ಇತರ ಎಲ್ಲ ಜೀವಿಗಳಂತೆಯೇ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದ ಮಾನವ ಆಧುನಿಕತೆಯ ಸುಳಿಗೆ ಸಿಲುಕಿ ತನ್ನ ಮೂಲಾಶ್ರಯವಾದ ಪ್ರಕೃತಿಯಿಂದ ದೂರಸರಿದು ಹಲವು ದಶಕಗಳೇ ಉರುಳಿವೆ. ವರ್ತಮಾನದ ವೈಜ್ಞಾನಿಕ-ತಾಂತ್ರಿಕ ಸೌಲಭ್ಯಗಳನ್ನು ಮುಂದಿಟ್ಟುಕೊಂಡು ತನ್ನ ಸಂಶೋಧನೆಗಳಿಗೆ ತಾನೇ ಬೆನ್ನುತಟ್ಟಿಕೊಳ್ಳುತ್ತಿರುವ ಮನುಷ್ಯನಿಗೆ ಇವೆಲ್ಲ ಸ್ವನಿರ್ಮಿತ ವ್ಯವಸ್ಥೆಗಳು ಸುಲಭಸೌಖ್ಯವನ್ನೂ ಶಾಶ್ವತ ಸಮಸ್ಯೆಗಳನ್ನೂ ಏಕಕಾಲಕ್ಕೆ ಅನುಗ್ರಹಿಸುತ್ತಿರುವುದು ಸ್ವಯಂವೇದ್ಯ. ಈ ಸೌಲಭ್ಯ-ಕಂಟಕಗಳೆಲ್ಲದರ ಮುಂದಿನ ಫಲಾನುಭವಿಗಳಾದ ಎಳೆಯ ಮಕ್ಕಳು ಹೊಸ ಬದುಕಿನ ಸೊಗಸಿಗೂ, ತಮ್ಮಿಂದ ದೂರವೇ ಉಳಿದಿರುವ ನಿಸರ್ಗದ ಅಚ್ಚರಿಗಳಿಗೂ ತೋರುವ ಪ್ರತಿಕ್ರಿಯೆಗಳೇ "ಪುಟ್ಟ-ಪುಟ್ಟಿಯ ಪರಿಸರ ಪಾಠಗಳು" ಎಂಬ ಕಿರುಪುಸ್ತಕದ ಅಧ್ಯಾಯಗಳಾಗಿ ಮೂಡಿವೆ.ಎಳೆಯ ಮಕ್ಕಳನ್ನು ಓದುಗರಾಗಿ ಎದುರಿಗೆ ಕೂರಿಸಿಕೊಂಡು ಶ್ರೀನಿಧಿ ಬರೆದಿರುವ ಈ ಕಿರುಹೊತ್ತಿಗೆಯಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಹಂಬಲದಷ್ಟೇ ಪ್ರಾಕೃತಿಕ ಸಂಪರ್ಕದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾಳಜಿಯೂ ಇದೆ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.