ಐಳ ಮತ್ತು ಮಾತಂಗಿ ಎನ್ನುವ ಒಂದು ಯುವ ಜೋಡಿ, ಪುರಿಯ ಜಗನ್ನಾಥ ಮಂದಿರದ ಸುತ್ತಲೂ ಒಂದು ಸಂಜೆ ಕಳೆಯುವ ಈ ಅಪರೂಪದ ಪ್ರೇಮಕಥನವು, ಕನ್ನಡಕ್ಕೆ ಹೊಸದೇ ಒಂದು ಬಗೆಯ ಕಾದಂಬರಿಯ ಜಗತ್ತನ್ನು ತೆರೆದು ಕೊಟ್ಟಿದೆ. ನಾಗರಾಜ ವಸ್ತಾರೆಯವರ ಅಪರೂಪದ ಕಾವ್ಯಮಯ ಭಾಷೆಯು ಈ ಕಾದಂಬರಿಯ ಉದ್ದಕ್ಕೂ ವಿಶೇಷ ಮೆರುಗನ್ನು ನೀಡಿದೆ.
ಕವಿ, ಕತೆಗಾರ, ಪ್ರಬಂಧಕಾರ, ಆರ್ಕಿಟೆಕ್ಟ್ ನಾಗರಾಜ ವಸ್ತಾರೆ ‘ಹಕೂನ ಮಟಾಟ’, ‘ನಿರವಯವ’, ‘90 ಡಿಗ್ರಿ’, ‘180 ಡಿಗ್ರಿ’ ಎಂಬ ಕಥಾಸಂಕಲನಗಳನ್ನೂ, ‘ಮಡಿಲು’, ‘ಅರ್ಬನ್ ಪ್ಯಾಂಥರ್’ ಎಂಬ ನೀಳ್ಗತೆಗಳನ್ನೂ, ‘ಬಣ್ಣದ ದಂಗೆ’ ಎಂಬ ಕಾದಂಬರಿಯನ್ನೂ ಪ್ರಕಟಿಸಿದ್ದಾರೆ. ‘ಹಳೆಮನೆ ಕತೆ’, ‘ಕಮಾನು- ಕಟ್ಟುಕತೆ ಕಟ್ಟುಪಾಡು’ ಅವರ ಅಂಕಣ ಬರಹಗಳ ಸಂಕಲನವಾದರೆ, ‘ಸಾಂಚಿಮುದ್ರೆ’ ಮತ್ತು ‘ಪಟ್ಟಣ ಪುರಾಣ’ ಅವರ ಪ್ರಬಂಧ-ಸಂಗ್ರಹಗಳು. ‘ವಸ್ತಾರೆ ಪದ್ಯಗಳು’ ಮತ್ತು ‘ವಸ್ತಾರೆ ಇನ್ನೂ 75’ ಕವನ ಸಂಕಲನಗಳು. 2018ರ ಜನವರಿಯಲ್ಲಿ ವಸ್ತಾರೆಯವರ 8 ಪುಸ್ತಕಗಳು ಒಟ್ಟೊಟ್ಟಿಗೆ ಬೆಳಕು ಕಂಡಿವೆ. ಈವರೆಗೆ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಶಿವಮೊಗ್ಗ ಕನ್ನಡಸಂಘದ ‘ಡಾ. ಯು ಆರ್ ಅನಂತಮೂರ್ತಿ ಪ್ರಶಸ್ತಿ’, ಪುತಿನ ಪ್ರತಿಷ್ಥಾನದ ‘ಕಾವ್ಯ ಪುರಸ್ಕಾರ’, ಸಾಹಿತ್ಯ ಅಕೆಡೆಮಿಯ ‘ಪುಸ್ತಕ ಬಹುಮಾನ’ಗಳನ್ನು ಪಡೆದಿದ್ದಾರೆ.
ಪುಟಗಳು : 316