ಮೋಡದೊಡನೆ ಮಾತುಕತೆ: ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ’ದ ಕನ್ನಡ ಭಾವಾನುವಾದ (ಇಬುಕ್)

ಮೋಡದೊಡನೆ ಮಾತುಕತೆ: ಹೊಸಗಾಲದ ಆಖ್ಯಾನ-ವ್ಯಾಖ್ಯಾನ ಸಮೇತ ಕಾಳಿದಾಸನ ‘ಮೇಘದೂತ’ದ ಕನ್ನಡ ಭಾವಾನುವಾದ (ಇಬುಕ್)

Regular price
$8.00
Sale price
$8.00
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana


ಮೇಘದೂತ ಕಾವ್ಯವು ತನ್ನ ಹಿನ್ನೆಲೆಯಲ್ಲಿ ಇರಬಹುದಾದ ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳನ್ನು ಅಡಗಿಸಿ ಇಟ್ಟುಕೊಂಡಿದೆ; ಮಾತ್ರವಲ್ಲ, ತನ್ನ ಕಾವ್ಯಸ್ವರೂಪದಿಂದಾಗಿ ಅಂಥ ಹಿನ್ನೆಲೆಗಳನ್ನು ಹುಡುಕಿ ತೆಗೆಯುವ ಆಧುನಿಕ ವಿಮರ್ಶಾಕ್ರಮಗಳಿಗೂ ಪ್ರತಿರೋಧಕವಾಗಿದೆ. ಆದರೆ, ಮೇಲ್ಕಂಡ ಉಲ್ಲೇಖವು ಇಂಥ ಪ್ರತಿರೋಧವನ್ನು ಉಲ್ಲಂಘಿಸಿ, ಮೇಘದೂತದಂಥ ‘ನಿರುದ್ದಿಶ್ಯ ರಸಸೃಷ್ಟಿ’ಯ ಕಾವ್ಯದ ಒಳಗೂ ತನ್ನ ಕಾಲಕ್ಕೆ ಸಲ್ಲುವ ಒಂದು ಸಾಂಸ್ಕೃತಿಕ ಉಪಯುಕ್ತತೆಯನ್ನು ಹುಡುಕಿ ತೆಗೆಯುತ್ತದೆ. ಮೇಲಿನ ಮಾತು ಸೂಚಿಸುವಂತೆ, ಒಂದೂವರೆ ಸಹಸ್ರಮಾನದ ಬಳಿಕ ಬಂದ ಭಾರತದ ಇನ್ನೊಬ್ಬ ಮೇರುಕವಿಗೆ ಅದು ಸ್ವತಃ ತನ್ನ ಕಾಲದ ‘ಸಾಂಸ್ಕೃತಿಕ ವಿರಹ’ವೊಂದರ ಪರಿಹಾರಕ್ಕಾಗಿ ನಡೆಸಬಹುದಾದ ಯಾತ್ರೆಗೆ ಒಂದು ರೂಪಕವಾಗಿಬಿಟ್ಟಿದೆ!

ಈ ಉತ್ತರ ನಮಗೆ ಹೊಸ ದಾರಿ ತೋರಿಸಬೇಕು. ಹಳೆಗಾಲದ ಪಠ್ಯಗಳನ್ನು ನಮ್ಮ ಕಾಲದ ಒಂದೊಂದು ತಲೆಮಾರೂ ಹೀಗೆ ತನ್ನದೇ ಹುಡುಕಾಟದ ಅಂಗವಾಗಿ ಮರು-ಆವಿಷ್ಕಾರ ಮಾಡಿಕೊಳ್ಳುವುದು ತುಂಬ ತುರ್ತಾಗಿ ನಡೆಯಬೇಕಾದ ಒಂದು ಸಾಂಸ್ಕೃತಿಕ ಅಗತ್ಯ ಎಂಬ ನಂಬುಗೆಯನ್ನು ಇದು ಉದ್ದೀಪಿಸಬೇಕು. ಹೀಗೆ ಮಾಡಿದರೆ ಸರಿಯೋ ಹೀಗೆ ಮಾಡಿದರೆ ತಪ್ಪೋ ಎಂದೆಲ್ಲ ಚಿಂತಿಸುತ್ತ ಕೂರುವ ಬದಲು, ನಮ್ಮ ಅಂತರ್ಗತ ಪ್ರೇರಣೆಗಳಿಂದ ತಕ್ಷಣಕ್ಕೆ ನಮಗೆ ಸರಿಕಂಡಂತೆ ಇಂಥ ಪಠ್ಯಗಳನ್ನು ಜೀವಂತಗೊಳಿಸಿಕೊಳ್ಳುವ ಪ್ರಯೋಗಕ್ಕೆ ಈಗ ನಮ್ಮನ್ನು ನಾವು ಒಡ್ಡಿಕೊಳ್ಳುವ ಅಗತ್ಯವಿದೆ. ಇಲ್ಲವಾದರೆ, ಪುತಿನ ಅವರು ಪ್ರಾಪ್ತಿಭೋಗಾಪೇಕ್ಷೆ ಎಂದು ಕರೆಯುವ ಗತಕಾಲದ ಯಾಂತ್ರಿಕ ಅನುಕರಣೆಯ ಉರುಳಿಗೆ ನಾವು ಸಿಲುಕುತ್ತೇವೆ; ನಾವೇ ತೋಡಿಕೊಂಡ ಸಂಸ್ಕೃತಿಯೆಂಬ ಹೆಸರಿನ ಬಾವಿಯಲ್ಲಿ ಬೀಳುತ್ತೇವೆ. ಅಥವಾ, ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತ, ನಮ್ಮದೇ ನಾಡಿನ ನುಡಿಗಟ್ಟುಗಳ ಶಕ್ತಿಯನ್ನೂ ಕಾವ್ಯ ಕಟ್ಟುವ ಕ್ರಮಗಳನ್ನೂ ಸಂಪೂರ್ಣ ಮರೆತು, ಎರವಲು ನುಡಿಗಳಲ್ಲಿ ಅಂತರ್-ಪಿಶಾಚಿಗಳಂತೆ ಚರ್ವಿತ ಚರ್ವಣ ಮಾಡುತ್ತ ಕಾಲಯಾಪನೆ ಮಾಡುತ್ತೇವೆ.

- ಅಕ್ಷರ ಕೆ.ವಿ.


ಮೋಡಕ್ಕೆ ಮಾತು ಬರುತ್ತಾ, ಮೋಡದ ಭಾಷೆ ಇದೆಯಾ, ಎಂಬ ಸಂದೇಹ ನಮ್ಮ ವಾಸ್ತವ ಪ್ರಜ್ಞೆಯ ವಾಚ್ಯಬುದ್ಧಿಗೆ ಇದ್ದೇ ಇದೆ. ಬೃಹದಾರಣ್ಯಕ ಉಪನಿಷತ್ತಿನ ಆಖ್ಯಾಯಿಕೆಗೆ ಈ ಸಂದೇಹ ಇಲ್ಲ. ಒಮ್ಮೆ ದೇವತೆ ಮಾನವ ಅಸುರ ಮೂವರೂ ಪ್ರಜಾಪತಿಯಿದ್ದಲ್ಲಿಗೆ ಹೋಗಿ, ನಮಗೆ ಹಿತನುಡಿಯನ್ನು ನುಡಿ ಎಂದು ಕೇಳಿಕೊಂಡರಂತೆ. ಆತ ‘ದ’ ಎಂದು ನುಡಿದು ಅರ್ಥವಾಯಿತೆ ಎಂದೂ ಕೇಳಿದ. ಅವರವರಿಗೆ ಬೇಕಾದ ಅರ್ಥ ಅವರವರಿಗಾಯಿತು. ದ ಎಂದರೆ ದಮ-ಇಂದ್ರಿಯನಿಗ್ರಹ ಎಂದು ದೇವತೆಗಳೂ, ದಾನ-ಹಂಚಿಕೊಳ್ಳುವುದು ಎಂದು ಮನುಜರೂ, ದಯೆ-ಹಿಂಸಾವಿರತಿ ಎಂದು ಅಸುರರೂ ಅರ್ಥಮಾಡಿಕೊಂಡರು.

ಈ ಆಖ್ಯಾಯಿಕೆಯ ಸಮಾಪನದಲ್ಲಿ ಉಪನಿಷದೃಷಿ ಹೇಳುತ್ತಾನೆ: ತದೇತದೇವೈಷಾ ದೈವೀ ವಾಗನುವದತಿ ಸ್ತನಯಿತ್ನುಃ ದ ದ ದ ಇತಿ ದಾಮ್ಯತ ದತ್ತ ದಯಧ್ವಂ ಇತಿ ತದೇತತ್ ತ್ರಯಂ ಶಿಕ್ಷೇತ್. ‘ಪ್ರತಿ ವರ್ಷವೂ ಮುಂಗಾರು ಮೋಡವು (ಸ್ತನಯಿತ್ನು) ದ ದ ದ ಎಂಬ ಈ ಬೆಳಗುವ ಮಾತನ್ನು ಆಡುತ್ತಿದೆ, ನಿಗ್ರಹ ದಾನ ದಯೆ ಈ ಮೂರನ್ನು ಎಲ್ಲರೂ ಕಲಿಯಬೇಕು.’ ಮೇಘದೂತದಲ್ಲಿ ಯಕ್ಷನ ಹೆಂಡತಿ ಮೋಡಕ್ಕೆ ‘ಭ್ರಾತೃಜಾಯೆ’ (ಅತ್ತಿಗೆ), ಸಂತಪ್ತರಿಗೆ ತಂಪೆರೆಯುವ ದಯೆ, ಅದಕ್ಕಾಗಿ ಜಲದಾನ. ‘ಸಂತಪ್ತಾನಾಂ ತ್ವಮಸಿ ಶರಣಂ ತತ್ಪಯೋದ’ ಮೋಡದ ಮತ್ತೊಂದು ಹೆಸರು ಜಲದ ಅಥವಾ ಪಯೋದ. ನೈತಿಕತೆಯೇ ಅಧ್ಯಾತ್ಮದ ಮೆಟ್ಟಿಲು, ನೈತಿಕತೆಯ ವಿಸ್ತಾರವೆ ಅಧ್ಯಾತ್ಮ ಎನ್ನುವುದನ್ನು ಹೇಳಲು ಹೊರಟ ಋಷಿಗೆ ಮೋಡದ ಮಾತು ಕೇಳುತ್ತದೆ; ತಿಳಿಯುತ್ತದೆ. ಆತನಿಗೆ ವಾಸ್ತವ ಅವಾಸ್ತವದ ಗೊಡವೆ ಇಲ್ಲ; ಗೋಡೆಯೂ ಇಲ್ಲ.

- ಡಾ. ಶ್ರೀರಾಮ ಭಟ್

 

 

ಪುಟಗಳು: 218

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !