ಥ್ಯಾಂಕ್ಯೂ ಟೀಚರ್

ಥ್ಯಾಂಕ್ಯೂ ಟೀಚರ್

Regular price
$5.99
Sale price
$5.99
Regular price
Sold out
Unit price
per 
Shipping does not apply

ಪ್ರಕಾಶಕರು: ಸಾವಣ್ಣ

Publisher: Sawanna

 

ಇಡೀ ಜಗತ್ತೇ ಅತ್ಯಂತ ವೇಗದಿಂದ ಬದಲಾಗುತ್ತಿದೆ. ಆ ವೇಗವನ್ನು ಅಳೆಯುವುದು ಮತ್ತು ಅದರ ವೇಗಕ್ಕೆ ನಮ್ಮನ್ನು ಹೊಂದಿಸಿಕೊಳ್ಳುವುದು ಅತ್ಯಂತ ಪ್ರಯಾಸದ ಕಾರ್ಯ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಕಲ್ಪನಾತೀತವಾದದ್ದು. ಇಂದು ಮಹತ್ವದ್ದೆಂದು ಪರಿಗಣಿಸಲ್ಪಡುವ ಪಠ್ಯಕ್ರಮಗಳು ಹತ್ತು ವರ್ಷಗಳ ಹಿಂದೆ ಗೊತ್ತೇ ಇರಲಿಲ್ಲ. ಅಂತೆಯೇ ಇಂದು ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮುಂದೆ ಯಾವುದನ್ನು ಆಯ್ಕೆ ಮಾಡಿಕೊಂಡಾರು ಅಥವಾ ಯಾವ ಉದ್ಯೋಗವನ್ನು ತೆಗೆದುಕೊಂಡಾರು ಎಂಬುದನ್ನು ಊಹಿಸುವುದೂ ಸಾಧ್ಯವಿಲ್ಲ. ಈಗ ಶಿಕ್ಷಣವೆಂಬುದು ಅನಿಶ್ಚಿತವಾದ ಭವಿಷ್ಯಕ್ಕೆ ನಿಶ್ಚಿತವಾದ ಕಾರ್ಯಕ್ರಮವಾಗಿದೆ. ಈ ಸಂದರ್ಭದಲ್ಲಿ ಯಾರೂ ತಮ್ಮನ್ನು ಶಿಕ್ಷಣ ತಜ್ಞರು ಎಂದು ಭಾವಿಸಲಾರರು. ಯಾಕೆಂದರೆ ಮುಂದಿನ ದಶಕವನ್ನು ಬಿಡಿ, ಮುಂದೆ ಎರಡು ವರ್ಷಗಳಲ್ಲಿ ಏನಾಗಬಹುದು ಎನ್ನುವುದು ಯಾರಿಗೂ ತಿಳಿದಿಲ್ಲ. ಇಂಥ ಸಂಕ್ರಮಣ ಕಾಲದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ವರ್ಗದವರಿಗೆ, ಪ್ರಾಂಶುಪಾಲರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಮಾರ್ಗದರ್ಶನ ಬೇಕಾಗಿದೆ. ಇದನ್ನು ಗುರುಗಳು ಮಾಡಬಹುದು, ಗ್ರಂಥಗಳು ಮಾಡಬಹುದು. ಆಂಗ್ಲಭಾಷೆಯಲ್ಲಿ ಇಂಥ ಹಲವಾರು ಪುಸ್ತಕಗಳಿವೆ, ವಿಡಿಯೋಗಳಿವೆ, ಮುದ್ರಿತ ಭಾಷಣಗಳಿವೆ. ಆದರೆ ನಮ್ಮ ಕನ್ನಡದಲ್ಲಿ ಈ ತರಹದ ಪುಸ್ತಕಗಳು ತುಂಬ ವಿರಳ. ಕೆಲವೊಂದು ಇದ್ದರೂ ಎಲ್ಲ ವಿಷಯಗಳನ್ನು ಒಂದೆಡೆಗೇ ಇರುಕಿಸಿ ಹೆಚ್ಚು ವಿಸ್ತಾರವಾಗಿ ತಿಳಿಸುವಂತಿಲ್ಲ.

ಈ ಸಮಯದಲ್ಲಿ ಡಾ. ವಿರೂಪಾಕ್ಷ ದೇವರಮನೆಯವರು ರಚಿಸಿದ, “ಥ್ಯಾಂಕ್ಯೂ ಟೀಚರ್‌... ಗುರುವೆ ನಿಮ್ಮನೆಂತು ಮರೆವೆ....” ಗ್ರಂಥ ತುಂಬ ಪ್ರಯೋಜನಕಾರಿಯಾಗಿದೆ, ಶಿಕ್ಷಕರಿಗೆ ಸುಂದರವಾದ ಕೈಪಿಡಿಯಾಗಿದೆ.

ಶಿಕ್ಷಕರದು ತುಂಬ ಸಂಕೀರ್ಣವಾದ ಕಾರ್ಯ. ಬಹುಪಾಲು ಶಿಕ್ಷಕರು ಬರುವುದು ಮಧ್ಯಮ ಅಥವಾ ಕೆಳಮಧ್ಯಮ ಕುಟುಂಬಗಳಿಂದ. ಕೆಲವರು ತಮ್ಮ ಜ್ಞಾನವನ್ನು ಹಂಚಬೇಕೆಂಬ ಉತ್ಕಟತೆಯಿಂದ ಬಂದಿದ್ದರೆ ಹೆಚ್ಚಿನಪಾಲು ಜನರು ಬದುಕಿನ ಅನಿವಾರ್ಯತೆಗಾಗಿ ಶಿಕ್ಷಕರಾದವರು. ಅವರಿಗದೊಂದು ಉದ್ಯೋಗ. ಅದರಲ್ಲೂ ನಮ್ಮ ದೇಶದಲ್ಲಿ ಶಿಕ್ಷಕರ ತರಬೇತಿಗಳು, ಶಿಕ್ಷಕರನ್ನು ತಯಾರುಮಾಡುವ ಕಾಲೇಜುಗಳ ಗುಣಮಟ್ಟ ತುಂಬ ಕಳಪೆಯಾದದ್ದು. ಅವೆಲ್ಲ ಕಾಗದದ ಪ್ರಶಸ್ತಿ ಪತ್ರಗಳನ್ನು ಕೊಡುತ್ತಿವೆಯೇ ವಿನಃ ಅವರಿಗೆ ವಿಷಯದ ಪ್ರೀತಿ, ಕಲಿಸುವ ಸಾಮರ್ಥ್ಯವನ್ನು ನೀಡುತ್ತಿಲ್ಲ. ಕೆಲವೇ ಕೆಲವು ಸ್ವಯಂಪ್ರೇರಿತರಾದ ಶಿಕ್ಷಕರು ಪರಿಶ್ರಮದಿಂದ, ಮಕ್ಕಳ ಮೇಲಿನ ಪ್ರೀತಿಯಿಂದ ತಮ್ಮನ್ನು ತಾವೇ ಪ್ರಚೋದಿಸಿಕೊಂಡು ಕಾರ್ಯತತ್ಪರರಾಗಿದ್ದಾರೆ. ಆದರೆ ಅವರ ಸಂಖ್ಯೆ ತುಂಬ ಸಣ್ಣದು. ಉಳಿದವರಲ್ಲಿ ಕೆಲವರು ತಮಗೆ ಕೊಟ್ಟ ಪಠ್ಯಕ್ರಮವನ್ನು ನಿಷ್ಠೆಯಿಂದ ಮಕ್ಕಳಿಗೆ ತಲುಪಿಸುತ್ತಾರೆ. ಮತ್ತೆ ಕೆಲವರಿಗೆ ಶಿಕ್ಷಕರ ಕೆಲಸ ಹೊಟ್ಟೆ ಹೊರೆಯುವ ನೌಕರಿ. ಕಲಿಸುವುದು ಅನಿವಾರ್ಯವಾದ ಆದರೆ ಪ್ರಿಯವಲ್ಲದ ಕಾರ್ಯ. ನಾವು ಸಾಮಾನ್ಯವಾಗಿ ಎರಡು ತರಹದ ಶಿಕ್ಷಕರ ಬಗ್ಗೆ ಮಾತನಾಡುತ್ತೇವೆ. Teacher by choice and teacher by chance. ಅಂದರೆ ತಾವಾಗಿಯೇ ಅಪೇಕ್ಷೆಪಟ್ಟು ಶಿಕ್ಷಕರಾದವರು ಮತ್ತು ಆಕಸ್ಮಿಕವಾಗಿ, ಅನಿವಾರ್ಯವಾಗಿ ಶಿಕ್ಷಕರಾದವರು. ನಾವು ಅಪೇಕ್ಷೆ ಪಟ್ಟ ಕೆಲಸ ಸಿಕ್ಕದೆ ಹೋಗಿರಬಹುದು. ಆದರೆ ಸಿಕ್ಕಿದ್ದನ್ನು ಪ್ರೀತಿಸುವುದು ನಮ್ಮ ಕೈಯಲ್ಲಿದೆ. ಇಷ್ಟಪಟ್ಟೋ, ಕಷ್ಟಪಟ್ಟೋ ಶಿಕ್ಷಕರಾದವರು ಆ ಕರ್ತವ್ಯದ ಸೂಕ್ಷ್ಮತೆಗಳನ್ನು ಅರಿಯಬೇಕಾಗುತ್ತದೆ. ಆಗ ವಿಷಯದ ಬಗ್ಗೆ ಇರುವ ಜ್ಞಾನ ಮಾತ್ರ ಸಾಲದೆ ಅನೇಕ ಬೇರೆ ಜವಾಬ್ದಾರಿಗಳನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅದಕ್ಕೆ ಪಠ್ಯಕ್ರಮವಲ್ಲದೆ ಹಲವಾರು ಕ್ಷೇತ್ರಗಳಲ್ಲಿ ತಿಳಿವಳಿಕೆ ಅವಶ್ಯ. ಆ ವಿಷಯಗಳಲ್ಲಿ ಮುಖ್ಯವಾದವುಗಳನ್ನು ತಿಳಿಸುವ, ಅದರಲ್ಲೂ ಕನ್ನಡದಲ್ಲಿ ತಿಳಿಸುವ, ಈ ಗ್ರಂಥದಂತಹ ಕೈಪಿಡಿ ತುಂಬ ಅವಶ್ಯವಾಗಿತ್ತು.

 

-ಗುರುರಾಜ ಕರಜಗಿ

 

 

ಪುಟಗಳು : 90

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !