಕೃತಿಗಳಲ್ಲಿ, ತಾವು ಬರೆದಿದ್ದ ಕಾಲಕ್ಕಿಂತ, ಎಷ್ಟೋ ಎಷ್ಟೋ ದಶಕಗಳ ತನಕವೂ ಮುಂದಿದ್ದರು- ಎಂಬ ವಾಸ್ತವವನ್ನು ಗೃಹಿಸಲು ನಮಗೆ ಸಾಧ್ಯವಾದಲ್ಲಿ- ಕಾರಂತರ ಕೃತಿಗಳ ಬಗ್ಗೆ ಪ್ರಸ್ತುತ ಮತ್ತು ಅಪ್ರಸ್ತುತ- ಎಂಬ ವಾದ ಮಂಡಿಸುವುದು ಅರ್ಥಹೀನ ಎಂಬುದರ ಮನವರಿಕೆ ನಮಗಾಗುತ್ತದೆ.

1945ರಲ್ಲಿ ಮೊದಲ ಮುದ್ರಣ ಕಂಡಿದ್ದ ಕಾರಂತರ ಮುಗಿದ ಯುದ್ಧ ಕಾದಂಬರಿಯಲ್ಲಿ ಬಡಶಾಲಾ ಅಧ್ಯಾಪಕನ ಬವಣೆಗಳ ಹೃದಯವಿದ್ರಾವಕ ಚಿತ್ರಣವಿದೆ. ಊರಿಂದೂರಿಗೆ ವರ್ಗವಾಗಿ ತೆರಳುತ್ತಿದ್ದ ಕಾದಂಬರಿಯ ನಾಯಕ ಪಾತ್ರವಾಗಿರುವ ಅಚ್ಚುತನ ಕಷ್ಟಗಳು ಮುಗಿಯುವುದೆಂಬುದೇ ಇಲ್ಲ. ಅದಕ್ಕೆ ಸಮನಾಗಿ ಮಹಾಯುದ್ಧ ತೊಡಗುತ್ತದೆ. ಬೆಲೆಗಳು ಗಗನಕ್ಕೇರುತ್ತವೆ. ದಿನನಿತ್ಯದ ಅಗತ್ಯ ವಸ್ತುಗಳು ತುಟ್ಟಿಯಾಗುತ್ತವೆ. ಸಾಲ ಹೆಚ್ಚಿದಂತೆ ಕಷ್ಟ ಪರಂಪರೆಗಳು ಅವನ ಬೆನ್ನು ಹತ್ತುತ್ತಲೇ ಇರುತ್ತವೆ. ಆರೋಗ್ಯವೂ ಕೆಡುತ್ತದೆ. ಒಮ್ಮೆ ಯುದ್ಧ ಮುಗಿದರೆ ಸಾಕೆಂದು ಅವನಂತೆ ಎಲ್ಲ ಜನರೂ ಬಾಯಿಬಿಡುವಂತಾಗುತ್ತದೆ. ಒಂದು ದಿನ ಜಾಗತಿಕ ಮಹಾಯುದ್ಧ ಕೊನೆಗೊಳ್ಳುತ್ತದೆ. ಅದಕ್ಕೆ ಅದರೊಂದಿಗೆ ಅಚ್ಚುತನ ಬಾಳ್ವೆಯ ಯುದ್ಧವೂ ಕೊನೆಗೊಂಡು- ಅವನು ಅನಾರೋಗ್ಯದಿಂದ ಇನ್ನಿಲ್ಲವಾಗುತ್ತಾನೆ- ಎಂಬ ವ್ಯಂಗ್ಯದಿಂದ ಕಾದಂಬರಿ ಮುಕ್ತಾಯವಾಗುತ್ತದೆ.

ಬಡತನ, ರೋಗರುಜಿನಗಳಿಂದ ಬಳಲುತ್ತ ಬಾಳ್ವೆಯ ಹೋರಾಟದಲ್ಲಿ ಕಂಗೆಡುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಮ್ಮ ಸಾರ್ವಜನಿಕ ಜೀವನದ ನೇತಾರರ ಅನೈತಿಕ ವ್ಯವಹಾರಗಳಿಂದಾಗಿ ಜನಸಾಮಾನ್ಯರು ಆರ್ಥಿಕ ಮುಗ್ಗಟ್ಟಿನಿಂದಲೂ ಪರದಾಡುವಂತಾಗಿರುವುದು ನಮ್ಮ ಕಣ್ಮುಂದಿನ ವಾಸ್ತವ. ಮಹಾಯುದ್ಧಕ್ಕೆ ಕೊನೆ ಎಂಬುದಿದ್ದರೆ, ಇಂದಿನ ಜಾಗತಿಕ ಆರ್ಥಿಕ ಏರುಪೇರು ಚಿರಂಜೀವತೆಯನ್ನು ಗಳಿಸಿಕೊಂಡಿದೆ. ಇದರ ದಾರುಣ ಧಗೆಯನ್ನು ಅನುಭವಿಸದ ಜನರು ಭಾರತದಲ್ಲೂ ಕಡಿಮೆ ಸಂಖ್ಯೆಯಲ್ಲಿರುವುದರಿಂದ- ಸ್ವಾತಂತ್ರ್ಯ ಪೂರ್ವದಲ್ಲಿ ಕಾರಂತರು ಬರೆದಿದ್ದ- ಮುಗಿದ ಯುದ್ಧ ಕಾದಂಬರಿ ಇಂದಿಗೂ ಪ್ರಸ್ತುತ ಎಂಬುದರಲ್ಲಿ ಎರಡು ಮಾತಿಲ್ಲ.


- ಬಿ. ಮಾಲಿನಿ ಮಲ್ಯ

 

ಪುಟಗಳು: 330

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !