ಒಮ್ಮೊಮ್ಮೆ ಕ್ಷುಲ್ಲಕವೆಂಬಂತೆ ತೋರುವ ಘಟನೆಗಳಿಂದ ಪ್ರಾರಂಭವಾದ ಸರಪಳಿ ಪ್ರಕ್ರಿಯೆ ಹೇಗೆ ಒಂದಕ್ಕೊಂದು ಎಡೆಮಾಡಿ ಮಾನವ ಕುಲವನ್ನು ರೂಪಿಸಿದೆ ಎಂದು ಅವಲೋಕಿಸಿದರೆ ಆಶ್ಚರ್ಯವಾಗುತ್ತದೆ. ಹೀಗಲ್ಲದಿದ್ದರೆ ಈ ಸರಣಿ ಘಟನೆಗಳನ್ನು ಹೇಗೆಂದು ಅರ್ಥೈಸುವುದು?
ಒಂದು ಸೇಬು ಒಬ್ಬನ ತಲೆಯ ಮೇಲೆ ಬೀಳುತ್ತದೆ, ಗುರುತ್ವಾಕರ್ಷಣೆಯ ನಿಯಮಗಳು ನಿರ್ಮಿಸಲ್ಪಡುತ್ತವೆ.
ಒಬ್ಬ ಮನುಷ್ಯ ರೈಲಿನಿಂದ ಹೊರಗೆಸೆಯಲ್ಪಡುತ್ತಾನೆ, ಒಂದು ದೇಶ ಸ್ವತಂತ್ರವಾಗುತ್ತದೆ.
ಒಂದು ಬುಗುರಿ ಹೇಲುಗುಂಡಿಯೊಳಗೆ ಬೀಳುತ್ತದೆ, ಒಂದೊಳ್ಳೆ ಕತೆಯಾಗುತ್ತದೆ.
ನಾನೊಂದು ಹೇಳುತ್ತೇನೆ: ವಿಸ್ಕಿ ನೀರಿಗೆ ಬಿತ್ತು, ಬೆಂಗಳೂರು ಉದ್ವಿಗ್ನಗೊಡಿತು, ಬದಲಾಗಲೇಬೇಕಾದ ಅನಿವಾರ್ಯತೆ ಬಂದೊದಗಿತು!
ನನಗೆ ಗೊತ್ತು, ಏ ತೆಗೀರಿ, ಏನು ಹೇಳುತ್ತಿದ್ದೀರಿ, ದಿನಾಲೂ ಜಗತ್ತಿನಾದ್ಯಂತ ವಿಸ್ಕಿಗೆ ನೀರು ಬೀಳ್ತಾನೇ ಇರುತ್ತೆ, ಇದ್ಯಾವ ಪ್ರಸಂಗ ಬಿಡಿ ಸ್ವಾಮಿ, ಎನ್ನುತ್ತೀರಿ.
ವಿಸ್ಕಿಗೆ ನೀರು ಬೀಳುವುದಕ್ಕೂ, ವಿಸ್ಕಿ ನೀರಿಗೆ ಬೀಳುವುದಕ್ಕೂ ಬಹಳ ವ್ಯತ್ಯಾಸವಿದೆ.
ಅದು ಏನೇನಕ್ಕೆಲ್ಲಾ ಎಡೆಮಾಡಿತು ಎಂದು ವಿವರಿಸಿದರೆ ನೀವು ಆಶ್ಚರ್ಯಪಡುವುದರಲ್ಲಿ ಸಂದೇಹವೇ ಇಲ್ಲ.
ಬರೀ ವಿಸ್ಕಿ ಎಂದರೆ ಅರ್ಧಂಬರ್ಧ ಹೇಳಿದಂತಾಗುತ್ತದೆ, ನಿಮಗೆ ಗೊಂದಲವಾಗುತ್ತದೆ.
ವಿಸ್ಕಿ ಎಂಬ ರೇಷಿಮೆಯಂತಹ ಚಿನ್ನದ ಬಣ್ಣದ ಕೂದಲುಳ್ಳ ಗೋಲ್ಡನ್ ರಿಟ್ರೀವರ್ ನಾಯಿಯು ಅಪಘಾತದಲ್ಲಿ ಪಾಲ್ಗೊಂಡು ಬೆಂಗಳೂರಿನ ನಯಾಗರ ಎಂದೇ ಕುಖ್ಯಾತವಾಗಿರುವ ಬೈರಮಂಗಲ ಕೆರೆಗೆ ಬಿತ್ತು ಎಂದರೆ ನಿಮಗೆ ಗೊಂದಲ ಸ್ವಲ್ಪ ಕಡಿಮೆಯಾಗಬಹುದು.
ಹೀಗೆ ಪ್ರಾರಂಭವಾದ ಈ ಕತೆಯು ನಿಮ್ಮನ್ನು ಜೀವಜಾಲದ ಮೂಲಕ್ಕೇ ಕರೆದೊಯ್ದು ಬುಡದಲ್ಲಿ ಅಲ್ಲಾಡಿಸದಿದ್ದರೆ ಎಲ್ಲೋ ಏನೋ ಐಬಿದೆ ಎಂದರ್ಥ!
- ಕೆ.ಆರ್.ಚಂದ್ರಶೇಖರ
ಪುಟಗಳು: 140
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !