ಲಿಬಿಯಾ ಡೈರಿ

ಲಿಬಿಯಾ ಡೈರಿ

Regular price
$4.99
Sale price
$4.99
Regular price
Sold out
Unit price
per 
Shipping does not apply

ಮೌಮೂರ್ ಗಡಾಫಿಯ ಕೆಲವು ಚಿತ್ರಗಳನ್ನು ಬಿಡಿಸಿಟ್ಟಿರುವ ಈ ಪುಸ್ತಕ ಕನ್ನಡಕ್ಕೆ ವಿಶಿಷ್ಟವಾದುದು; ಓದುಗರಿಗೆ ಹೊಸ ವಿಷಯಗಳನ್ನು ಪರಿಚಯಿಸುತ್ತದೆ.

ಮೌಮೂರ್ ಗಡಾಫಿ ಒಬ್ಬ ಸಾಮ್ರಾಜ್ಯಶಾಹಿ ವಿರೋಧಿ ಆಡಳಿತಗಾರ; ಇತ್ತ ಎಡಪಂಥೀಯನೂ ಅಲ್ಲದ ಅತ್ತ ಬಲಪಂಥೀಯನೂ ಅಲ್ಲದ ಎಡಬಿಡಂಗಿ ವ್ಯಕ್ತಿ ಎಂದೇ ಕೆಲವರು ಅವನನ್ನು ಗುರುತಿಸುತ್ತಾರೆ. ಅಮೆರಿಕಾದ ಏಕಾಧಿಪತ್ಯವನ್ನು ವಿರೋಧಿಸಿದ ಫಿಡೆಲ್ ಕ್ಯಾಸ್ಟ್ರೊ, ಚೆ ಗುವಾರರಂತೆಯೇ ಗಡಾಫಿಯೋ ವಸಾಹತುಶಾಹಿ ಪರವಾಗಿದ್ದ ತನ್ನ ರಾಷ್ಟ್ರದ ಆಡಳಿತಗಾರರ ವಿರುದ್ಧ ಹೋರಾಡಿ ದೇಶದ ಅಧ್ಯಕ್ಷನಾಗಿದ್ದು.

ಜಗತ್ತನ್ನು ಆಳಿದ ಸರ್ವಾಧಿಕಾರಿಗಳಲ್ಲಿ ಹಿಟ್ಲರ್, ಮುಸ್ಸೊಲಿನಿಯ ಸಾಲಿಗೆ ಲಿಬಿಯಾದ ಮೊಹಮ್ಮದ್ ಗಢಾಫಿ ಕೂಡ ಸೇರುತ್ತಾನೆ. ಆದರೆ ಮೊಹಮ್ಮದ್ ಗಡಾಫಿಯ ಬಗೆಗೆ ಒಳ್ಳೆಯ ಮಾತುಗಳನ್ನು ಕೇಳಿದ್ದಕ್ಕಿಂತ ಅವನ ಅವಗುಣಗಳ ಕುರಿತು ಕೇಳಿದ್ದೆ ಹೆಚ್ಚು. ಇಂತಹದ್ದೊಂದು ಸಂದರ್ಭದಲ್ಲಿ ಉದಯ ಇಟಗಿಯವರು ಬರೆದ ಲಿಬಿಯಾ ಡೈರಿ ಹೆಚ್ಚು ಮಹತ್ವವೆನಿಸುತ್ತದೆ.

ಈ ಗಡಾಫಿ ಎಂದರೆ ಯಾರು?

ಹಾಗೆ ನೋಡಿದರೆ ಮೊಹಮ್ಮದ್ ಗಡಾಫಿ ಬಗ್ಗೆ ಈ ಪ್ರಪಂಚ ಏನೇನು ಹೇಳುತ್ತಿದೆಯೋ ಅವೆಲ್ಲವೂ ನಿಜ. ಆದರೆ ಅವಷ್ಟೇ ಅಲ್ಲ.

ಅವನೊಬ್ಬ ಬಹು ದೊಡ್ಡ ಕ್ರೂರ ಸರ್ವಾಧಿಕಾರಿ, ಆದರೆ ಅಷ್ಟೇ ತಿಕ್ಕಲು ಮನುಷ್ಯ; ಅವನೊಬ್ಬ ಬಹು ದೊಡ್ಡ ಚಾಣಾಕ್ಷ, ಆದರೆ ಅಷ್ಟೇ ಹುಂಬ; ಅವನೊಬ್ಬ ಬಹು ದೊಡ್ಡ ಮುತ್ಸದ್ಧಿ, ಆದರೆ ಅಷ್ಟೇ ಆದ್ರ ಭಾವನೆಯುಳ್ಳ ಮಾನವಂತ; ಜಗತ್ತಿನ ಭೂಪಟದಲ್ಲಿ ಹೇಳ ಹೆಸರಿಲ್ಲದಂತೆ ಒಂದು ಸಣ್ಣ ಚುಕ್ಕೆಯಾಗಿ ಮಕಾಡೆ ಮಲಗಿದ್ದ ಲಿಬಿಯಾ ಎಂಬ ದೇಶವನ್ನು ಜಗತ್ತೇ ಬೆರಗಾಗಿ ನೋಡುವಂತೆ ಎತ್ತಿ ಕಟ್ಟಿ ಉತ್ತುಂಗದಲ್ಲಿ ನಿಲ್ಲಿಸಿದ ಗಟ್ಟಿವಂತ; ಆದರೆ ತನ್ನ ಜನರಿಂದಲೇ ಅತ್ಯಂತ ಹೀನಾಯವಾಗಿ ಗತಿಯಿಲ್ಲದವನಂತೆ ರಸ್ತೆಯಲ್ಲಿ ಅನಾಥವಾಗಿ ಕೊಲ್ಲಲ್ಪಟ್ಟ ಹತಭಾಗ್ಯ!

ಇವು ಬಹಿರಂಗ ಸತ್ಯವೂ ಹೌದು, ಆಂತರೀಕ ಸತ್ಯವೂ ಹೌದು.

ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ ಗಡಾಫಿಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಅವನೊಬ್ಬ ಸರ್ವಾಧಿಕಾರಿಯಾಗಿಯೂ ಉತ್ತಮ ಜನನಾಯಕನಾಗಿದ್ದನೆಂಬುದಕ್ಕೆ ಪುರಾವೆ ಎಲ್ಲಿದೆ? ಅವನು ಹೇಗೆ ಲಿಬಿಯಾವನ್ನು ಒಂದು ಸುಭೀಕ್ಷ, ಸಧೃಡ ದೇಶವಾಗಿ ಕಟ್ಟಿದ? ಇಂತಹ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಏಳುವುದು ಸಹಜ. ಇವೆಲ್ಲವೂ ಅರ್ಥವಾಗಬೇಕಾದರೆ ಲಿಬಿಯಾ ದೇಶದ ಚಾರಿತ್ರಿಕ ಹಿನ್ನಲೆಯನ್ನು ಸ್ವಲ್ಪ ಮಟ್ಟಿಗಾದರೂ ಶೋಧಿಸಲೇಬೇಕಾಗುತ್ತೆ.

ಪ್ರಾಯಶಃ ಎಲ್ಲರಿಗೂ ಗೊತ್ತಿದ್ದ ಹಾಗೆ ಲಿಬಿಯಾ ಇಟಲಿಯ ವಸಾಹತು ಆಗಿತ್ತು. ಎರಡನೇ ಮಹಾ ಯುದ್ಧದ ನಂತರ ತನ್ನದೇ ಆಂತರೀಕ ಸಮಸ್ಯೆಗಳಿಗೆ ಗುರಿಯಾದ ಇಟಲಿ, ಲಿಬಿಯಾ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸಿತು. 1951ರಲ್ಲಿ ಸ್ವತಂತ್ರ ರಾಷ್ಟ್ರವಾದ ಲಿಬಿಯಾ ಇದ್ರಿಸ್ ಎಂಬ ರಾಜನ ಆಳ್ವಿಕೆಗೆ ಒಳಪಟ್ಟಿರುತ್ತೆ. 1969ರಲ್ಲಿ ರಾಜ ಇದ್ರಿಸ್‍ನನ್ನು ಕೆಳಗಿಳಿಸಿ, ಮೊಹಮ್ಮದ್ ಗಡಾಫಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಅವನಿಗೆ ಕೇವಲ ಇಪ್ಪತ್ತೇಳು ವರುಷ!

ಲಿಬಿಯಾದಲ್ಲಿ ಅಪಾರವಾದ ನೈಸರ್ಗಿಗ ಸಂಪತ್ತೂ, ತೈಲ ನಿಕ್ಷೇಪಗಳಿದ್ದರೂ ಅವೆಲ್ಲಾ ಅಮೆರಿಕಾ ಮತ್ತಿತರ ಬಲಾಢ್ಯ ರಾಷ್ಟ್ರಗಳ ಅಧಿಪತ್ಯದಲ್ಲೇ ಇರುತ್ತಿತ್ತಾದ್ದರಿಂದ ಲಿಬಿಯಾದ ಜನತೆ ಕಡು ಬಡತನದಲ್ಲೇ ಬದುಕುತ್ತಿರುತ್ತಾರೆ. ಗಡಾಫಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೇ ಮಾಡಿದ ಮೊದಲ ಕೆಲಸ, ತನ್ನ ದೇಶದ ತೈಲ ನಿಕ್ಷೇಪವನ್ನು ಕೊಳ್ಳೆ ಹೊಡೆಯುತ್ತಿದ್ದ ಅಮೆರಿಕಾದ ಕೈ ಕೆಳಗಿದ್ದ ಕಂಪನಿಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ. ತೈಲ ದರವನ್ನು ಮರು ಪರಿಶೀಲಿಸಿ ನಿಗದಿತ ಬೆಲೆಯನ್ನು ನಿರ್ಧರಿಸುತ್ತಾನೆ. ಜೊತೆಗೆ, ತನ್ನ ನೆಲೆಯಲ್ಲಿ ತಳವೂರಿದ್ದ ಅಮೆರಿಕಾ ಮಿಲಿಟರಿ ಪಡೆಯನ್ನು ದೇಶದಿಂದ ಹೊರಗಟ್ಟುತ್ತಾನೆ.

ಇದು ಸಹಜವಾಗಿಯೇ ಅಮೆರಿಕಾದವರನ್ನು ರೊಚ್ಚಿಗೆಬ್ಬಿಸುತ್ತದೆ. ಆಗ ಅಮೆರಿಕಾ ಲಿಬಿಯಾ ಮೇಲೆ ಆರ್ಥಿಕ ದಿಗ್ಭಂಧನ, ರಾಜಕೀಯ ಒತ್ತಡ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಸಲ್ಲದ ಆರೋಪ ಹೇರುತ್ತಾ ಬರುತ್ತೆ.

ಇಷ್ಟೆಲ್ಲಾ ಬಿಕ್ಕಟ್ಟಿನ ನಡುವೆಯೂ ಗಡಾಫಿ ತನ್ನ ಚಾಣಾಕ್ಷತನದಿಂದ ಅಮೆರಿಕಾದಂತಹ ಅಮೆರಿಕಾವನ್ನೇ ಎದುರಿಸಿ, ಅದಕ್ಕೆ ಸೆಡ್ಡು ಹೊಡೆದು ನಿಲ್ಲುವಷ್ಟು ಬೆಳೆದು ನಿಂತಿದ್ದನ್ನು ಈ ಪುಸ್ತಕ ಹಂತ ಹಂತವಾಗಿ ವಿವರಿಸುತ್ತಾ ಹೋಗುತ್ತದೆ. ಜೊತೆಗೆ ಹಲವು ಅಚ್ಚರಿಯ ಸಂಗತಿಗಳನ್ನೂ ಈ ಪುಸ್ತಕ ನಮಗೆ ನೀಡುತ್ತಾ ಹೋಗುತ್ತದೆ.

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !