ನುಡಿವಣಿಗಳು (ಇಬುಕ್)

ನುಡಿವಣಿಗಳು (ಇಬುಕ್)

Regular price
$8.99
Sale price
$8.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

“ಕಾಲೂರ ಚೆಲುವೆ” ಎಂಬ ಅಚ್ಚಗನ್ನಡ ಕಾವ್ಯದಿಂದ ಕನ್ನಡಿಗರಿಗೆ ಪರಿಚಿತರಾಗಿರುವ ಶ್ರೀ ಕೊಳಂಬೆ ಪುಟ್ಟಣ್ಣ ಗೌಡರು ಈಗ “ನುಡಿವಣಿಗಳು” ಎಂಬ ಮತ್ತೊಂದು ಕೃತಿಯನ್ನು ರಚಿಸಿದ್ದಾರೆ. ಇದು ಸಾವಿರ ಮುಕ್ತಕಗಳ ಸಂಕಲನ. ಲೇಖಕರು ಇಲ್ಲಿಯೂ ಅಚ್ಚಗನ್ನಡ ಶೈಲಿಯನ್ನೇ ಬಳಸಬೇಕೆಂಬ ತಮ್ಮ ಧೀರವ್ರತವನ್ನು ಪರಿಪಾಲಿಸಿದ್ದಾರೆ. ಇದರಿಂದ, ಸಂಸ್ಕೃತ - ಕನ್ನಡವನ್ನೇ ಮಾತು ಬರೆಹಗಳಿಗೆ ಬಳಸುತ್ತಿರುವ ತಮ್ಮ ಭಾಷಾ ಬಂಧುಗಳಿಗೆ ಕಷ್ಟವಾಗುತ್ತದೆ ಎಂಬ ಅರಿವು ಲೇಖಕರಿಗೆ ಇದೆ. ಆದ್ದರಿಂದಲೇ ಅವರು ಪ್ರತಿಯೊಂದು ಅಚ್ಚಗನ್ನಡ ಮುಕ್ತಕಕ್ಕೂ ಸಂಸ್ಕೃತ-ಕನ್ನಡದಲ್ಲಿ ಗದ್ಯವ್ಯಾಖ್ಯಾನವನ್ನು ನೀಡಿದ್ದಾರೆ.

ಶ್ರೀಮಾನ್ ಪುಟ್ಟಣ್ಣ ಗೌಡರದು ಕವಿಚೇತನ. ಉತ್ತಮ ಅಧ್ಯಾಪಕರಾಗಿ ಅವರು ತಮ್ಮ ಜೀವಮಾನವನ್ನೆಲ್ಲ ಸೌಂದರ್ಯೋಪಾಸನ, ಚಿಂತನ, ಮಂಥನ, ಬೋಧನಗಳಲ್ಲಿ ಕಳೆದಿದ್ದಾರೆ. ಸೃಷ್ಟಿಸೌಂದರ್ಯದ ವಿವಿಧ ಮುಖಗಳು, ಭಾವಗಳು, ಅವುಗಳ ಹಿಂದೆ ಇರುವ ಚಿತ್‌ಶಕ್ತಿಯ ಸ್ವರೂಪ ಇವುಗಳನ್ನು ಕುರಿತು ಶ್ರೀಯುತರು ಮನಸ್ಸಿನಲ್ಲಿಯೇ ಮೆಲುಕುಹಾಕಿದ್ದಾರೆ. ಬದುಕಿನ ನೂರಾರು ಜಟಿಲತೆಗಳು, ಮರ್ಮಗಳು ಇವರ ಆಳವಾದ ಚಿಂತನೆಗೆ ವಸ್ತುಗಳಾಗಿವೆ. ಅನಂತರ ಅವು ಹೃದಯಂಗಮವಾದ ಮುಕ್ತಕಗಳಾಗಿ ಮೂಡಿವೆ.

ದೇವತೆಗಳಿಗೂ ನಮಗೂ ಇರುವ ವ್ಯತ್ಯಾಸವನ್ನೂ ಆ ವ್ಯತ್ಯಾಸದಿಂದಲೇ ನಮ್ಮ ಬಾಳು ಆಕರ್ಷಣೀಯವಾಗಿದೆ ಎಂಬುದನ್ನೂ ಚಿತ್ರಿಸಿರುವ ಮುಕ್ತಕ ಇದು:

ಒಮ್ಮೆಯುಂಡರೆ ಸಾಕು ಹಸಿವಿಲ್ಲ! ಸಾವಿಲ್ಲ!
ಬರ್ದಿಲರುಣಿಸು ಸಲ್ಲದು ನಮಗಂತೆ
ತಿಂದು ಕರಗುತಿರ್ಪ ಹಸಿವು ಚಿಗುರುತಿರ್ಪ
ತಿನಿಸು, ನಾಲಗೆ, ಸಾವು ನಮಗೊಪ್ಪಿತಂತೆ

ಇದಕ್ಕೆ ವ್ಯಾಖ್ಯಾನವೇ ಬೇಕಿಲ್ಲ. ಬರ್ದಿಲರು ಎಂದರೆ ದೇವತೆಗಳು ಎಂಬುದು ನಮಗೆ ಅರ್ಥವಾದರೆ ಸಾಕು. ಆದರೆ ವ್ಯಾಖ್ಯಾನವನ್ನು ಬಯಸುವ, ವ್ಯಾಖ್ಯಾನದಿಂದ ದೀಪ್ತವಾಗುವ ಮುಕ್ತಕಗಳೇ ಹೆಚ್ಚು. ಅಂತಹವುಗಳಲ್ಲಿ ಒಂದು ಆಳುವ ಜವಾಬ್ದಾರಿಯನ್ನು ಹೊತ್ತವರು ತುಂಬ ಎಚ್ಚರದಿಂದಿರಬೇಕು ಎಂಬುದನ್ನು ಸೂಚಿಸುವ ಮುಕ್ತಕ :

ಬೆಳ್ಳಿ ಬೆಟ್ಟವ ಕಾಯೆ ಮುಕ್ಕಣ್ಣನಿಹನಂತೆ
ಹೊಂಬೆಟ್ಟ ಕಾವನಾರ್ ಮೈಗಣ್ಣನಂತೆ
ಮೇಲ್ನೆಲಮಂ ಕಾಯೆ ಬಿಡುಗಣ್ಣರಿಹರಂತೆ
ಗುಟ್ಟೇನು? ಆಳ್ಕೆಗೆಚ್ಚರ ಬೇಳ್ಪುದಂತೆ

ಇದಕ್ಕೆ ಕವಿ ನೀಡಿರುವ ವ್ಯಾಖ್ಯಾನ: “ಮೂರು ಕಣ್ಣುಳ್ಳ ಶಿವನು ಬೆಳ್ಳಿಬೆಟ್ಟದ ಕಾವಲಂತೆ! ಬಂಗಾರದ ಬೆಟ್ಟವನ್ನು ಮೈಯೆಲ್ಲ ಕಣ್ಣಾಗಿರುವ ಇಂದ್ರನು ಕಾಯುವನಂತೆ. ಸ್ವರ್ಗದ ವಿಶೇಷ ವಸ್ತುಗಳನ್ನು ಕಾಪಾಡಲು ಕಣ್ಮುಚ್ಚದ ದೇವತೆಗಳೆ ಬೇಕಾದರಂತೆ! ಇವೆಲ್ಲವುಗಳ ಗುಟ್ಟೇನು? ಯಾವಾಗಲೂ ಆಳುವವರಿಗೆ ಹೆಚ್ಚಿನ ಎಚ್ಚರಬೇಕಂತೆ.”

ನಮ್ಮ ನಾಡಿನ ಬಗ್ಗೆ ಇಲ್ಲಿಯ ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಅಪಾರ ವಾದ ಸಂಪತ್ತು ಇವುಗಳ ಬಗ್ಗೆ ಕವಿಗೆ ತುಂಬ ಹೆಮ್ಮೆ. ಅಲ್ಲದೆ ಅವೆಲ್ಲವನ್ನೂ ರಕ್ಷಿಸಬೇಕು ಎಂಬ ಕಳಕಳಿ. ಅದನ್ನು ರಕ್ಷಿಸುವುದಕ್ಕೆ ಅಗತ್ಯವಾದವು ಯಾವುವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯವಾಗುವಂತೆ ಸೂತ್ರರೂಪದಲ್ಲಿ ಹೀಗೆ ಹೇಳಿದ್ದಾರೆ:

ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆ
ಹೊತ್ತೆಲ್ಲರೆಚ್ಚರದಿಂ ಕಾವುದಂತೆ
ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ
ಹೊಳೆ ಬೆಟ್ಟ ಕಡಲುಗಳ್ ತಡೆಯಲ್ಲವಂತೆ

ವ್ಯಾಖ್ಯಾನ: “ದೇಶವೆಂದರೆ ಹುಗಿದಿಟ್ಟ ಜೀವನದ ನಿಧಿಯಂತೆ. ಅದನ್ನು ಎಚ್ಚರದಿಂದ ರಕ್ಷಿಸಬೇಕು. ಹಗೆಗಳಿಗೆ ನದಿ, ಗಿರಿ, ಸಮುದ್ರಗಳು ತಡೆಗಳಲ್ಲ; ದೇಶದ ಜ್ಞಾನ, ಆಳುವಿಕೆ, ಉದ್ಯೋಗಗಳೇ ತಡೆಗಳು.”

 

ಪುಟಗಳು: 361

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !