ಬರೆದವರು : ರವಿ ಬೆಳಗೆರೆ
ಓದಿದವರು : ರವಿ - ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 9 ಘಂಟೆ 02 ನಿಮಿಷ
ರೌಡಿಸಂ, ಕ್ರೌರ್ಯ, ಡಾನ್ ವೃತ್ತಿ, ಭೂಗತ ಲೋಕ, ಅವರ ಫ್ಯಾಮಿಲಿ, ಅವರ ಒಪ್ಪಂದಗಳು, ಫೀಲ್ಡಿಂಗ್, ಸ್ಕೆಚ್, ಡಬಲ್ ಕ್ರಾಸಿಂಗ್ ಇವೆಲ್ಲವನ್ನು ಫಾಂಟಸೈಸ್ ಮಾಡಿ ಬರೆಯುವುದು ಸುಲಭವಲ್ಲ. ಚೂರು ಹೆಚ್ಚು ಕಡಿಮೆಯಾದರೂ ಓದುಗರಲ್ಲಿ ಒಂದು ರೀತಿಯ ಆಭಾಸ ಉಂಟಾಗಿಬಿಡುತ್ತದೆ. ಆದರೆ, ಈ ಪುಸ್ತಕದಲ್ಲಿ ಭೂಗತ ಲೋಕದ ಅಷ್ಟು ಏರಿಳಿತಗಳ ಹದವಾದ ಮಿಶ್ರಣವಿದೆ. ರವಿ ಬೆಳಗೆರೆರವರ ಅದ್ಭುತ ಬರಹ ಶೈಲಿ, ಗಟ್ಟಿಯಾದ ಕಥೆ, ಕುತೂಹಲಕಾರಿ ವಿಸ್ತರಣೆ ಈ ಪುಸ್ತಕದ ಓಘಕ್ಕೆ ಪುಷ್ಟಿ ನೀಡಿದೆ. ಅಕ್ಷರ ಮಾಂತ್ರಿಕನ ಮೋಡಿ ತುಂಬಿದ ೩೪೭ ಪುಟಗಳ ಕಾದಂಬರಿಯು ಓದುಗನಿಗೆ ಹಿತವಾದ ಕ್ರೌರ್ಯದ ಅನುಭವ ನೀಡುತ್ತದೆ.
ಪುಸ್ತಕದ ಬೆನ್ನುಡಿಯಲ್ಲಿ ಹೀಗೊಂದು ವಾಕ್ಯವಿದೆ - "ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ" ಅಂತಾ. ಅದೊಂದು ವಾಕ್ಯ ಸಾಕು ಪುಸ್ತಕದ ಆಳಾಂತರಾಳ ತಿಳಿಯಲು!!!
ಕಾದಂಬರಿಯ ವಸ್ತು ಭೂಗತ ಲೋಕದ ಸೇಡು ಮತ್ತು ಸೆಡವುಗಳು. ಬೆಂಗಳೂರಿನ ದಂಧೆಗಳು ಭೂಗತ ಲೋಕದ ಐದು ಫ್ಯಾಮಿಲಿಗಳ ನಡುವೆ ಹರಿದು ಹಂಚಿ ಹೋಗಿರುತ್ತವೆ. ಅವರೆಲ್ಲರಿಗೂ ಇರುವ ಮುಖ್ಯಸ್ಥ, ಡಾನ್ ಚಿನ್ನ ಮಾದಿರೆಡ್ಡಿ ಅಲಿಯಾಸ್ ದೊಡ್ಡೋರು ಅಲಿಯಾಸ್ ದಿ ಗಾಡ್‌ಫಾದರ್. ಅವರ ಮೇಲೆ ಅನಿರೀಕ್ಷಿತವಾಗಿ ಆಗುವ ಅಟ್ಯಾಕ್ ಬೆಂಗಳೂರನ್ನು ನಡುಗಿಸುತ್ತದೆ. ಅಲ್ಲಿಂದ ಕಾದಂಬರಿಯು ಹೊಸದಾಗಿ ಆರಂಭವಾಗುತ್ತದೆ. ಪಾತಕ ಲೋಕದಲ್ಲಿರುವ ಪ್ರಾಮಾಣಿಕತೆ, ನಿಷ್ಠೆ-ನಿಷ್ಟೂರತೆಗಳು ಕಾದಂಬರಿ ಸಾಗಿದಂತೆ ಕಾಣಸಿಗುತ್ತವೆ. ನಾವು ನೋಡಿರದ ಲೋಕವೊಂದಕ್ಕೆ ಬೆಳಗೆರೆರವರು ಕರೆದುಕೊಂಡು ಹೋಗುತ್ತಾರೆ ಎಂದರೂ ಅದು ಪ್ರಾಯಶಃ ತಪ್ಪಾಗುವುದಿಲ್ಲ. ಅಟ್ಯಾಕ್ ನಡೆಯಲು ಕಾರಣಗಳನ್ನು ದೊಡ್ಡವರ ಫ್ಯಾಮಿಲಿಯವರು, ಅವರ ಬಲಗೈ ಬಂಟನಂತಿದ್ದ ಜಿಮ್ಮಿಯೊಂದಿಗೆ ಹುಡುಕುತ್ತಾರೆ. ಕಾರಣಗಳು ಸಿಗುತ್ತವೆ ಕೂಡ.
ಪುಸ್ತಕದುದ್ದಕ್ಕೂ ನಡೆಯುವ ಕೋಲ್ಟ್ ಬ್ಲಡೆಡ್ ಮರ್ಡರ್‌ಗಳು ಅವರ ಲೋಕದ ನಿಯಮಾವಳಿಗಳ ಪ್ರಕಾರ ನೈತಿಕವೆನಿಸುತ್ತವೆ. ಕೆಲವನ್ನು ಹೊರತು ಪಡಿಸಿ!!! ಯಾರು ಉಳಿದರು ಯಾರು ಅಳಿದರು ಬೆಂಗಳೂರಿನ ಡಾನ್‌ಗಿರಿ ಯಾರಿಗೊಲಿಯಿತು. ನಂತರ ಏನಾಯಿತು?
ದೊಡ್ಡವರ ಕಡೆಯವರು ಸೇಡಿಗಾಗಿ ಹವಣಿಸುತ್ತಾರೆ. ಹಿರಿಯ ಮಗ ಕೋಪಿಷ್ಟ, ಎರಡನೆಯವನು ಫ್ಯಾಮಿಲಿಗೆ ಸೇರಿಲ್ಲವೇನೋ ಎನಿಸಿದರೆ ಮೂರನೆಯ ಮಗ ಮಿಲಿಟರಿ ಸೇರಿರುತ್ತಾನೆ. ಕ್ಲೆಮೆಂಟ್, ಕಿರೀಟಿ, ನಚ್ಚಿರೆಡ್ಡಿ, ಚಂದ್ರಹಾಸ ನಾಯ್ಡು ಮುಂತಾದ ಪಾತ್ರಗಳು ಕಾದಂಬರಿಯತಿರುವುಗಳಿಗೆ ಅವಶ್ಯಕವೆನಿಸುತ್ತಾರೆ. ಲೋಕಿ ಎಂಬ ಹೆಸರಿನ ಫೀಲ್ಡರ್ ಕುರಿತು ಮೊದಮೊದಲ ಪುಟಗಳಲ್ಲಿ ಓದುವಾಗ ರೌಡಿಸಂನ ಬಗ್ಗೆ ವಿಶೇಷ ಆಕರ್ಷಣೆ ಉಂಟಾಗುತ್ತದೆ. ಅವರ ಚಲನ ವಲನಗಳು, ಮೈಯೆಲ್ಲಾ ಕಣ್ಣಾಗಿರುವ ರೀತಿ ಮತ್ತಿತರ ವಿಷಯಗಳು ಆ ವೃತ್ತಿಯೆಡೆಗೆ ಸೆಳೆತವನ್ನುಂಟು ಮಾಡುತ್ತವೆ. ಲೋಕಿಯ ಪಾತ್ರದ ಇರುವಿಕೆ ತುಸು ಚಿಕ್ಕದಾಯಿತೇನೋ ಎಂಬ ಸಣ್ಣ ಕೊರಗು ಉಳಿದುಹೋಯಿತು.
ಕೊನೆ ಕೊನೆಗೆ ಪಾತಕ ಲೋಕದಲ್ಲಿ ಕೇವಲ ರಕ್ತಪಾತವಿಲ್ಲ. ಇದ್ದರೂ ಪ್ರತಿ ಹನಿ ರಕ್ತಕ್ಕೂ ಅಲ್ಲಿ ಲೆಕ್ಕವಿರುತ್ತದೆ, ಸ್ಟ್ರಾಂಗ್ ಪ್ರೊವೋಕಿಂಗ್ ಇರುತ್ತದೆ ಎಂಬುದು ತಿಳಿಯುತ್ತದೆ. ಕಾದು ಹೊಡೆಯುವ ಬುದ್ಧಿವಂತಿಕೆ ಇರುತ್ತದೆ ಪಾತಕಿಗಳಲ್ಲಿ. ಅಂಥ ಬುದ್ದಿವಂತನೊಬ್ಬ ಗನ್ನು ಹಿಡಿದು ನಿಂತರೇ ಏನೆಲ್ಲಾ ನಡೆಯುತ್ತದೆ ಎಂಬುದು ತಿಳಿಯಲು ಪುಸ್ತಕ ಓದಿ. ಆ ಬುದ್ದಿವಂತ ಪಾತಕಿಯ ಹೆಸರು - "ಕಾರ್ತವೀರ್ಯಾರ್ಜುನ ರೆಡ್ಡಿ"
- ಅಭಿ.
ಕೃಪೆ https://www.goodreads.com/
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.